ಪಾಕಿಗಳಿಗೆ ಮಿಡಿಯುವ ಶಾರುಖ್, ಈಗ ಎಲ್ಲಿ?
ಬೆಂಗಳೂರು, ಜೂ.26: ಪಾಕಿಸ್ತಾನದಲ್ಲಿ ಪ್ರವಾಹವಾದರೆ, ತನ್ನ ಮನೆಗೆ ನೀರು ನುಗ್ಗಿದ್ದಂತೆ ವಿಲವಿಲ ಒದ್ದಾಡಿದ್ದ ಕಿಂಗ್ ಖಾನ್ ಶಾರುಖ್ ಈಗ ಭಾರತದಲ್ಲಿನ ಜಲ ಪ್ರಳಯದ ಬಗ್ಗೆ ಮೌನವಾಗಿರುವುದೇಕೆ? ಅಭಿಮಾನಿಗಳ ಪಾಲಿಗೆ ದೇವರಾಗಿರುವ ಕ್ರಿಕೆಟರ್ ಗಳು ಕೋಟಿ ಕೋಟಿ ಹಣ ಗೆದ್ದರೂ ಬಿಡುಗಾಸು ಬಿಚ್ಚುತ್ತಿಲ್ಲ ಏಕೆ?
ಉತ್ತರಾಖಂಡ್ ದ ಕೇದಾರನಾಥನ ಕಾಣಲು ಹೋಗಿ ಸಂತ್ರಸ್ತರಾದವರಿಗೆ ನೆರವಿನ ಹಸ್ತ ಚಾಚದೆ ಕೈ ಕಟ್ಟಿಕೊಂಡಿರುವ ಗಣ್ಯಾತಿಗಣ್ಯರು ಒಂದೆಡೆ, ಸಂತ್ರಸ್ತ್ರರಿಗೆ ನೆರವು ನೀಡಲು ಓಡೋಡಿ ಬರುತ್ತಿರುವ ಪುಢಾರಿಗಳು ಇನ್ನೊಂದೆಡೆ, ಇವರೆಲ್ಲರ ನಡುವೆ ಜೀವದ ಹಂಗು ತೊರೆದು, ಜಾತಿ ಮತ ಪಂಥ ಧರ್ಮದ ಎಲ್ಲೆ ಮೀರಿ ಹಗಲಿರುಳು ಶ್ರಮಿಸುತ್ತಿರುವ ಯೋಧರ ಶ್ರಮಕ್ಕೆ ಹ್ಯಾಟ್ಸಾಫ್...
ಶಾರುಖ್ ಖಾನ್ 15 ಕೋಟಿ, ಸಚಿನ್ ತೆಂಡೂಲ್ಕರ್ 51 ಲಕ್ಷ, ವಿರಾಟ್ ಕೊಹ್ಲಿ 18 ಲಕ್ಷ, ಯುವರಾಜ್ ಸಿಂಗ್ 23 ಲಕ್ಷ, ಹರ್ಭಜನ್ ಸಿಂಗ್ 10 ಲಕ್ಷ, ಎಂಎಸ್ ಧೋನಿ 75 ಲಕ್ಷ, ರವೀಂದ್ರ ಜಡೇಜ 36 ಲಕ್ಷಗಳನ್ನು ಉತ್ತರಾಖಂಡ್ ರಾಜ್ಯದ ಪ್ರವಾಹ ಸಂತ್ರಸ್ತರಿಗೆ ನೀಡಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲ ತಾಣಗಳಲ್ಲಿ ಓಡಾಡುತ್ತಿದೆ. ಆದರೆ, ಓದುಗರೇ ಇದು ಸತ್ಯವಲ್ಲ. ಹಾಗಾದರೆ ಸತ್ಯ ಏನು? ಕ್ರಿಕೆಟರ್ಸ್, ರಾಜಕಾರಣಿಗಳು, ಸಿನಿಮಾ ಮಂದಿ ನಡೆ ನುಡಿ ಯಾರಿಗೆ ಮಾದರಿ ನೀವೇ ನಿರ್ಧರಿಸಿ..

ಹರ್ಭಜನ್ ಸಿಂಗ್ ದೇಣಿಗೆ
ಈ ಪೈಕಿ ಸ್ವತಃ ಸಂತ್ರಸ್ತರಾಗಿ ಒಂದೆರಡು ಜೀವವನ್ನು ಕೈಲಿ ಹಿಡಿದುಕೊಂಡಿದ್ದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಮಾತ್ರ 10 ಲಕ್ಷ ರು ದೇಣಿಗೆ ನೀಡಿರುವುದಕ್ಕೆ ಅಧಿಕೃತ ದಾಖಲೆಗಳಿವೆ.
ಇತ್ತೀಚೆಗೆ ಇಂಗ್ಲೆಂಡಿನಲ್ಲಿ 12 ಕೋಟಿ ರು ಮೊತ್ತದ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯರ ಪೈಕಿ ಗೋಲ್ಡನ್ ಬ್ಯಾಟ್ ಪಡೆದ ಶಿಖರ್ ಧವನ್ ಅವರು ಸಂತ್ರಸ್ತರ ಬಗ್ಗೆ ಮಾತನಾಡಿದರು.ನನ್ನ ಬಹುಮಾನ ಉತ್ತರಾಖಂಡದಲ್ಲಿರುವ ಸಂತ್ರಸ್ತರಿಗೆ ಅರ್ಪಣೆ ಎಂದರು. ಆದರೆ, ಅವರು ತಮ್ಮ ಚಿನ್ನದ ಬ್ಯಾಟ್ ಅಥವಾ ಬಹುಮಾನದ ಮೊತ್ತವನ್ನು ಉತ್ತರಾಖಂಡ್ ರಾಜ್ಯಕ್ಕಾಗಲಿ, ಪ್ರಧಾನಿ ಅವರ ವಿಪತ್ತು ನಿಧಿಗಾಗಿ ಕಳಿಸಿಕೊಟ್ಟಿರುವ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ.
ಕ್ರಿಕೆಟಿಗರ ಕುಣಿತ ಕಂಡು ಬೆರಗಾದ ಆಂಗ್ಲರು
ಇಂಗ್ಲೆಂಡಿನಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಗೆದ್ದ ಎಂಎಸ್ ಧೋನಿ ಪಡೆಯ ಸಾಧನೆಯನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಈ ಸಾಧನೆಗೆ ಟೀಂ ಇಂಡಿಯಾ ಅರ್ಹವಾಗಿದೆ ನಿಜ.
ಆದರೆ, ಒಂದಿಷ್ಟು ಸಾಮಾಜಿಕ ಕಳಕಳಿ, ಸಂಸ್ಕಾರ, ಸಂಸ್ಕೃತಿ ಇಲ್ಲದಂತೆ ಕಪ್ ಪಡೆದ ಮೇಲೆ ಗಂಗ್ನಮ್ ನೃತ್ಯ ಮಾಡಿ ಮೈದಾನದಲ್ಲೇ ಕುಣಿದು ಕುಪ್ಪಳಿಸಿದ ಟೀಂ ಇಂಡಿಯಾ ನೋಡಿ ಆಂಗ್ಲರ ಪಡೆ ಮುಸಿ ಮುಸಿ ನಕ್ಕಿದೆ. ಪ್ರವಾಹ ಸಂತ್ರಸ್ತರ ಬಗ್ಗೆ ಧವನ್ ಹೇಳಿದ್ದು ನಿಜವೇ ಎಂದು ಹುಬ್ಬೇರಿಸಿದ್ದಾರೆ.
ಇದು ಸಾಲದ್ದಕ್ಕೆ ರಾತ್ರಿ ಭರ್ಜರಿ ಪಾರ್ಟಿ ಮಾಡಿದ ಟೀಂ ಇಂಡಿಯಾಗೆ ಬಿಸಿಸಿಐ 1 ಕೋಟಿ ರು ಹಂಚಿದೆ. ಒಂದು ಪಂದ್ಯವಾಡದೆ ಬೆಂಚು ಬಿಸಿ ಮಾಡಿ ಬಂದ ವಿನಯ್ ಕುಮಾರ್ ಆದರೂ ಆ ಹಣವನ್ನು ಸಂತ್ರಸ್ತರಿಗೆ ನೀಡಬಹುದಿತ್ತು.

ರಾಜಕೀಯ ಆಟ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಉತ್ತರಾಖಂಡ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದಾಗ ಕಾಂಗ್ರೆಸ್ ಮಾಧ್ಯಮಗಳ ಮುಂದೆ ದೊಡ್ಡ ಗದ್ದಲವನ್ನೇ ಎಬ್ಬಿಸಿದೆ.
ಮೋದಿ ಹೇಳಿಕೆಗೆ ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಛೀಮಾರಿ ಹಾಕಿದೆ. ತಮ್ಮ ರಾಜ್ಯದ ಸಂತ್ರಸ್ತರನ್ನು ಕಾಣಲು ಬರುವ ಹೊರ ರಾಜ್ಯದ ಪ್ರತಿನಿಧಿಗಳಿಗೆ ಉತ್ತರಾಖಂಡ್ ನಿರ್ಬಂಧ ಹೇರಿದೆ.
ವಿವಿಧ ಪಕ್ಷಗಳು ನಾ ಮುಂದು ತಾ ಮುಂದು ಎಂದು ಹಣದ ಹೊಳೆ ಹರಿಸುತ್ತಿದ್ದಾರೆ. ಈ ಹೊಳೆಗೆ ಯಾರು ಅಣೆಕಟ್ಟು ಕಟ್ಟಿ ಎಲ್ಲಿ ಯಾರು ಎತ್ತುತ್ತಾರೋ ಕೇದಾರನಾಥನೇ ಬಲ್ಲ.ಈ ಮಧ್ಯೆ ಆರೆಸ್ಸೆಸ್ ಎಂದಿನಂತೆ ನಿಧಿ ಸಂಗ್ರಹ ಕಾರ್ಯದಲ್ಲಿ ಬ್ಯುಸಿಯಾಗಿದೆ.

ಶಾರುಖ್ ನಡೆ ವಿಚಿತ್ರ
ಪಾಕಿಸ್ತಾನದ ಪರ ಸದಾ ನಿಲ್ಲುವ ಶಾರುಖ್ ವಿರುದ್ದ ಅಂದಿನ ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಖಂಡಿಸಿದರು. 26/11ರ ಹುತಾತ್ಮರ ಪರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಶಾರುಖ್ ಖಾನ್ ಪಾಕಿಸ್ತಾನಿ ಚಾನೆಲ್ ಪರ ಕುಣಿಯಲು ಹೋಗಿದ್ದನ್ನು ಟೀಕಿಸಿದ್ದರು.
ಶಾರುಖ್ ಅವರು ಐಪಿಎಲ್ ನಲ್ಲಿ ಪಾಕ್ ಆಟಗಾರರನ್ನು ಆಡಿಸುವ ಬಗ್ಗೆ ಒಲವು ತೋರಿದ್ದರು. ಮುಂಬೈ ಕ್ರೀಡಾಂಗಣದಲ್ಲಿ ಸಿಬ್ಬಂದಿ ಜತೆ ಜಗಳ ಮಾಡಿಕೊಂಡು ಹೊರ ನೂಕಲ್ಪಟ್ಟ ಶಾರುಖ್ ವಿರುದ್ಧ ಸೇನೆ ಅಂದಿನಿಂದ ಇಂದಿನವರೆಗೂ ಕಿಡಿಕಾರುತ್ತಲೆ ಇದೆ.
ಅದಕ್ಕೆ ತಕ್ಕಂತೆ ಶಾರುಖ್ ಕೂಡಾ ಪಾಕಿಸ್ತಾನ ಪರ ನಿಲುವು ಹಾಗೂ ನಡೆ ಇಡುತ್ತಲೇ ಬಂದಿದ್ದಾರೆ. ಪಾಕಿಸ್ತಾನ ಪ್ರವಾಹ ಸಂತ್ರಸ್ತರಿಗಾಗಿ ಹಣ ಸಂಗ್ರಹಿಸಿದ್ದ ಶಾರುಖ್ ಉತ್ತರಾಖಂಡ್ ಸಂತ್ರಸ್ತರಿಗಾಗಿ ಒಂದು ಟ್ವೀಟ್ ಮಾಡುವಷ್ತು ಮಾತ್ರ ಸಮಯ ಖರ್ಚು ಮಾಡಿದ್ದಾರೆ ಅಷ್ಟೆ.
|
ಶಾರುಖ್ ಟ್ವೀಟ್
ಸಾಮಾಜಿಕ ಜಾಲ ತಾಣ ಟ್ವೀಟರ್ ನಲ್ಲಿ ಸಂತ್ರಸ್ತರಿಗಾಗಿ ನಾನು ಕಂಬನಿ ಮಿಡಿಯುತ್ತೇನೆ. ನೈಸರ್ಗಿಕ ವಿಕೋಪಕ್ಕೆ ಏನು ಮಾಡಲು ಆಗುವುದಿಲ್ಲ. ಪ್ರಕೃತಿ ಮುಂದೆ ನಾವೆಲ್ಲರೂ ಕುಬ್ಜರು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಪ್ರವಾಹ
ಪಾಕಿಸ್ತಾನದಲ್ಲಿ ಭಾರೀ ಪ್ರವಾಹದಿಂದ 14 ಮಿಲಿಯನ್ ಜನರಿಗೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್ 900 ಮಿಲಿಯನ್ ಡಾಲರ್ ನೆರವು ನೀಡಲು ಮುಂದಾಗಿತ್ತು.
ಪ್ರವಾಹಕ್ಕೆ ತುತ್ತಾಗಿರುವ ಸುಮಾರು 1,32,421 ಕಿಲೋಮೀಟರ್ ಹಾಗೂ 1.4 ಮಿಲಿಯ ಎಕರೆ ಬೆಳೆ, 7,23,000 ಮನೆಗಳು ಹಾನಿಗೀಡಾಗಿತ್ತು. 27 ಜನ ಸಾವನ್ನಪ್ಪಿದರು, 82,000 ಮಂದಿ ನಿರ್ಗತಿಕರಾಗಿದ್ದರು. 2005ರ ಭೂಕಂಪದ ನಂತರ 2010ರ ಈ ಪ್ರಕೃತಿ ವಿಕೋಪದಿಂದ ಪಾಕಿಸ್ತಾನ ತತ್ತರಿಸಿತ್ತು.
ಭಾರತದಿಂದ ಆಹಾರ ಧಾನ್ಯ ನೆರವು ಪಡೆಯಲು ಮೊದಲಿಗೆ ಹಿಂಜರಿದ ಪಾಕಿಸ್ತಾನ ನಂತರ ವಿಶ್ವಸಂಸ್ಥೆ ಕಿವಿಮಾತು ಹೇಳಿದ ಮೇಲೆ ತೆಪ್ಪಗಾಗಿತ್ತು. ಒಂದು ಹಂತದಲ್ಲಿ ಪ್ರವಾಹಕ್ಕೆ ಭಾರತವೇ ಕಾರಣ ಎಂದು ದೂಷಿಸಲಾಗಿತ್ತ್ತು. ಇಂಥ ಪರಿಸ್ಥಿತಿಯಲ್ಲೂ ಶಾರುಖ್ ಅವರು ಪಾಕ್ ಪರ ದೇಣಿಗೆ ಸಂಗ್ರಹಿಸಿದ್ದರು,

ಇದು ಶಾರುಖ್ ವಿರುದ್ಧದ ಕರೆ ಅಲ್ಲ
ಕಿಂಗ್ ಖಾನ್ ಶಾರುಖ್ ಜೊತೆಗೆ ಸಲ್ಮಾನ್ ಖಾನ್, ಸಾಮಾಜಿಕ ಕಳಕಳಿ ಮೆರೆಯುವ ಅಮೀರ್ ಖಾನ್, ಅಮಿತಾಬ್ ಬಚ್ಚನ್ ಅವರು ಟ್ವೀಟ್ ಲೋಕ ಬಿಟ್ಟು ಸ್ವಲ್ಪ ಜೇಬಿಗೆ ಕೈ ಹಾಕಿ ದೇಣಿಗೆ ನೀಡಿದರೆ ಇನ್ನೂ ಉತ್ತಮ.
ಉತ್ತರಾಖಂಡ್ ಸಿಎಂ ವಿಜಯ್ ಬಹುಗುಣ ಅವರ ಪ್ರಕಾರ ಸಾವಿನ ಸಂಖ್ಯೆ 1000 ದಾಟಲಿದೆ. ಗಂಗೋತ್ರಿ, ಜೋಶಿಮಠ, ಬದರಿನಾಥ ಬಳಿ ಇನ್ನೂ 10, 000 ಜನ ಸಿಲುಕಿದ್ದಾರೆ.
ತೆಲುಗು ನಟ ಪವನ್ ಕಲ್ಯಾಣ್ 20 ಲಕ್ಷ, ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ 50 ಲಕ್ಷ ದೇಣಿಗೆ ನೀಡಿದ ವರದಿಗಳಿವೆ. ಸಿನಿರಂಗದ ಗಣ್ಯಾತಿಗಣ್ಯರು ಕೈತುಂಬಾ ದೇಣಿಗೆ ನೀಡಿದರೆ ಇತರರು ಮುಂದೆ ಬರುತ್ತಾರೆ ಎಂಬುದಷ್ಟೇ ನಮ್ಮ ಉದ್ದೇಶ












Click it and Unblock the Notifications