ಮದುವೆ ಹಿಂದಿನ ದಿನ ವರ ನಾಪತ್ತೆ, ವಧು ಕಂಗಾಲು

ವರ ಚಿಕ್ಕಪೇಟೆಯ ಸಂಪತ್ ಕುಮಾರ್ ಎಲ್ಲಿ ಹೋಗಿದ್ದಾನೆ? ಯಾಕೆ ಹೋಗಿದ್ದಾನೆ? ಮರಳಿ ಬರ್ತಾನೋ ಇಲ್ಲವೋ ಎಂಬುದು ಯಾವುದೂ ಖಾತ್ರಿಯಾಗಿಲ್ಲ. ಈ ಕಡೆಗೆ, ಆಯತಾ ಸಮಯದಲ್ಲಿ ವರ ಕೈಕೊಟ್ಟಿದ್ದರಿಂದ ತನ್ನ ಬಾಳೇ ಹಾಳಾಯಿತು ಎಂದು ವಧು ಔರಾದ್‌ನ ದೀಪಿಕಾ ಕಣ್ಣೀರಿಡುತ್ತಿದ್ದಾಳೆ.
ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸಂಪತ್ ಕುಮಾರ್ ಮತ್ತು ದೀಪಿಕಾ ಮದುವೆ ಬೀದರ್ ನಗರದಲ್ಲಿರುವ ಎಸ್.ಆರ್.ಎಸ್. ಫಂಕ್ಷನ್ ಹಾಲ್‌ನಲ್ಲಿ ಬುಧವಾರ 12.30ಕ್ಕೆ ನಿಗದಿಯಾಗಿತ್ತು. ಮಂಗಳವಾರ ವರೋಪಚಾರ ಸ್ವೀಕರಿಸಿ, ಖುಷಿಯಾಗಿಯೇ ಇದ್ದ ಸಂಪತ್ ಕುಮಾರ್ ರಾತ್ರಿ 11.30ರ ಸುಮಾರಿಗೆ ನಾಪತ್ತೆಯಾಗಿದ್ದಾನೆ.
ಎಸ್.ಆರ್.ಎಸ್ ಫಂಕ್ಷನ್ ಹಾಲಿನಲ್ಲಿ ಮದುವೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಲಗ್ನಕ್ಕೆ ಬೇಕಾದ ಎಲ್ಲ ಸರಂಜಾಮುಗಳನ್ನು ತರಿಸಲಾಗಿತ್ತು. ಮಂಟಪ ಅಲಂಕರಿಸಲಾಗಿತ್ತು, ಮುಂದುಗಡೆ ತಳಿರು ತೋರಣವನ್ನೂ ಕಟ್ಟಲಾಗಿತ್ತು. ಈಗ ವರನೇ ಇಲ್ಲದ್ದರಿಂದ ಬಾಳೆಗಿಡ ಒಣಗಿ ನಿಂತಂತಾಗಿದೆ, ತೆಂಗಿನ ಕಾಯಿ ನಿದ್ದೆ ಮಾಡುತ್ತಿದೆ.
ವರನ ನಾಪತ್ತೆಯಿಂದ ವಿಚಲಿತರಾಗಿರುವ ವಧುವಿನ ತಂದೆ ಶಂಕರ್ ಅವರು ಬೀದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವರನ ಕಡೆಯವರಿಗೆ 50 ಸಾವಿರ ರು. ವರದಕ್ಷಿಣೆಯನ್ನೂ ಕೊಡಲಾಗಿತ್ತು, ಉತ್ತಮವಾಗಿ ಮದುವೆ ಮಾಡಿಕೊಡುವುದಾಗಿ ವಾಗ್ದಾನವನ್ನೂ ನೀಡಲಾಗಿತ್ತು. ಆದರೂ, ವರ ಏಕೆ ಪರಾರಿಯಾದ ಎಂಬುದು ತಿಳಿಯದಾಗಿದೆ ಎಂದಿದ್ದಾರೆ.












Click it and Unblock the Notifications