ಪೊಲೀಸರು, ಕುಡುಕರ ನಡುವೆ ಗುಂಡಿನ ಚಕಮಕಿ

ಲಗ್ಗರೆ ಬಳಿಯ ಧನಲಕ್ಮೀ ಬಾರ್ ಬಳಿ ಕುಡುಕರ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸರು ಪ್ರತಿದಾಳಿ ನಡೆಸಿದಾಗ, ಕುಡುಕರಾದ ರವಿ ಮತ್ತು ಆಂಜನೇಯ ಅವರ ಕಾಲಿಗೆ ಗುಂಡುಗಳು ತಗುಲಿದ್ದು, ಇಬ್ಬರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ಪರಾರಿಯಾಗಿದ್ದಾನೆ.
ಆಗಿದ್ದೇನು : ಆಂಜನೇಯ ಮತ್ತು ರವಿ ಲಗ್ಗರೆಯ ಧನಲಕ್ಮೀ ಬಾರ್ ಗೆ ಮಧ್ಯರಾತ್ರಿ ಸುಮಾರಿಗೆ ಆಗಮಿಸಿದ್ದಾರೆ. ಕುಡಿಯಲು ಕೂತ ಇವರು ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಗ್ರಾಹಕರೊಂದಿಗೆ ಜಗಳ ಪ್ರಾರಂಭಿಸಿದ್ದಾರೆ.
ಗುಂಪಿನ ಜಗಳ ವಿಕೋಪಕ್ಕೆ ಹೋದಾಗ, ರವಿ ತನ್ನ ಲೇಸೆನ್ಸ್ ಇಲ್ಲದ ಬಂದೂಕಿನಿಂದ ವಿರೋಧಿ ಗುಂಪಿನ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾನೆ. ಜಗಳ ಬಿಡಿಸಲು ಹೋದ ಬಾರ್ ಕ್ಯಾಷಿಯರ್ ಮೇಲೂ ಹಲ್ಲೆ ನಡೆಸಿದ್ದಾರೆ. ಬಾರ್ ನಲ್ಲಿದ್ದವರು ಜಗಳ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಯಶವಂತಪುರ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರನ್ನು ಕಂಡು ಗಾಬರಿಗೊಂಡ ರವಿ ಮತ್ತು ಆಂಜನೇಯ ಅವರಿಂದ ತಪ್ಪಿಸಿಕೊಳ್ಳಲು, ಪೊಲೀಸರತ್ತ ಗುಂಡು ಹಾರಿಸಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿದಾಗ ಇಬ್ಬರು ಗಾಯಗೊಂಡಿದ್ದಾರೆ.
ರವಿ ಅವರ ಕಾಲಿಗೆ 2 ಗುಂಡು ಮತ್ತು ಆಂಜನೇಯ ಅವರ ಕಾಲಿಗೆ 1 ಗುಂಡು ತಗುಲಿದ್ದು, ಇಬ್ಬರನ್ನು ಪೊಲೀಸರು ಕೆ.ಸಿ.ಜನರಲ್ ಆಸ್ಪತ್ರಗೆ ದಾಖಲಿಸಿದ್ದಾರೆ. ರವಿ ಬಳಿ ಲೈಸೆನ್ಸ್ ಇಲ್ಲದ ಬಂದೂಕು ಹೇಗೆ ಬಂತು? ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗಂಧದ ಕಳ್ಳರು ಸಾವು : ವಿಜಾಪುರ ತಾಲೂಕಿನ ದೇವರನಾವದಗಿ ಗ್ರಾಮದಲ್ಲಿ ಶೀಗಂಧದ ಮರ ಕಡಿಯಲು ಬಂದಿದ್ದ ಇಬ್ಬರು ಕಳ್ಳರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೃತರನ್ನು ಭೀಮರಾಯ ಭಜಂತ್ರಿ ಮತ್ತು ಮಂಜುನಾಥ ಭಜಂತ್ರಿ ಎಂದು ಗುರುತಿಸಲಾಗಿದೆ. ದೇವರನಾವದಗಿ ಗ್ರಾಮದ ತೋಟದಲ್ಲಿ ಶ್ರೀಗಂಧ ಕಳವಿಗೆ ಯತ್ನಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿದ್ದಾರೆ. ಇದರಿಂದ ಸ್ಥಳದಲ್ಲೇ ಇಬ್ಬರು ಕಳ್ಳರು ಮೃತಪಟ್ಟಿದ್ದಾರೆ. ಯಮನಪ್ಪ ಭಜಂತ್ರಿ ಎಂಬ ಕಳ್ಳ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಆಲಮೇಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಕಳ್ಳನಿಗಾಗಿ ಶೋಧ ಮುಂದುವರೆದಿದೆ.












Click it and Unblock the Notifications