ತುಮಕೂರು: ಲೆಕ್ಚರರ್ ಆತ್ಮಹತ್ಯೆಗೆ ಸ್ಥೂಲಕಾಯ ಕಾರಣವೇ?

ಗೀತಾಶ್ರೀ ಅವರ ಸಾವಿಗೆ ಅವರ ದಢೂತಿ ದೇಹವೇ ಕಾರಣ ಎನ್ನಲಾಗಿದೆ. ದೇಹದ ತೂಕ ತಗ್ಗಿಸುವ ತನಕ ಮದುವೆ ಬೇಡ ಎಂದು 30 ವರ್ಷ ವಯಸ್ಸಿನ ಗೀತಾಶ್ರೀ ಹೇಳಿದ್ದರು.
ಇತ್ತೀಚೆಗೆ ಮನೆಯಲ್ಲಿ ಈಕೆಯ ಮದುವೆಯ ಪ್ರಸ್ತಾಪ ನಡೆದಿತ್ತು. ಆದರೆ ನಾನು ತೆಳ್ಳಗಾದ ಮೇಲೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದರಿಂದ ಪೋಷಕರು ಮದುವೆ ಪ್ರಸ್ತಾಪವನ್ನು ಕೈ ಬಿಟ್ಟಿದ್ದರು. ಬಿಇ, ಎಂಟೆಕ್ ವಿದ್ಯಾಭ್ಯಾಸ ಮಾಡಿರುವ ಗೀತಾಶ್ರೀ ಅವರು ಎಚ್ ಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಉದ್ಯೋಗದಲ್ಲಿದ್ದರು.
ಕಾಲೇಜಿಗೆ ಹೋಗುವಾಗ ಗೀತಾಶ್ರೀ ಅವರನ್ನು ದಾರಿ ಮಧ್ಯೆ ಕೆಲವು ಪುಂಡರು ಕಿಚಾಯಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ತಲೆಕೆಡಿಸಿಕೊಳ್ಳದೆ ತಮ್ಮಷ್ಟಕ್ಕೇ ತಾನೆ ಕಾಲೇಜು ಮುಗಿಸಿಕೊಂಡು ಮನೆಗೆ ಬರುತ್ತಿದ್ದರು. ಆದರೆ, ನಿನ್ನೆ ಸಂಜೆ ಕಾಲೇಜು ಮುಗಿಸಿಕೊಂಡು ಮನೆಗೆ ತೆರಳಿದ ಗೀತಾಶ್ರೀ ಎಲ್ಲರೊಂದಿಗೆ ಸಂತೋಷವಾಗೇ ಮಾತನಾಡಿದ್ದಾರೆ. ರಾತ್ರಿ ಊಟ ಮಾಡಿ ತನ್ನ ಕೊಠಡಿಗೆ ಮಲಗುವುದಾಗಿ ಹೇಳಿ ಹೋಗಿದ್ದಾರೆ.
ಇಂದು ಬೆಳಗ್ಗೆ 11 ಗಂಟೆ ಆದರೂ ಗೀತಾಶ್ರೀ ಎದ್ದಿರಲಿಲ್ಲ. ಬಹುಶಃ ಸುಸ್ತಾಗಿರಬಹುದು, ಅಥವಾ ಕಾಲೇಜಿಗೆ ರಜೆ ಇರಬಹುದು ಮಲಗಿರಲಿ ಎಂದು ಪೋಷಕರು ಸಹ ಈಕೆಯ ಕೊಠಡಿಯ ಬಳಿ ಸುಳಿದಿರಲಿಲ್ಲ. ಮಧ್ಯಾಹ್ನ 12 ಗಂಟೆಯಾದರೂ ಗೀತಾಶ್ರೀ ಏಳದಿರುವುದನ್ನು ಗಮನಿಸಿದ ತಾಯಿ ಯಶೋಧಾ ಕೊಠಡಿ ಬಳಿ ಹೋಗಿ ಬಾಗಿಲು ಬಡಿದಿದ್ದಾರೆ ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದನ್ನು ಗಮನಿಸಿ ಗಾಬರಿಯಾಗಿದ್ದಾರೆ.
ನೆರೆಮನೆಯವರ ನೆರವಿನಿಂದ ಬಾಗಿಲು ಒಡೆದು ನೋಡಿದಾಗ ಫ್ಯಾನಿಗೆ ಗೀತಾಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ಎನ್ ಇಪಿಎಸ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications