ಆನೆ ಹಿಂಡು ತಮಿಳುನಾಡಿಗೆ ವಾಪಸ್; ಸಾಕಪ್ಪಾ ಸಾಕು

elephants
ಬೆಂಗಳೂರು, ಜೂ.25 : ಹುಸ್ಕೂರು ಕೆರೆಯಲ್ಲಿ ಬೀಡು ಬಿಟ್ಟಿದ್ದ ಹದಿಮೂರು ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯ ಯಶಸ್ವಿಯಾಗಿದ್ದು, ತಮಿಳುನಾಡಿನ ದೇವರ ಬೆಟ್ಟ ಕಾಡಿಗೆ ಆನೆಗಳು ಸುರಕ್ಷಿತವಾಗಿ ತಲುಪುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದ್ದು, ಜನರಲ್ಲಿ ಆತಂಕ ಮೂಡಿಸಿದ್ದ ಆನೆಗಳನ್ನು ಕಾಡಿಗೆ ಅಟ್ಟುವಲ್ಲಿ ಸಫಲರಾಗಿದ್ದಾರೆ.

ಸೋಮವಾರ ರಾತ್ರಿ 12 ಗಂಟೆಯವರೆಗೂ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ನಂತರ ಬೆಳಕು ಲಭ್ಯವಿಲ್ಲದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದರು. ತಡರಾತ್ರಿ 1 ಗಂಟೆಯ ವೇಳಗೆ ಜನ ಸಂದಣಿ ನಿಂತು, ಗಲಾಟೆ ಹತೋಟಿಗೆ ಬಂದ ಕಾರಣ, ಆನೆಗಳು ಕಾಡಿನ ದಾರಿ ಹಿಡಿದವು. ನೆರಳೂರು ಬಳಿಯ ಶಿವಪುರ ಬಡಾವಣೆ ಬಳಿ ರಾತ್ರಿ ಆನೆಗಳು ಹಾದು ಹೋಗಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.

ಕಾರ್ಯಾಚರಣೆ ಹೇಗೆ : ಸೋಮವಾರ ಸಂಜೆ ಅರ್ಜುನ ನೇತೃತ್ವದ ದಸರಾ ಗಜಪಡೆ ಬೆಂಗಳೂರಿಗೆ ಆಗಮಿಸಿತ್ತು. ಮತ್ತಿಗೋಡು ಶಿಬಿರದಿಂದ ಅಭಿಮನ್ಯು, ನಾಗರಹೊಳೆ ಬಳ್ಳೆ ಶಿಬಿರದಿಂದ ಅರ್ಜುನ, ಚಾಮರಾಜ ನಗರ ಜಿಲ್ಲೆಯ ಕೆ. ಗುಡಿ ಶಿಬಿರದಿಂದ ಶ್ರೀರಾಮ ಮತ್ತು ಗಜೇಂದ್ರ ಆನೆಗಳನ್ನು ಕರೆತರಲಾಗಿತ್ತು.

ಪಟಾಕಿ ಹೊಡೆಯುತ್ತಾ, ಪಳಗಿದ ಆನೆಗಳ ಮೂಲಕ ಕಾಡಾನೆಗಳನ್ನು ಬೆದರಿಸಿ ಕಾಡಿಗಟ್ಟುವ ಕಾರ್ಯ ಸಂಜೆ 5.30ಕ್ಕೆ ಪ್ರಾರಂಭವಾಯಿತು. ಹುಸ್ಕೂರು ಕೆರೆಯಿಂದ ಸುಮಾರು 2 ಕಿ.ಮೀ.ಕಾಡಿನತ್ತ ಹೋಗಿದ್ದ ಗಜಪಡೆಗಳಿಗೆ ರೈಲ್ವೆ ಹಳಿ ಎದುರಾಯಿತು. ತಕ್ಷಣ ರೈಲು ಸಹ ಆಗಮಿಸಿದ್ದರಿಂದ ಗಾಬರಿಗೊಂಡ ಆನೆಗಳು, ಹುಸ್ಕೂರು ಕೆರೆಗೆ ಮರಳಿದವು.

ಸಂಜೆ 7 ಗಂಟೆ ಸುಮಾರಿಗೆ ಪುನಃ ಕಾರ್ಯಾಚರಣೆ ಪ್ರಾರಂಭವಾಯಿತು. 8.30ರ ಸುಮಾರಿಗೆ ಚಂದಾಪುರ ತಲುಪಿದ ಆನೆಗಳು ಓಡಿ ಓಡಿ ಸುಸ್ತಾದ ಕಾರಣ ಅಲ್ಲೇ ನೆಲೆ ನಿಂತವು. ಅರಣ್ಯ ಇಲಾಖೆ ಅಧಿಕಾರಿಗಳು ಕೆಲವು ಗಂಟೆಗಳ ಕಾಲ ಕಾರ್ಯಾಚರಣೆ ಸ್ಥಗಿತಗೊಳಿಸಿದರು.

ನಂತರ ರಾತ್ರಿ 10 ಗಂಟೆ ಸುಮಾರಿಗೆ ಪುನಃ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ತಡರಾತ್ರಿ 12 ಗಂಟೆಯವರೆಗೂ ಕಾರ್ಯಾಚರಣೆ ನಡೆಸಿದ ಫಲವಾಗಿ ಆನೆಗಳು ಕಾಡಿನತ್ತ ಮುಖಮಾಡಿದವು. ಬೆಳಗಕಿನ ಅಭಾವದ ಹಿನ್ನೆಲೆಯಲ್ಲಿ 12 ಗಂಟೆಗೆ ಕಾರ್ಯಾಚರಣೆ ಸ್ಥಗಿತಗೊಂಡಿತು. ನಂತರ ಗಲಾಟೆಗಳು ಕಡಿಮೆ ಆದ ಕಾರಣ ಆನೆಗಳು ಕಾಡಿನಡೆಗೆ ಹೆಜ್ಜೆ ಹಾಕಿದವು.

ಹೆದ್ದಾರಿ ಬಂದ್ : ವಾಹನಗಳ ಶಬ್ದಕೇಳಿ ಆನೆಗಳು ಬೆಚ್ಚಿಬೀಳಬಹುದು ಎಂದು ಹೊಸೂರು-ಬೆಂಗಳೂರು ರಾಷ್ಠ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ರಾತ್ರಿ ಸುಮಾರು 2 ಗಂಟೆ ವೇಳಗೆ ಆನೆಗಳು ಹೆದ್ದಾರಿ ದಾಟಿ, ತಮಿಳುನಾಡಿನ ದಾರಿ ಹಿಡಿದಿರಬಹುದು ಎಂದು ಪ್ರಧಾನ ಅರಣ್ಯ ಸಂರಕ್ಷಾಣಾಧಿಕಾರಿ ದೀಪಕ್ ಶರ್ಮಾ ಹೇಳಿದ್ದಾರೆ.

ಮರಿಗಳಿಂದಾಗಿ ದೊಡ್ಡ ಸಮಸ್ಯೆ : ಸೋಮವಾರ ಮುಂಜಾನೆ ಹುಸ್ಕೂರು ಕೆರೆಗೆ ಆಗಮಸಿದ 13 ಆನೆಗಳ ಜೊತೆ ನಾಲ್ಕು ಮರಿಗಳಿದ್ದವು. ಆದ್ದರಿಂದ ಅವು ಇಷ್ಟೊಂದು ಉಪಟಳ ನೀಡಿದವು. ಮತ್ತೊಂದು ಕಡೆ ಜನಜಂಗುಳಿ ಕಂಡು ಆಕ್ರೋಶಗೊಂಡ ಆನೆಗಳು ಅವರ ಮೇಲೆ ದಾಳಿ ಮಾಡಿದವು. ಮರಿಗಳು ಇಲ್ಲದಿದ್ದರೆ, ಕಾರ್ಯಾಚರಣೆ ಮತ್ತಷ್ಟು ಸುಲಭವಾಗುತ್ತಿತ್ತು ಎಂದು ದೀಪಕ್ ಶರ್ಮಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+