ಹುಸ್ಕೂರು ಕೆರೆಯಲ್ಲಿ ಬೀಡುಬಿಟ್ಟ ಆನೆಗಳು

ಕೆರೆಯ ಸುತ್ತ-ಮುತ್ತಾ ಸಾವಿರಾರು ಜನರು ಜಮಾಯಿಸಿದ್ದು, ಜನರ ಗಲಾಟೆ ಮತ್ತು ರೈಲಿನ ಶಬ್ದದಿಂದ ಗಾಬರಿಗೊಂಡ ಆನೆಗಳು, ಕೆರೆಯ ಜಾಗವೇ ಸುರಕ್ಷಿತ ಸ್ಥಳ ಎಂದು ತಿಳಿದು ಮರಳಿ ಬಂದಿವೆ.
ಆಹಾರವಿಲ್ಲದೆ ಪರದಾಟ : ಭಾನುವಾರ ಬೆಳಗ್ಗೆಯಿಂದ ಆನೆಗಳನ್ನು ಜನರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಒಂದು ಕಡೆ ನೆಲೆನಿಲ್ಲದಂತೆ ಓಡಿಸುತ್ತಿದ್ದಾರೆ. ಆದ್ದರಿಂದ ಗಜಪಡೆಗಳಿಗೆ ಸರಿಯಾದ ಆಹಾರ ದೊರಕಿಲ್ಲ. ಆನೆಗಳ ದಾಳಿಗಳ ಬಗ್ಗೆ ಮಾತನಾಡುವ ಜನರು ಮಾನವೀಯತೆ ಮರೆತು ಅವುಗಳನ್ನು ಓಡಿಸುತ್ತಿದ್ದಾರೆ. ಸತತವಾಗಿ ಓಡಿ ಆನೆಗಳು ಆಯಾಸಗೊಂಡು, ಹಸಿವಿನಿಂದ ಬಳಲುತ್ತಿವೆ.
ಹಿಂದಿನ ಸುದ್ದಿ
ಸಂಜೆ 5.30ಕ್ಕೆ ಹುಸ್ಕೂರು ಕೆರೆಯಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಆರಂಭವಾಯಿತು. ಬನ್ನೇರುಘಟ್ಟ ಮತ್ತು ಮಡಿಕೇರಿಯಿಂದ ಬಂದಿರುವ ಪಳಗಿದ ಆನೆಗಳ ಸಹಾಯದಿಂದ ಕಾರ್ಯಾಚರಣೆ ಪ್ರಾರಂಭಿಸಲಾಯಿತು.
ಹುಸ್ಕೂರು ಕೆರೆಯ ಸುತ್ತಮುತ್ತಲಿನ ಜನರನ್ನು ಚದುರಿಸಲಾಗಿದ್ದು, ಆನೆಗಳು ಕಾಡಿಗೆ ಹೋಗಲು ಅನುಕೂಲ ಮಾಡಿಕೊಡಲಾಗಿದೆ. ಒಟ್ಟು ಹದಿಮೂರು ಆನೆಗಳು ಕೆರೆಯಿಂದ ಕಾಡಿನತ್ತ ಮುಖಮಾಡಿ ಹೊರಟಿವೆ. ಪಟಾಕಿಗಳನ್ನು ಹೊಡೆಯುತ್ತಾ, ಪಳಗಿದ ಆನೆಗಳ ಸಹಾಯದಿಂದ ಕಾಡಾನೆಗಳನ್ನು ಬೆದರಿಸಿ ಓಡಿಸಲಾಗುತ್ತಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ನೀಡಿದ ಮಾಹಿತಿಯಂತೆ, ಹುಸ್ಕೂರು - ಚಂದಾಪುರ ಮಾರ್ಗದ ಮೂಲಕ ಸಿಂಗಾಸಂದ್ರ ಅಥವ ಮುತ್ಯಾಲಮಡು ಅರಣ್ಯಕ್ಕೆ ಆನೆಗಳನ್ನು ಅಟ್ಟುವ ಕಾರ್ಯಚರಣೆ ಪ್ರಾರಂಭವಾಗಿದೆ. 150 ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಜನ ದಟ್ಟಣೆಯಿಂದಾಗಿ ಆನೆಗಳು ಗಾಬರಿಗೊಳ್ಳಬಹದು ಎಂದು ಆನೆಗಳು ಸಾಗುವ ಮಾರ್ಗದಲ್ಲಿ ಜನ ಸಂಚಾರವಿರದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ಪಳಗಿದ ಆನೆಗಳಾದ ಅಭಿಮನ್ಯು, ಅರ್ಜುನ, ಗಜೇಂದ್ರ, ಶ್ರೀರಾಮ ಮಡಿಕೇರಿಯಿಂದ ಆಗಮಿಸಿದ್ದು, ಕಾರ್ಯಚರಣೆಗೆ ಸಹಾಯ ಮಾಡುತ್ತಿವೆ.
ಜನರ ಹಾವಳಿಯೇ ಹೆಚ್ಚು : ಆನೆಗಳನ್ನು ಕಾಡಿಗೆ ಅಟ್ಟುವುದಕ್ಕಿಂತ ಜನರನ್ನು ದೂರ ಕಳಿಸುವುದೇ ದೊಡ್ಡ ಸವಾಲಾಗಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಬೈಲಪ್ಪ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸಾವಿರಾರು ಜನರು ಗ್ರಾಮದಲ್ಲಿ ನೆಲೆಸಿದ್ದು, ಜನರನ್ನು ಕಂಡ ಆನೆಗಳು ಎತ್ತ ಸಾಗುತ್ತವೆ ಎಂಬುದೇ ತಿಳಿಯುತ್ತಿಲ್ಲ.
ಪೊಲೀಸರು ಸಹಾಯದಿಂದ ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿ ಆನೆಗಳಿಗೆ ಮನುಷ್ಯರು ಕಾಣದಂತೆ ಮಾಡಲಾಗುತ್ತಿದೆ. ಆದರೂ ಆನೆಗಳ ಫೋಟೋಗಳನ್ನು ಸೆರೆಹಿಡಿಯಲು ಜನರು ಮುಗಿಬಿದಿದ್ದಾರೆ. ಸದ್ಯ ಕಾರ್ಯಾಚರಣೆ ಆರಂಭವಾಗಿದ್ದು, ಜರನ್ನು ಚದುರಿಸಲಾಗಿದೆ.
ಇಂದು ಇಬ್ಬರ ಮೇಲೆ ಆನೆ ದಾಳಿ : ಹುಸ್ಕೂರು ಕೆರೆಯ ಬಳಿ ಆನೆಯ ಫೋಟೋ ತೆಗೆಯಲು ಹೋದವರ ಮೇಲೆ ಇಂದು ಗಜಪಡೆ ದಾಳಿ ಮಾಡಿವೆ. ಕಾಚನಾಯಕನಹಳ್ಳಿ ನಿವಾಸಿ ಮುನಿರಾಜು(35) ಆನೆಯ ದಾಳಿಯಿಂದ ಗಾಯಗೊಂಡಿದ್ದಾರೆ.
ಇವರನ್ನು ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಸೋಮವಾರ ಶ್ಯಾಮಪ್ಪ (40) ಆನೆಯ ದಾಳಿಯಿಂದ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಆನೆಗಳಿಗೆ ಗಾಬರಿ ಉಂಟುಮಾಡಬೇಡಿ. ಅವುಗಳ ಹತ್ತಿರ ಬರಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪದೇ ಪದೇ ಮನವಿ ಮಾಡುತ್ತಿದ್ದಾರೆ. ಆದರೆ, ಜನರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.
ಐವರ ಸಾವು : ಶನಿವಾರ ತಡರಾತ್ರಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಕಾಣಿಸಿಕೊಂಡ ಆನೆಗಳು ಎರಡು ದಿನಗಳಲ್ಲಿ ನಾಲ್ವರನ್ನು ಕೊಂದು ಹಾಕಿವೆ. ವಿಜಯವಾಣಿ ಪತ್ರಿಕೆಯ ಸ್ಥಳೀಯ ವರದಿಗಾರ ಮಂಜುನಾಥ್ (24),ಚಿಕ್ಕಮುನಿಯಪ್ಪ (60),ರಾಮಕೃಷ್ಣಪ್ಪ (55) ಮತ್ತು ಚಂದ್ರಪ್ಪ(49), ಶ್ಯಾಮಪ್ಪ ಮೃತಪಟ್ಟ ದುರ್ದೈವಿಗಳು.
ಶಾಶ್ವತ ಪರಿಹಾರದ ಅಗತ್ಯವಿದೆ : ಆನೇಕಲ್ ಶಾಸಕ ಶಿವಣ್ಣ ಆನೆಗಳ ಹಾವಳಿ ತಡೆಯಲು ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಈ ಕುರಿತು ಅರಣ್ಯ ಸಚಿವ ರಾಮಾನಾಥ್ ರೈ ಅವರ ಜೊತೆ ಮಾತುಕತೆ ನಡೆಸಲಿದ್ದೇನೆ ಎಂದು ಅವರು ಹೇಳಿದರು.












Click it and Unblock the Notifications