ಮದ್ಯದ ಋಣದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ

ಈಗ ಸಾಲು ಸಾಲು ಮದ್ಯದಂಗಡಿಗಳಿಗೆ ಲೈಸನ್ಸ್ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿರುವುದಕ್ಕೆ ಕುಮಾರಸ್ವಾಮಿ ಕಿಡಿಕಾರಿದ್ದಾರೆ. 'ಮುಖ್ಯಮಂತ್ರಿಗೆ ಮದ್ಯದ ಅಂಗಡಿ ತೆರೆಯಲು ಯಾಕೆ ಇಷ್ಟೊಂದು ಆಸಕ್ತಿ, ವ್ಯಾಮೋಹ ಉಂಟಾಗಿದೆ' ಎಂದು ಅವರು ಪ್ರಶ್ನಿಸಿದ್ದಾರೆ. ಸಿರಿಗೆರೆಯ ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರೂ ಸಹ ಕುಮಾರಸ್ವಾಮಿ ಅಭಿಪ್ರಾಯಕ್ಕೆ ದನಿಗೂಡಿಸಿದ್ದಾರೆ.
ಮದ್ಯದಾ ಋಣದಲ್ಲಿ: ಮುಳಬಾಗಿಲು ತಾಲೂಕಿನ ಕಪ್ಪಲಮಡಗು ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ ಅವರು 'ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಆರ್ಥಿಕವಾಗಿ ಶಕ್ತಿ ತುಂಬಿದ ಮದ್ಯದ ದೊರೆಗಳ ಋಣ ತೀರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮದ್ಯದ ಅಂಗಡಿಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದ್ದಾರೆ' ಎಂದು ನೇರವಾಗಿ ಆರೋಪಿಸಿದ್ದಾರೆ.
'ರಾಜ್ಯದಲ್ಲಿ ಸಾರಾಯಿ ನಿಷೇಧಿಸಿದ ಮೇಲೆ ಮದ್ಯದ ದೊರೆಗಳು ಮನೆಗಳಲ್ಲಿ ಮಲಗಿದ್ದರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮದ್ಯದ ದೊರೆಗಳು ಸಿದ್ದರಾಮಯ್ಯ ಅವರಿಗೆ ಆರ್ಥಿಕವಾಗಿ ಶಕ್ತಿ ತುಂಬಿದ್ದರಿಂದ ಅವರ ಋಣ ತೀರಿಸಲು ಹೊಸದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡುವುದಕ್ಕೆ ಸಿಎಂ ಮುಂದಾಗಿದ್ದಾರೆ' ಎಂದು ಸಿದ್ದುರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದರು.
'1997ರ ನಂತರ ಅಧಿಕಾರಕ್ಕೆ ಬಂದ ಸರಕಾರಗಳು ರಾಜ್ಯದಲ್ಲಿ ಹೊಸದಾಗಿ ಮದ್ಯದ ಅಂಗಡಿಗಳಿಗೆ ಅನುಮತಿ ನೀಡಲು ಗಮನ ಕೊಟ್ಟಿರಲಿಲ್ಲ. ಆದರೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಅಗ್ಗದ ದರದಲ್ಲಿ ಮದ್ಯ ಮಾರಾಟ ಮಾಡುವುದಕ್ಕೆ ಅನುಮತಿ ನೀಡಲು ಚಿಂತನೆ ನಡೆಸುವುದಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದ್ದರಿಂದ ಆ ಹೇಳಿಕೆ ಹಿಂದಕ್ಕೆ ಪಡೆದಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದಲ್ಲಿ ಹೊಸದಾಗಿ ಮದ್ಯದ ಅಂಗಡಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿ ಮದ್ಯದ ದೊರೆಗಳಿಗೆ ಅನುಕೂಲ ಕಲ್ಪಿಸಲು ಮುಂದಾಗಿದ್ದಾರೆ' ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಸಿರಿಗೆರೆ ಸ್ವಾಮೀಜಿಗಳೂ ವಿರೋಧ:
ಈ ನಡುವೆ, ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, 'ಗುಟ್ಕಾ ನಿಷೇಧಕ್ಕೆ ನನ್ನ ಬೆಂಬಲವಿದೆ. ಆದರೆ, ಇನ್ನಷ್ಟು ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡುವ ರಾಜ್ಯ ಸರಕಾರದ ನಿರ್ಧಾರಕ್ಕೆ ನನ್ನ ಸಂಪೂರ್ಣ ವಿರೋಧವಿದೆ' ಎಂದಿದ್ದಾರೆ. ಶಿವಗಂಗೋತ್ರಿಯ ದಾವಣಗೆರೆ ವಿವಿ ಆವರಣದಲ್ಲಿ ನಡೆದ ನೂತನ ಕಟ್ಟಡಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡುತ್ತಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
'ಜನರ ಆರೋಗ್ಯಕ್ಕೆ ಹಾನಿ ಮಾಡುವ ಇದು ಪಾಪದ ಕೃತ್ಯ. ಹೊಸದಾಗಿ ಲೈಸೆನ್ಸ್ ಕೊಡುವುದು ಸರಿಯಲ್ಲ ಎನ್ನುವ ಸಂದೇಶವನ್ನು ವೇದಿಕೆಯಲ್ಲಿರುವ ಇಬ್ಬರು ಸಚಿವರು ಮುಖ್ಯಮಂತ್ರಿಯವರಿಗೆ ತಲುಪಿಸಬೇಕು' ಎಂದು ಮನವಿ ಮಾಡಿದರು.
'ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸುವ ಬಗ್ಗೆ ಟಿಪ್ಪು ಸುಲ್ತಾನ್ ವಿಚಾರ ಮಾಡಿದಾಗ, ಆತನ ವಿತ್ತ ಸಚಿವ ಮೀರ್ ಜಾಫರ್ ಬಲವಾಗಿ ವಿರೋಧಿಸಿದ್ದ. ಮದ್ಯ ಮಾರಾಟ ನಿಷೇಧಿಸಿದರೆ ರಾಜ್ಯದ ಬೊಕ್ಕಸಕ್ಕೆ ತುಂಬ ನಷ್ಟವಾಗಲಿದೆ ಎಂದು ವಿವರಿಸಿದ್ದ. ಆದರೆ ಆತನ ವಾದವನ್ನು ನಿರಾಕರಿಸಿದ್ದ ಟಿಪ್ಪು, ಮದ್ಯದ ಹಣದಿಂದ ಬೊಕ್ಕಸ ತುಂಬುವುದಕ್ಕಿಂತಲೂ ನನ್ನ ರಾಜ್ಯದ ಜನರ ಆರೋಗ್ಯ ಮುಖ್ಯ ಎಂದು ಘೋಷಿಸಿ, ಮದ್ಯ ಮಾರಾಟ ನಿಷೇಧಿಸಿದ ಉದಾಹರಣೆ ಇತಿಹಾಸದಲ್ಲಿದೆ' ಎಂದು ಸ್ವಾಮೀಜಿ ವಿವರಿಸಿದರು.












Click it and Unblock the Notifications