ವರದಕ್ಷಿಣೆ ಕಿರುಕುಳ: ಗೃಹಿಣಿ ದಾರುಣ ಸಾವು

ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆಯನ್ನು ಪೀಣ್ಯ 2ನೇ ಹಂತದ ಎಸ್ ಆರ್ ಎಸ್ ಬಳಿಯ ನಾರಾಯಣಪುರದ ನಿವಾಸಿ ಗಂಗಮ್ಮ (22) ಎಂದು ಗುರುತಿಸಲಾಗಿದೆ. ಕಳೆದ ಆರು ತಿಂಗಳ ಹಿಂದೆಯೆಷ್ಟೇ ಗಂಗಮ್ಮ, ಟ್ಯಾಕ್ಸಿ ಚಾಲಕ ರಾಮಾಂಜನೇಯ ಎಂಬಾತನನ್ನು ಮದುವೆಯಾಗಿದ್ದಳು. ಈ ಮಧ್ಯೆ ಪತಿ ಹಾಗೂ ಆತನ ತಾಯಿ ರಾಧಾ ಮತ್ತಿತರರು ತವರಿನಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಕಳೆದ ರಾತ್ರಿ ವರದಕ್ಷಿಣೆ ವಿಷಯಕ್ಕಾಗಿ ಗಂಗಮ್ಮ ಹಾಗೂ ರಾಮಾಂಜನೇಯ ನಡುವೆ ಜೋರು ಜಗಳ ನಡೆದಿದೆ. ಈ ಹಿನ್ನೆಲೆಯಲ್ಲಿ ಬೇಸತ್ತು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ನಿವಾಸಿ ನರಸಿಂಹಯ್ಯ ಅವರ ಪುತ್ರಿ ಗಂಗಮ್ಮ ಅವರನ್ನು ರಾಮಾಂಜನೇಯನೇ ಮೆಚ್ಚಿ ಮದುವೆಯಾಗಿದ್ದನು. ಮದುವೆ ಸಂದರ್ಭದಲ್ಲಿ ನರಸಿಂಹಯ್ಯ ಅವರು ತಮ್ಮ ಶಕ್ತಿಮೀರಿ ಖರ್ಚು ಮಾಡಿ ವರೋಪಚಾರ ಮಾಡಿದ್ದರು. ಆದರೆ, ಮದುವೆಯಾದ ತಿಂಗಳಿನಲ್ಲೇ ಗಂಗಮ್ಮ ತನ್ನ ಗಂಡನ ಕಿರುಕುಳದ ಬಗ್ಗೆ ತವರು ಮನೆಗೆ ದೂರು ನೀಡಿ ಗೋಳಾಡಿದ್ದಳು.
ಆದರೆ, ಮದುವೆ ಹೊಸತರಲ್ಲಿ ಇದು ಮಾಮೂಲು ಎಲ್ಲಾ ಸರಿ ಹೋಗುತ್ತೆ ಎಂದು ನರಸಿಂಹಯ್ಯ ಅವರು ಮಗಳಿಗೆ ಸಾಂತ್ವನ ಹೇಳಿ ಕಳಿಸಿದ್ದರು. ಆದರೆ, ಆರು ತಿಂಗಳಿನಲ್ಲೇ ಮಗಳು ಶವವಾಗಿ ಮಲಗಿರುವುದನ್ನು ಕಂಡು ನರಸಿಂಹಯ್ಯ ಅವರಿಗೆ ದಿಕ್ಕು ತೋಚದಂತೆ ಆಗಿದೆ. ಮಗಳ ಸಾವಿಗೆ ಅಳಿಯ ರಾಮಾಂಜನೇಯ ಹಾಗೂ ಬೀಗರಾದ ರಾಧಮ್ಮ ಅವರೇ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತದೇಹವನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದ ವಾರಸುದಾರರಿಗೆ ಒಪ್ಪಿಸಲಾಗಿದೆ. ಪ್ರಕರಣ ಸಂಬಂಧ ಪತಿ ರಾಮಾಂಜನೇನನ್ನು ಬಂಧಿಸಿರುವ ಪೀಣ್ಯ ಠಾಣಾ ಪೊಲೀಸರು, ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ. ಅತ್ತೆ ರಾಧಮ್ಮ ಸದ್ಯಕ್ಕೆ ತಲೆ ಮರೆಸಿಕೊಂಡಿದ್ದಾರೆ.
ರೈಲ್ವೆ ಇಲಾಖೆಯ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುವ ರಾಧಾ ಅವರ ಮನೆ ಪರಿಸ್ಥಿತಿ ಚೆನ್ನಾಗೇ ಇದೆ ಆದರೂ ಗಂಗಮ್ಮಳಿಗೆ ಆಗಾಗ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ ಒಂದು ವಾರದಿಂದ 4 ಲಕ್ಷ ರು ತೆಗೆದುಕೊಂಡು ಬಾ ಇಲ್ಲದಿದ್ದರೆ ತವರು ಮನೆಯಲ್ಲೇ ಸಾಯಿ ಎಂದು ಕಿರುಕುಳ ನೀಡಿದ್ದಾರೆ. ದೈಹಿಕ ಹಾಗೂ ಮಾನಸಿಕ ನರಕಯಾತನೆ ಅನುಭವಿಸಿದ ಗಂಗಮ್ಮ ತನ್ನ ನೋವನ್ನು ತವರಿನ ತನಕ ಹೋಗಲಾರದೆ ಬೆಂಗಳೂರಿನ ಪೀಣ್ಯ ಮನೆಯಲ್ಲೇ ತನ್ನ ಜೀವನಕ್ಕೆ ಅಂತ್ಯ ಹಾಡಿದ್ದಾಳೆ.












Click it and Unblock the Notifications