ಜುಲೈನಿಂದ ಶಾಲಾ ಮಕ್ಕಳಿಗೆ ಹಾಲು : ಸಿಎಂ

ಬೆಂಗಳೂರಿನಲ್ಲಿ ಭಾನುವಾರ ಸಂಜೆ ಮಾತನಾಡಿದ ಸಿದ್ದರಾಮಯ್ಯ, ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಹಾಲು ವಿತರಣೆ ಮಾಡಲು ನಿರ್ಧರಿಸಲಾಗಿದೆ. ಜುಲೈನಿಂದ ಈ ಯೋಜನೆ ಜಾರಿಗೆ ಬರಲಿದ್ದು, 1ರಿಂದ 10ನೇ ತರಗತಿಯ ಮಕ್ಕಳಿಗೆ ಉಚಿತವಾಗಿ ತಲಾ 150 ಮಿ.ಲೀ ಹಾಲು ವಿತರಿಸಲಾಗುವುದು ಎಂದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ, ಮಕ್ಕಳಿಗೆ ನಿತ್ಯ ಬೆಳಗ್ಗೆ ಪ್ರತಿ ಮಗುವಿಗೆ ತಲಾ 150 ಮಿ.ಲೀ. ಹಾಲು ವಿತರಣೆ ಮಾಡಲಾಗುವುದು ಎಂದು ಘೋಷಿಸಿದರು.
ಕೆಎಂಎಫ್ ನಿಂದ ಹಾಲು : ಸರ್ಕಾರ ಪ್ರತಿ ಲೀಟರ್ ಹಾಲಿಗೆ 4 ರೂ. ಪ್ರೋತ್ಸಾಹ ಧನ ಘೋಷಣೆ ಮಾಡಿತ್ತು. ಇದರಿಂದ ಹೆಚ್ಚು ಹಾಲು ಉತ್ಪಾದನೆ ಆಗುತ್ತಿದೆ. ಇದರಿಂದ ಹಾಲಿನ ಸಂಗ್ರಹಣೆ ಕೆಎಂಎಫ್ ನಲ್ಲಿ ಹೆಚ್ಚಾಗುತ್ತಿದೆ.
ಹೆಚ್ಚಿನ ಹಾಲು ಮಾರಾಟವಾಗುತ್ತಿಲ್ಲ ಮತ್ತು ಇದನ್ನು ಪೌಡರ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕೆಎಂಎಫ್ ಅಧಿಕಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಾಲನ್ನು ಸರ್ಕಾರ ಖರೀದಿ ಮಾಡಿ, ಮಕ್ಕಳಿಗೆ ಉಚಿತವಾಗಿ ನೀಡಲಿದೆ ಎಂದು ಸಿದ್ದರಾಮಯ್ಯ ಯೋಜನೆ ಬಗ್ಗೆ ವಿವರಣೆ ನೀಡಿದರು.
ಪ್ರಸ್ತುತ ಕೆಎಂಎಫ್ ಗೆ ಪ್ರತಿನಿತ್ಯ ಸುಮಾರು ಒಂಬತ್ತು ಲಕ್ಷ ಲೀ. ಹಾಲು ಹರಿದುಬರುತ್ತಿದೆ. ಈ ಹಾಲನ್ನು ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ವಿನಿಯೋಗಿಸಲಿದೆ ಎಂದು ಹೇಳಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ, ಯೋಜನೆಯ ನೀಲನಕ್ಷೆ ತಯಾರಿಸಲಾಗುವುದು ಎಂದು ಸಿಎಂ ಹೇಳಿದರು.
ಶಿಕ್ಷಕರ ಹುದ್ದೆಗೆ ಭರ್ತಿಗೆ ಕ್ರಮ : ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಗುಣಮಟ್ಟ ಸುಧಾರಿಸಲು ಖಾಲಿ ಇರುವ ಎಲ್ಲಾ ಉಪನ್ಯಾಸಕರ ಹುದ್ದೆ ಭರ್ತಿ ಮಾಡುವಂತೆ ಸೂಚನೆ ನೀಡಲಾಗಿದೆ. ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.












Click it and Unblock the Notifications