ಬೆಂಗಳೂರು ವಿವಿ ಇಬ್ಭಾಗಕ್ಕೆ ರಾಜ್ಯಪಾಲರ ಫೆವಿಕಾಲ್
ಬೆಂಗಳೂರು, ಜೂ.16: ಬೆಂಗಳೂರು ವಿಶ್ವವಿದ್ಯಾಲಯ ಇಬ್ಭಾಗವಾಗುವ ಪ್ರಕ್ರಿಯೆ ಕಾರ್ಯಗತವಾಗವಾದರೂ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಅನುಮತಿ ಸಿಕ್ಕಿಲ್ಲ. ಇಬ್ಭಾಗವಾಗಬೇಕಿದ್ದ ಬೆಂಗಳೂರು ವಿವಿಯನ್ನು ಭದ್ರವಾಗಿ ಫೆವಿಕಾಲ್ ಹಾಕಿ ಜೋಡಿಸಲು ರಾಜ್ಯಪಾಲರು ನಿರ್ಧರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಮಾರಕವಾಗುವ, ಶಿಕ್ಷಣ ಇಲಾಖೆಗೆ ತಲೆನೋವಾಗಬಲ್ಲ ಈ ನಿರ್ಧಾರದ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಇನ್ನೂ ತುಟಿ ಬಿಚ್ಚಿಲ್ಲ.
ಹೊಸದಾಗಿ ಜ್ಞಾನವಾಹಿನಿ (ಡಿವಿಜಿ) ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ನಗರ ವ್ಯಾಪ್ತಿಗೆ ಮತ್ತೊಂದು ವಿವಿ ಸ್ಥಾಪನೆ ಬಗ್ಗೆ ಬಿಜೆಪಿ ಸರ್ಕಾರವಿದ್ದಾಗ ವಿಧಾನ ಪರಿಷತ್ತಿನಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ 2013 ಮಂಡನೆಯಾಗಿ ಅನುಮೋದನೆ ಸಿಕ್ಕಿತ್ತು.
ಆದರೆ, ಬಿಜೆಪಿ ಸರ್ಕಾರದ ಪ್ರಸ್ತಾವನೆಗೆ ರಾಜ್ಯಪಾಲರು ಅಂಕಿತ ಹಾಕದೆ ವಿವಿ ವಿಭಜನೆ ವಿಧೇಯಕವನ್ನು ವಾಪಸ್ ಕಳುಹಿಸಲು ಮುಂದಾಗಿದ್ದಾರೆ ಎಂದು ರಾಜಭವನದ ಮೂಲಗಳು ಹೇಳಿವೆ. ಬೆಂಗಳೂರು ವಿವಿ ಇಬ್ಭಾಗ ಏಕೆ ಮಾಡಬೇಕು? ಹೊಸ ವಿವಿ ಸ್ಥಾಪನೆ ಅಗತ್ಯ ಏನಿದೆ? ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.
ಸದ್ಯ ಬೆಂಗಳೂರು ವಿವಿ ವ್ಯಾಪ್ತಿಗೆ ಸುಮಾರು 760ಕ್ಕೂ ಹೆಚ್ಚು ಕಾಲೇಜುಗಳು ಒಳಪಡುತ್ತವೆ. ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರಿಂದ ಶಿಕ್ಷಣ ಗುಣಮಟ್ಟ ಕಾಪಾಡಿಕೊಳ್ಳಲು, ಪರೀಕ್ಷೆ ನಡೆಸಲು ಕೂಡಾ ಕಷ್ಟವಾಗುತ್ತಿದೆ. 250 ಕಾಲೇಜುಗಳಿಗೆ ಒಂದು ವಿ.ವಿಯನ್ನು ತೆರೆಯಲು ಚಿಂತನೆ ನಡೆಸಲಾಗಿಗಿತ್ತು.

ಬಿಜೆಪಿ ಕಿಡಿ: ವಿವಿ ವಿಭಜನೆಯನ್ನು ರಾಜಕೀಯಗೊಳಿಸುತ್ತಿರುವುದಕ್ಕೆ ಬಿಜೆಪಿ ಕಿಡಿಕಾರಿದೆ. ಮೈಸೂರು, ಧಾರವಾಡ ವಿವಿಯಂತೆ ಬೆಂಗಳೂರು ವಿವಿ ಪರಂಪರೆಯನ್ನು ಉಳಿಸಿಕೊಳ್ಳಲಾಗುತ್ತದೆ. ಶಿಕ್ಷಣ ತಜ್ಞರ ಅಭಿಪ್ರಾಯ ಸಲಹೆ ಸೂಚನೆ ಮೇರೆಗೆ ವಿವಿ ವಿಭಜನೆಗೆ ಮುಂದಾಗಲಾಗಿತ್ತು. ಉಭಯ ಸದನಗಳಲ್ಲಿ ಒಪ್ಪಿಗೆ ಸಿಕ್ಕ ಮೇಲೂ ರಾಜ್ಯಪಾಲರು ಅನಗತ್ಯವಾಗಿ ವಿಧೇಯಕಕ್ಕೆ ಅಂಕಿತ ಹಾಕಲು ನಿರಾಕರಿಸಿರುವುದು ದುರದೃಷ್ಟಕರ ಎಂದು ಮಾಜಿ ಶಿಕ್ಷಣ ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.
ಹೊಸ ವಿವಿ ವ್ಯಾಪ್ತಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 316 ಕಾಲೇಜುಗಳು ಇರಲಿವೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ-2013ನ್ನು ಅಂದಿನ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಮಂಡಿಸಿದ್ದರು.
ಈ ನಾಲ್ಕೂ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿನ ಕಾಲೇಜುಗಳು ಈ ನೂತನ ವಿವಿ ವ್ಯಾಪ್ತಿಗೆ ಬರಲಿದ್ದು, ಉಳಿದಂತೆ ಬೆಂಗಳೂರು ಕೇಂದ್ರ ಹಾಗೂ ದಕ್ಷಿಣ ಮತ್ತು ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳು ಎಂದಿನಂತೆ ಜ್ಞಾನಭಾರತಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲೇ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದರು.
ಈ ಮೂಲಕ ದೇಶದ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಮ್ಮೆ ವಿಭಜನೆಯಾಗಿ ತನ್ನ ಗಾತ್ರವನ್ನು ಕಡಿಮೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಮಾಜಿ ಕುಲಪತಿ ಡಾ. ರುದ್ರಪ್ಪ ಅವರ ಸಮಿತಿ ಸೂಚಿಸಿತ್ತು.
ಈ ವಿಶ್ವವಿದ್ಯಾಲಯಕ್ಕೆ ಸಾಹಿತಿ ಡಿ.ವಿ.ಗುಂಡಪ್ಪನವರ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಲಾಗಿತ್ತು.ಹೊಸ ವಿಶ್ವವಿದ್ಯಾಲಯದ ಕೇಂದ್ರ ಕಚೇರಿಯು ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಕಾರ್ಯ ನಿರ್ವಹಿಸಿತ್ತು. 5 ವರ್ಷಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳು ಅಭಿವೃದ್ಧಿ ಹೊಂದಿದ ನಂತರ ಕಾರ್ಯಾಲಯವನ್ನು ಹೊಸ ಕೋಟೆಗೆ ಸ್ಥಳಾಂತರ ಗೊಳಿಸಲು ನಿರ್ಧರಿಸಲಾಗಿತ್ತು.
ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಆನೇಕಲ್ಲು, ಬೆಂಗಳೂರು ದಕ್ಷಿಣ ತಾಲೂಕು ಹಾಗೂ ರಾಮನಗರ ಜಿಲ್ಲೆಯ ಕಾಲೇಜುಗಳು ಕಾರ್ಯನಿರ್ವಹಿಸಲಿವೆ. ಸೆಂಟ್ರಲ್ ಕಾಲೇಜು ಹಳೇ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲೇ ಉಳಿಯಲಿದೆ. ಇದನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಲು ತೀರ್ಮಾನಿಸಲಾಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು.












Click it and Unblock the Notifications