ಕೆಪಿಎಸ್‌ಸಿ ಅಕ್ರಮದ ತನಿಖೆ ಸಿಐಡಿ ಹೆಗಲಿಗೆ

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಪಿಎಸ್‌ಸಿ ಅಕ್ರಮಗಳ ಬಗ್ಗೆ ತನಿಖೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅದರಂತೆ ಅಕ್ರಮಗಳ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಒಂದು ತಿಂಗಳಿನಲ್ಲಿ ವರದಿ ನೀಡಲು ಸೂಚಿಸಲಾಗಿದೆ ಎಂದರು.
ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಪ್ರತಿಪಕ್ಷಗಳು ಈ ಕುರಿತು ಸರ್ಕಾರದಿಂದ ಉತ್ತರ ಕೇಳಿದ್ದವು. ಅಕ್ರಮಗಳ ಬಗ್ಗೆ ತನಿಖೆ ನಡೆಸುವುದಾಗಿ ಸದನದಲ್ಲಿಯೂ ಹೇಳಿಕೆ ನೀಡಿದ್ದೆ. ಆದ್ದರಿಂದ ಸಿಐಡಿ ಹೆಗಲಿಗೆ ತನಿಖೆಯನ್ನು ವಹಿಸಲಾಗಿದೆ ಎಂದು ಹೇಳಿದರು. (ಅಧಿವೇಶನದಲ್ಲಿ ನಡೆದಿದ್ದೇನು?)
ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಕೆಪಿಎಸ್‌ಸಿ ಗ್ರೂಪ್ ಎ ಮತ್ತು ಬಿ ವೃಂದದ ಒಟ್ಟು 362 ನಾನಾ ಹುದ್ದೆಗಳಿಗೆ ನಡೆಸಿರುವ ನೇಮಕಾತಿಗಳನ್ನು ತಡೆ ಹಿಡಿಯಲಾಗುತ್ತದೆ. ಅವ್ಯವಹಾರದಲ್ಲಿ ಭಾಗಿಯಾಗಿರುವ ಮೂವರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದರು.
ಯುಪಿಎಸ್‌ಸಿ ಮಾದರಿ : ಕೆಪಿಎಸ್‌ಸಿ ಅಭ್ಯರ್ಥಿಗಳ ಸಂದರ್ಶನ ನಡೆಸುವಾಗ ಯುಪಿಎಸ್‌ಸಿ ಮಾದರಿ ನಿಯಮಗಳನ್ನು ಅನುಸರಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಅಕ್ರಮ ಬಯಲಾಗಿತ್ತು : ಹಣ ನೀಡಿದರೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುತ್ತೇವೆ ಎಂದು ಮೂವರು ಅಧಿಕಾರಿಗಳು ಲಂಚ ಕೇಳುವುದು. ಕೆಲವು ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯ ರಹಸ್ಯ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿತ್ತು.
ತಕ್ಷಣ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗಿತ್ತು. ಉಭಯ ಸದನದಲ್ಲಿಯೂ ಕೆಪಿಎಸ್‌ಸಿ ಹಗರಣ ಭಾರೀ ಸದ್ದು ಮಾಡಿತ್ತು. ಕೆಪಿಎಸ್‌ಸಿ ಸದಸ್ಯರೇ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಆಯ್ಕೆಗಾಗಿ ಲಕ್ಷಾಂತರ ರುಪಾಯಿ ಅಪೇಕ್ಷಿಸುತ್ತಿದ್ದಾರೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೆಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದರು.
75 ಲಕ್ಷದ ಆಮಿಷ : ಡಾ. ಮೈತ್ರಿ ಎಂಬುವವರು ಪ್ರವೇಶ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದರೂ, ಸಂದರ್ಶನದಲ್ಲಿ ಅವರಿಗೆ ಕಡಿಮೆ ಅಂಕ ನೀಡಲಾಗಿದೆ. ಹೆಚ್ಚು ಅಂಕ ಬೇಕಾದರೆ, 75 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದು, ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿತ್ತು.











Click it and Unblock the Notifications