ಅಧಿವೇಶನಕ್ಕೆ ಶುಭಮಂಗಳ; ಶಾಸಕರಿಗೆ ಗಳಿಕೆಯ ರಜೆ
ಬೆಂಗಳೂರು, ಜೂ.12 : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಮೊದಲ ಅಧಿವೇಶನ ಮುಕ್ತಾಯವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಚಿವರ ಪ್ರಕಾರ ಅಧಿವೇಶನ ಯಶಸ್ವಿಯಾಗಿದೆ. ರಾಜ್ಯಪಾಲರ ಭಾಷಣದ, ಚರ್ಚೆ ಮುಂತಾದವುಗಳಲ್ಲೇ ಅಧಿವೇಶನ ಮುಕ್ತಾಯಗೊಂಡಿದೆ.
ಆರು ದಿನಗಳ ಅಧಿವೇಶನವನ್ನು ನಾಲ್ಕು ದಿನ ವಿಸ್ತರಿಸಿ, ಒಟ್ಟು ಹತ್ತು ದಿನ ಅಧಿವೇಶನ ನಡೆಸಲಾಯಿತು. ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಮಂಡಿಸಿ, ಅನುಮೋದನೆ ಪಡೆಯಲಾಯಿತು. ಜುಲೈ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ನೂತನ ಶಾಸಕರ ಪ್ರಮಾಣ ವಚನ, ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ಹೆಚ್.ಆರ್.ಭಾರದ್ವಾಜ್ ಅವರ ಭಾಷಣ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ, ಕಾವೇರಿ ವಿವಾದ, ಸರ್ಕಾರ ನೂತನ ಯೋಜನೆಗಳ ಕುರಿತ ಚರ್ಚೆಯೇ ಹತ್ತುದಿನ ಅಧಿವೇಶನದ ಪ್ರಮುಖ ಅಂಶಗಳು.
ಮೂವರು ಮಾಜಿ ಸಿಎಂಗಳು ಅವರ ಮೇಲಿಟ್ಟಿದ್ದ ನಿರೀಕ್ಷೆ ಹುಸಿಗೊಳಿಸದೆ, ಸದನಸಲ್ಲಿ ಸರ್ಕಾರವನ್ನು ಸರಿಯಾಗಿ ಇಕ್ಕಟ್ಟಿಗೆ ಸಿಲುಕಿಸಿದರು. ಮಠಾಠಿಯಲ್ಲಿ ಪ್ರಮಾಣ ವಚನ ಸ್ವೀಕಾರ. ಶಾಸಕ ಡಿ.ಕೆ.ಶಿವಕುಮಾರ್ ಹತ್ತು ದಿನವೂ ಗೈರು ಮುಂತಾದವುಗಳು ಅಧಿವೇಶದ ಸ್ವಾರಸ್ಯಕರ ಅಂಶಗಳು. ಇಂತಹ ಕೆಲವು ಘಟನೆಗಳ ಬಗ್ಗೆ ತಿಳಿಯೋಣ.

ಮರಾಠಿ, ತುಳುವಿನಲ್ಲಿ ಪ್ರಮಾಣ ವಚನ
ವಿಧಾನಸಭೆ ಅಧಿವೇಶನದ ಮೊದಲ ದಿನ ಬೆಳಗಾವಿ ಜಿಲ್ಲೆ ಖಾನಾಪುರದ ಶಾಸಕ ಅರವಿಂದ್ ಚಂದ್ರಕಾಂತ್ ಪಾಟೀಲ್ (ಪಕ್ಷೇತರ) ಮತ್ತು ಬೆಳಗಾವಿ ದಕ್ಷಿಣ ಶಾಸಕ ಸಂಭಾಜಿ ಲಕ್ಷ್ಮಣ ಪಾಟೀಲ (ಪಕ್ಷೇತರ) ಮರಾಠಿಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬೆಳ್ತಂಗಡಿ ಶಾಸಕ ವಸಂತ್ ಬಂಗೇರಾ ತುಳು ಭಾಷೆಯಲ್ಲಿ ಪ್ರಮಾಣ ವಚನ ಸ್ಪೀಕರಿಸಿ ಗಮನ ಸೆಳೆದರು.

ರೇವಣ್ಣನ ನಿಂಬೆಹಣ್ಣು ಪುರಾಣ
ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ರಾಹುಕಾಲ ಲೆಕ್ಕಾಚಾರ ಮತ್ತು ಜೇಬಿನಲ್ಲಿ ನಿಂಬೆಹಣ್ಣು ಇಟ್ಟುಕೊಳ್ಳುವ ಬಗ್ಗೆ ಸದನದಲ್ಲಿ ಚರ್ಚೆ ನಡೆದಿತ್ತು. ರೇವಣ್ಣ ರಾಹುಕಾಲ ಮುಗಿದ ತಕ್ಷಣ ಅಧಿವೇಶನಕ್ಕೆ ಹಾಜರಾಗಿದ್ದು ಕಂಡು, ಸ್ವತಃ ಸಿಎಂ ಸಿದ್ದರಾಮಯ್ಯ "ರೇವಣ್ಣ ಒಳ್ಳೆ ಸಮಯವೇ" ಎಂದು ರೇವಣ್ಣ ಕಾಲೆಳೆದರು. ರೇವಣ್ಣ ಜೇಬಿನಲ್ಲಿ ನಿಂಬೆಹಣ್ಣು ಯಾವಾಗಲೂ ಇಟ್ಟುಕೊಳ್ಳುವುದರಿಂದ ಬೆಲೆ ಹೆಚ್ಚಾಗಿದೆ ಎಂಬ ಮಾತು ಸದನದಲ್ಲಿ ಕೇಳಿಬಂತು. [ಪ್ರಮೀಳಾ ನೇಸರ್ಗಿ ನಿಂಬೆಹಣ್ಣು ಪುರಾಣ]

ಎರಡನೇ ದಿನ ಬಂದ್ರು ಕುಮಾರಸ್ವಾಮಿ
ಮೊದಲ ದಿನದ ಕಲಾಪದಿಂದ ದೂರ ಉಳಿದಿದ್ದ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಎರಡನೇ ದಿನ ಸದನಕ್ಕೆ ಆಗಮಿಸಿ, ಶಾಸಕರಾಗಿ ಪ್ರಮಾಣ ವಚನ ಸ್ಪೀಕರಿಸಿದರು. ಹತ್ತು ದಿನದ ಕಲಾಪದಲ್ಲೂ ಸಕ್ರಿಯವಾಗಿ ಭಾಗವಹಿಸಿದ ಅವರು, ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ಮಾಡಿದರು.

ಬಸವರಾಜ್ ಹೊರಟ್ಟಿ ಎಸ್ಎಂಎಸ್
ವಿಧಾನಪರಿಷತ್ತಿನಲ್ಲಿ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಎಸ್ಎಂಎಸ್ ಓದುವ ಮೂಲಕ ಸಿದ್ದರಾಮ್ಯ ಕೆಣಕಿದ್ದರು. "ವಾಸಕ್ಕೆ ಆಶ್ರಯ ಮನೆಯಿರಲು, ರೂಪಾಯಿಗೊಂದು ಕೆಜಿ ಅಕ್ಕಿ ಸಿಗುತ್ತಿರಲು, ರಾತ್ರಿ ನಷೆಗೆ ಅಗ್ಗದ ಮದ್ಯವಿರಲು, ಕೂಲಿ ಕೆಲಸಕ್ಕೆ ಬೆಂಕಿ ಹಚ್ಚೆಂದ ಸಿದ್ದರಾಮಯ್ಯ" ಎಂದು ಸರ್ಕಾರ ಯೋಜನೆಗಳನ್ನು ಲೇವಡಿ ಮಾಡಿದ್ದರು.

ಸದನಕ್ಕೆ ಬಂದ್ರು ಖೇಣಿ, ಪುಟ್ಟಣ್ಣಯ್ಯ
ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಉದ್ಯಮಿ ಅಶೋಕ್ ಖೇಣಿ ಮತ್ತು ರೈತ ಮುಖಂಡ ಕೆ.ಎಸ್.ಪುಟ್ಟಣಯ್ಯ ಸದನದಲ್ಲಿ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ವಿಧಾನಸೌಧದ ಗೋಡೆ ಕಡೆವಿದ ಪ್ರಕರಣಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಪುಟ್ಟಣ್ಣಯ್ಯ ಸಕ್ರಿಯರಾಗಿ ಪಾಲ್ಗೊಂಡಿದ್ದರು.

ಗೋಡೆ ಕಲಹ
ಅಧಿವೇಶನದ ಐದನೇ ದಿನ ಸದನದಲ್ಲಿ ಗೋಡೆ ಕೆಡವಿದ ಬಗ್ಗೆ ಬಹಳ ಚರ್ಚೆ ನಡೆಯಿತು. ಅರಣ್ಯ ಸಚಿವ ರಮಾನಾಥ್ ರೈ, ತಮ್ಮ ಕೊಠಡಿಯ ಗೋಡೆ ಕೆಡವಿದ್ದಕ್ಕೆ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪಕ್ಷಬೇಧ ಮರೆತು ಹಲವಾರು ಶಾಸಕರು ಇದಕ್ಕೆ ಬೆಂಬಲ ಸೂಚಿಸಿದರು. ನಂತರ ತನಿಖೆಗೆ ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಪ್ರಕರಣ ಪರಿಹಾರ ಮಾಡಲಾಯಿತು.

ಸಿದ್ದರಾಮಯ್ಯ ಮೇಲೆ ವಚನ ಹೇಳಿದ ದತ್ತಾ
ಜೆಡಿಎಸ್ ಶಾಸಕ ವೈ.ಎಸ್.ವಿ.ದತ್ತಾ "ಕಾಂಗ್ರೆಸ್ ಸರ್ಕಾರದೊಳಗೆ ಜನತಾ ಪರಿವಾರವನ್ನು ಕಾಣದಂತೆ ತುರುಕಿರೆ, ಆಪ್ತರಿಗೆ ಆಯಕಟ್ಟಿನ ಖಾತೆಗಳನ್ನು ಸದ್ದಿಲ್ಲದೇ ನೀಡಿರೆ, ಹಿರಿಯ ನಾಯಕರನ್ನು ಅಲಕ್ಷಿಸಿಯೂ ಅಮ್ಮನ ಅಂಕಿತ ಪಡದೆ ಬಿಟ್ಟ ಅಣ್ಣ... ಸಿದ್ರಾಮಣ್ಣ" ಸ್ವ ರಚಿತ ಕವನ ಓದಿ ಸಿದ್ದರಾಮಯ್ಯ ಅವರಿಗೆ ಗುದ್ದು ನೀಡಿದ್ದರು.












Click it and Unblock the Notifications