ಬೆಂಗಳೂರಿಗೆ ಬರ್ತಾರೆ ಅಖಿಲೇಶ್ ಯಾದವ್!

ಗುರುವಾರ ಸಂಜೆ ಅಖಿಲೇಶ್ ಯಾದವ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮೊದಲು ಅವರು ಎಫ್‌ಕೆಸಿಸಿಐನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ರಾಜ್ಯದ ವಿವಿಧ ಉದ್ಯಮಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.
ಶುಕ್ರವಾರವನ್ನು ಅಖಿಲೇಶ್ ಯಾದವ್ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯಗಳಿಗಾಗಿ ಮೀಸಲಿಟ್ಟಿದ್ದಾರೆ. ಬೆಳಗ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ಅವರು ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ಗೊಂಬೆಗಳ ನಾಡು ಚನ್ನಪಟ್ಟಣದಲ್ಲಿ, ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
ಚನ್ನಪಟ್ಟಣ ರಾಜ್ಯದ ಏಕೈಕ ಸಮಾಜವಾದಿ ಪಕ್ಷದ ಶಾಸಕ ಸಿ.ಪಿ.ಯೋಗೇಶ್ವರ್ ಅವರ ತವರು ಕ್ಷೇತ್ರ. ಆದ್ದರಿಂದ, ಅವರನ್ನು ಅಭಿನಂದಿಸಿ, ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಅಖಿಲೇಶ್ ಚನ್ನಪಟ್ಟಣದಲ್ಲಿ ಮಾತನಾಡಲಿದ್ದಾರೆ. ಯೋಗೇಶ್ವರ್ ಪರ ಚುನಾವಣಾ ಪ್ರಚಾರ ಮಾಡಲು ಅಖಿಲೇಶ್ ಯಾದವ್ ಆಗಮಿಸಿರಲಿಲ್ಲ.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸುವುದು ಅಖಿಲೇಶ್ ಯಾದವ್ ಅವರ ಪ್ರಮುಖ ಗುರಿಯಾಗಿದೆ. ಬಿ.ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷ, ಸಮಾಜವಾದಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂಬ ಸುದ್ದಿಯೂ ಹರಡಿದೆ.
ಮೈಸೂರು ಭೇಟಿ : ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ನಂತರ ಅಖಿಲೇಶ್ ಯಾದವ್ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ತಾವು ಓದಿದ ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿಗೆ ಶುಕ್ರವಾರ ಅವರು ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.












Click it and Unblock the Notifications