ಸಿದ್ದರಾಮಯ್ಯ ಪರಿಸ್ಥಿತಿ ಕರಿಬೇವು ಸೊಪ್ಪಾಗದಿರಲಿ
ಬೆಂಗಳೂರು, ಜೂ 8: ನೀವು ಅತೀ ಅವಸರದಿಂದ ತೆಗೆದುಕೊಳ್ಳುತ್ತಿರುವ ಜನಪರ ಕಾರ್ಯಕ್ರಮ ನೋಡಿದರೆ ನಿಮ್ಮ ಸಿಎಂ ಹುದ್ದೆ ಕ್ಷಣಿಕ ಎಂದೆನೆಸುತ್ತದೆ.
ಕರಿಬೇವು ಸೊಪ್ಪನ್ನು ಒಗ್ಗರಣೆಗೆ ಹಾಕಿ ನಂತರ ಬಿಸಾಕಿದ ಹಾಗೆ ನಿಮ್ಮ ಪರಿಸ್ಥಿತಿ ಆಗದಿರಲಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಿವಿಮಾತನ್ನು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಇನ್ನೇನು ಹತ್ತಿರ ಬರಲಿದೆ. ಈಗ ನಿಮ್ಮ ಬೆನ್ನು ತಟ್ಟುತ್ತಿರುವವರು ನಿಮ್ಮ ಬೆನ್ನಿಗೆ ಚೂರಿ ಹಾಕಿ ಸಿಎಂ ಕುರ್ಚಿಯಲ್ಲಿ ನಿಮ್ಮನ್ನು ಇರಲು ಬಿಡುವುದಿಲ್ಲ.
ತುರಾತುರಿಯಲ್ಲಿ ನೀವು ಮಾಡುತ್ತಿರುವ ಮಹತ್ತರ ಘೋಷಣೆಯನ್ನು ನೋಡಿದರೆ ನನಗೆ ಈ ಮಾತು ಹೇಳಬೆಂಕೆಂದೆನಿಸುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬರಲು ತನ್ನ ಕೊಡುಗೆ ಕಾರಣ ಎನ್ನುವ ಚಿತ್ರವೊಂದನ್ನು ಉಲ್ಲೇಖಿಸಿ ಮಾತನಾಡಿದ ಯಡಿಯೂರಪ್ಪ, ತಾನು ಅಧಿಕಾರದಿಂದ ಕೆಳಗಿಳಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಕಾರಣರಲ್ಲ, ನನ್ನ ಹಿಂದಿನ ಪಕ್ಷದವರು ಎಂದು ಬಿಜೆಪಿ ಕಡೆ ಬೆರಳು ಮಾಡಿ ತೋರಿಸಿದರು.
ನಾನು ಸಿಎಂ ಆಗಿದ್ದಾಗ ನನ್ನ ತೇಜೋವಧೆ ಮಾಡಿದ್ದು ಸಾಕು, ಇನ್ನಾದರೂ ನನ್ನನ್ನು ಗೌರವದಿಂದ ನನ್ನ ಪಾಡಿಗೆ ನಾನು ಬದಕಲು ಬಿಡಿ. ಕೆಜೆಪಿ ಬೆಳೆಸವು ಪ್ರಾಮಾಣಿಕ ಪ್ರಯತ್ನದಲ್ಲಿದ್ದೇನೆ ಎಂದು ಬಿಜೆಪಿ ಮುಖಂಡರಲ್ಲಿ ಯಡಿಯೂರಪ್ಪ ಕೇಳಿಕೊಂಡರು.
ಹಿಂದಿನ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು ಎಂದು ರಾಜ್ಯಪಾಲರ ಕೈಯಲ್ಲಿ ಭಾಷಣ ಮಾಡಿಸಿದ್ದೀರಿ. ಈಗ ನಿಮ್ಮದೇ ಸರಕಾರವಿದೆ. ನನ್ನ ಅವಧಿಯಲ್ಲಿ ಮತ್ತು ನಂತರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಬಯಲುಗೆಳೆದು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಿದ್ದರಾಮಯ್ಯಗೆ ಯಡಿಯೂರಪ್ಪ ಸವಾಲೆಸೆದಿದ್ದಾರೆ.












Click it and Unblock the Notifications