ಗೋವಾ : ಬಿಜೆಪಿ ಕಾರ್ಯಕಾರಣಿಗೆ ಅಡ್ವಾಣಿ ಗೈರು

ಹಿರಿಯ ನಾಯಕ ಅಡ್ವಾಣಿ ಅನಾರೋಗ್ಯದ ಕಾರಣ ನೀಡಿ ಶುಕ್ರವಾರದ ಸಭೆಗೆ ಗೈರು ಹಾಜರಾಗಿದ್ದಾರೆ. ಆದರೆ, ಶನಿವಾರ ಹಾಗೂ ಭಾನುವಾರ ಅವರು, ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವಾರು ನಾಯಕರು ಮೊದಲ ದಿನದ ಸಭೆಯಲ್ಲಿ ಭಾಗವಹಿಸಿದ್ದಾರೆ. ನರೇಂದ್ರ ಮೋದಿ ಅವರಿಗೆ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ಎಲ್.ಕೆ.ಅಡ್ವಾಣಿ ಅವರು ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡ ನಂತರ ಮೋದಿ ಅವರಿಗೆ ಸ್ಥಾನಮಾನ ನೀಡುವ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ. ಅಡ್ವಾಣಿ, ಸುಷ್ಮಾ ಸ್ವರಾಜ್ ಹಾಗೂ ಅನಂತ್ ಕುಮಾರ್ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಅಡ್ವಾಣಿ ಸಮ್ಮುಖದಲ್ಲೇ ಪ್ರಚಾರ ಸಮಿತಿ ಬಗ್ಗೆ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಯಶವಂತ ಸಿನ್ಹಾ ವಿವರಣೆ : ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ಪಾತ್ರದ ಕುರಿತು ಯಾವುದೇ ಘೋಷಣೆಗಳು ಕಾರ್ಯಕಾರಣಿ ಸಭೆಯಲ್ಲಿ ಹೊರಬೀಳುವ ಸಾಧ್ಯತೆ ಇಲ್ಲ ಎಂದಿರುವ ಯಶವಂತ ಸಿನ್ಹಾ, ನಾಯಕತ್ವದ ಕುರಿತು ಘೋಷಣೆ ಮಾಡಲು ಕಾರ್ಯಕಾರಿಣಿಯಂತಹ ಬೃಹತ್ ಸಮಾವೇಶ ಸೂಕ್ತವಾದ ವೇದಿಕೆ ಅಲ್ಲ.
ನಾಯಕತ್ವದಂತಹ ವಿಷಯಗಳನ್ನು ಚರ್ಚಿಸಿ ಘೋಷಣೆಗಳನ್ನು ಮಾಡಲು ಪಕ್ಷದ ಸಂಸದೀಯ ಮಂಡಳಿಯೇ ಸೂಕ್ತವಾದ ವೇದಿಕೆ. ಸಂಸದೀಯ ಮಂಡಳಿಯಲ್ಲಿ ಮೋದಿ ಸ್ಥಾನಮಾನದ ಬಗ್ಗೆ ಮೊದಲು ಚರ್ಚೆ ನಡೆಯಬೇಕು ಎಂದು ಹೇಳಿದ್ದಾರೆ.












Click it and Unblock the Notifications