ಯಡಿಯೂರಪ್ಪ ಬಿಜೆಪಿಗೆ ವಾಪಸಾಗೋಲ್ಲಾರ್ರೀ: ಶೋಭಾ

ಇನ್ನು ತಮ್ಮ (ಶೋಭಾ ಕರಂದ್ಲಾಜೆ) ಮಧ್ಯಸ್ಥಿಕೆಯಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆತರಲು ಆರೆಸ್ಸೆಸ್ ಪ್ರಯತ್ನ ನಡೆಸುತ್ತಿದೆ ಎಂಬುದೂ ತಲೆಬುಡವಿಲ್ಲದ ಸುಳ್ ಸುದ್ದಿ ಎಂದು ಅವರು ಅಲ್ಲಗಳೆದಿದ್ದಾರೆ.
ಸದ್ಯಕ್ಕೆ ಬಿಜೆಪಿ ಬಿಜೆಪಿಯೇ, ಕೆಜೆಪಿ ಕೆಜೆಪಿಯೇ!:
ಚುನಾವಣೆಯಲ್ಲಿ ಸೋತ ಬಳಿಕ ತವರೂರಾರದ ಪುತ್ತೂರಿನಲ್ಲಿ ಆಯಾಸ ಪರಿಹರಿಸಿಕೊಳ್ಳುತ್ತಿರುವ ಮಾಜಿ ಇಂಧನ ಸಚಿವೆ ಶೋಭಾ ಮೇಡಂ ಬಿಜೆಪಿ ಮತ್ತು ಕೆಜೆಪಿ ವಿಲೀನ ಅಥವಾ ರಾಜಕೀಯ ಹೊಂದಾಣಿಕೆ ಕುರಿತು ಈ ಕ್ಷಣದ ತನಕ ಯಾವುದೇ ಮಾತುಕತೆ ನಡೆದಿಲ್ಲ ಎಂದು ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಬಿಜೆಪಿ ಜತೆ ಮಾತುಕತೆ ಅಥವಾ ಹೊಂದಾಣಿಕೆಯ ಕುರಿತು ಕೆಜೆಪಿ ವರಿಷ್ಠರು ತಲೆ ಕೆಡಿಸಿಕೊಂಡಿಲ್ಲ. ಲೋಕಸಭಾ ಚುನಾವಣಾ ಸಿದ್ಧತೆಯ ಕುರಿತು ಅವರು ಗಂಭೀರ ಚಿಂತನೆ ನಡೆಸುತ್ತಿದ್ದಾರೆಯೇ ಹೊರತು ಬಿಜೆಪಿಯ ಕುರಿತು ಆಲೋಚಿಸುವ ಯಾವ ಅಗತ್ಯವೂ ಕೆಜೆಪಿಗೆ ಇಲ್ಲ ಎಂದು ಕೆಜೆಪಿ ನಾಯಕಿ ಶೋಭಾ ಅವರು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಬುಧವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮತ್ತೆ ಬಿಜೆಪಿ ಮೇಲೆ ಕಿಡಿಕಾರಿದ ನಾಯಕಿ:
ಚುನಾವಣೆ ಮುಗಿಯುತ್ತಿದ್ದಂತೆ ನಾನು ಉತ್ತರ ಭಾರತ ಪ್ರವಾಸದಲ್ಲಿದ್ದೆ. ಹಾಗಾಗಿ ನಾನು ಸಂಘ ಪರಿವಾರದ ಯಾವುದೇ ನಾಯಕರನ್ನು ಭೇಟಿ ಮಾಡುವ ಪ್ರಮೇಯ ಉದ್ಭವಿಸದು. ಚುನಾವಣೆಯಲ್ಲಿ ಬಿಜೆಪಿಗೆ ಮತ್ತು ಅದರ ಸ್ವಾರ್ಥ ನಾಯಕರಿಗೆ ಮತದಾರರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಅಷ್ಟೇ ಅಲ್ಲ, ಲೋಕಸಭಾ ಚುನಾವಣೆಯಲ್ಲಿಯೂ ಮತದಾರರು ಬಿಜೆಪಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಬಿಜೆಪಿಯನ್ನು ಕಟ್ಟಲು 40 ವರ್ಷಗಳ ಕಾಲ ಹೋರಾಟ ಮಾಡಿದ ಯಡಿಯೂರಪ್ಪ ಅವರನ್ನು ಅವಮಾನಕರವಾಗಿ ಪಕ್ಷದಿಂದ ಹೊರ ಹಾಕಿದ ತಪ್ಪನ್ನು ಕರ್ನಾಟಕದ ಜನತೆ ಎಂದೂ ಕ್ಷಮಿಸುವುದಿಲ್ಲ. ಬಿಜೆಪಿಯಲ್ಲಿರುವ ರಾಜ್ಯ ಮತ್ತು ಕೇಂದ್ರ ಮಟ್ಟದ ಕೆಲ ನಾಯಕರು ಇನ್ನೂ ಕೂಡ ಪಾಠ ಕಲಿಯಲಿದ್ದಾರೆ. ಯಡಿಯೂರಪ್ಪ ಇಲ್ಲದ ಬಿಜೆಪಿಯ ಪರಿಸ್ಥಿತಿ ಇನ್ನಷ್ಟು ಹೀನಾಯ ಸ್ಥಿತಿಗೆ ಬರಲಿದೆ ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications