ಮೋದಿ ಪ್ರಧಾನಿ ಅಭ್ಯರ್ಥಿ ಎಂದ ಕರ್ನಾಟಕ ಬಿಜೆಪಿ

ಖಾಸಗಿ ಹೋಟೆಲ್ ನಲ್ಲಿ ವಿಧಾನ ಸಭೆ ಕಲಾಪದ ಕುರಿತಂತೆ ಚರ್ಚಿಸಲು ಸೇರಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಒಮ್ಮತದ ಅಭ್ಯರ್ಥಿ ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯಲ್ಲಿ ಹಾಜರಿದ್ದ ಶಾಸಕರು ಮೋದಿ ಹೆಸರಿಗೆ ಬೆಂಬಲ ಸೂಚಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಡಿ.ವಿ.ಸದಾನಂಗೌಡ ಮತ್ತು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮೋದಿ ಪ್ರಧಾನಿ ಅಭ್ಯರ್ಥಿ ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆ. ಜೂ.6ರ ಗುರುವಾರ ರಾಜ್ಯ ಬಿಜೆಪಿ ಉಸ್ತುವಾರಿ ಥಾವರ್ ಚಂದ್ ಗೇಹ್ಲೋಟ್ ಬೆಂಗಳೂರಿಗೆ ಆಗಮಿಸಲಿದ್ದು, ಅವರಿಗೆ ನಿರ್ಣಯದ ಪತ್ರ ನೀಡಲಾಗುತ್ತದೆ.
ಮೊದಲು ಆಕ್ಷೇಪ : ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೊದಲು ಪ್ರಧಾನಿ ಅಭ್ಯರ್ಥಿ ಬಗ್ಗೆ ನಿರ್ಣಯ ಕೈಗೊಳ್ಳಲು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆಗೆ ಪಕ್ಷ ಸಿದ್ಧತೆಗಳನ್ನು ಪ್ರಾರಂಭಿಸಿಲ್ಲ. ಈಗಲೇ ಪ್ರಧಾನಿ ಅಭ್ಯರ್ಥಿ ನಿರ್ಣಯ ತೆಗೆದುಕೊಳ್ಳುವುದು ಬೇಡ ಎಂದು ಹೇಳಿದರು.
ರಾಷ್ಟ್ರೀಯ ನಾಯಕರಿಗೆ ಜವಾಬ್ದಾರಿ : ಬಿಜೆಪಿ ಪ್ರಧಾನಿ ಅಭ್ಯರ್ಥಿ ಕುರಿತ ನಿರ್ಣಯವನ್ನು ದೆಹಲಿಯಲ್ಲಿರುವ ರಾಷ್ಟ್ರೀಯ ನಾಯಕರು ತೆಗೆದುಕೊಳ್ಳಬೇಕು. ನಾವು ನಿರ್ಣಯ ಕೈಗೊಳ್ಳಬಾರದು ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಿಎಂ ಸದಾನಂಗೌಡ ರಾಷ್ಟ್ರೀಯ ನಾಯಕರ ತೀರ್ಮಾನದಂತೆ ನಡೆಯೋಣ, ಆದರೆ, ರಾಜ್ಯದ ಪಕ್ಷದ ವತಿಯಿಂದ ಪ್ರಧಾನಿ ಅಭ್ಯರ್ಥಿ ನಿರ್ಣಯ ಕೈಗೊಂಡು ವರಿಷ್ಠರಿಗೆ ಕಳುಹಿಸಿದರೆ ತಪ್ಪಿಲ್ಲ ಎಂದು ಸಮಾಧಾನ ಪಡಿಸಿ, ನಿರ್ಣಯ ಮಂಡಿಸಿ, ಒಪ್ಪಿಗೆ ಪಡೆದರು.
ಪ್ರತಿ ಕ್ಷೇತ್ರಕ್ಕೆ ಪ್ರತ್ಯೇಕ ಯೋಜನೆ : ಶಾಸಕಾಂಗ ಸಭೆಯ ಬಳಿಕ ಮಾತನಾಡಿದ ಪ್ರಹ್ಲಾದ್ ಜೋಶಿ ಜೂ.10ರ ನಂತರ ಲೋಕಸಭೆ ಚುನಾವಣೆಯನ್ನು ಪಕ್ಷ ಆರಂಭಿಸಲಿದೆ. ಪ್ರತಿ ಲೋಕಸಭೆ ಕ್ಷೇತ್ರಕ್ಕೂ ಪ್ರತ್ಯೇಕ ಯೋಜನೆ ತಯಾರಿಸಿ ಮತ ಕೇಳುತ್ತೇವೆ.
ಜೂ.6ರ ಗುರುವಾರ ಬಿಜೆಪಿ ರಾಜ್ಯಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರ ಸಭೆ ಕರೆಯಲಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಥಾವರ್ ಚಂದ್ ಗೇಹ್ಲೋಟ್ ಸಭೆಗೆ ಆಗಮಿಸಲಿದ್ದಾರೆ. ಸಭೆಯಲ್ಲಿ ಲೋಕಸಭೆ ಚುನಾವಣೆ ಬಗ್ಗೆ ವಿವರವಾದ ಚರ್ಚೆ ನಡೆಯಲಿದೆ ಎಂದು ಹೇಳಿದರು.












Click it and Unblock the Notifications