ಗುಲ್ಬರ್ಗ, ಧಾರವಾಡ ಹೈಕೋರ್ಟ್ ಪೀಠ ಕಾಯಂ

ಮಂಗಳವಾರ ರಾತ್ರಿ ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಧಾರವಾಡ ಮತ್ತು ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠಗಳನ್ನು ಕಾಯಂಗೊಳಿಸಿ ವರ್ಷದ 365 ದಿನಗಳ ಕಾಲವು ಕಲಾಪ ನಡೆಯಲು ಕೇಂದ್ರ ಸಚಿವ ಸಭೆ ಒಪ್ಪಿಗೆ ನೀಡಿತು.
ಈ ಎರಡೂ ಪೀಠಗಳನ್ನು ಕಾಯಂಗೊಳಿಸುವ ಮೂಲಕ ಉತ್ತರ ಕರ್ನಾಟಕ ಭಾಗದ ಜನರು ಬಹುದಿನಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಇಷ್ಟುದಿನ ಈ ಇವುಗಳು ಸಂಚಾರಿ ಪೀಠಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಆದ್ದರಿಂದ ನಿರಂತರವಾಗಿ ಪ್ರಕರಣಗಳ ವಿಚಾರಣೆ ನಡೆಯಲಿದೆ.
ಈ ಎರಡೂ ಪೀಠಗಳನ್ನು ಕಾಯಂ ಮಾಡಲು ಅಗತ್ಯವಿರುವ ಸೌಲಭ್ಯಗಳನ್ನು ನೀಡುವುದಾಗಿ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಆದ್ದರಿಂದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪೀಠಗಳನ್ನು ಕಾಯಂ ಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಕಾಯಂ ಹೈಕೋರ್ಟ್ ಪೀಠವಿದೆ. 2008ರಲ್ಲಿ ಧಾರವಾಡ ಮತ್ತು ಗುಲ್ಬರ್ಗಗಳಲ್ಲಿ ಸಂಚಾರಿ ಪೀಠಗಳನ್ನು ಆರಂಭಿಸಲಾಗಿತ್ತು. ಉತ್ತರ ಕರ್ನಾಟಕದ ಭಾಗದ ಜನರು ಬೆಂಗಳೂರಿಗೆ ವಿಚಾರಣೆಗಾಗಿ ಆಗಮಿಸುವುದು ಕಷ್ಟವಾಗಲಿದೆ ಎಂಬ ಕಾರಣಕ್ಕಾಗಿ ಸಂಚಾರಿ ಪೀಠಗಳನ್ನು ರಚಿಸಲಾಗಿತ್ತು.
ಸದ್ಯ ಧಾರವಾಡ ಸಂಚಾರಿ ಪೀಠದಲ್ಲಿ 6 ರಿಂದ 7 ಜನ ನ್ಯಾಯಮೂರ್ತಿಗಳು ಮತ್ತು ಗುಲ್ಬರ್ಗ ಪೀಠದಲ್ಲಿ 3-4 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಸಂಚಾರಿ ಹೈಕೋರ್ಟ್ ಪೀಠಗಳನ್ನು ಕಾಯಂ ಮಾಡಬೇಕು ಎಂಬ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ ಒಪ್ಪಿಗೆ ಸೂಚಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದವು.
ವಿಚಾರಣೆ ಹೇಗೆ : ಧಾರವಾಡದ ಸಂಚಾರಿ ಪೀಠ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಜ್ಯಗಳ ವಿಚಾರಣೆ ನಡೆಸುತ್ತಿದೆ.
ಬಿಜಾಪುರ, ಬೀದರ್, ಗುಲ್ಪರ್ಗ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಜ್ಯಗಳ ವಿಚಾರಣೆಯನ್ನು ಗುಲ್ಪರ್ಗ ಪೀಠ ನಡೆಸುತ್ತಿದೆ. ಈ ಸಂಚಾರಿ ಪೀಠಗಳು ಕಾಯಂ ಆಗಿರುವುದರಿಂದ ಉತ್ತರ ಕರ್ನಾಟಕ ಭಾಗದ ಜನರ ಕನಸು ಈಡೇರಿದೆ.












Click it and Unblock the Notifications