ವಿಧಾನಸೌಧದ ಗೋಡೆ ಒಡೆಸಿದ ಅರಣ್ಯ ಸಚಿವರು!

ರಮಾನಾಥ ರೈ ಅವರಿಗೆ ವಿಧಾನಸೌಧ ಮೂರನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 304 ಮತ್ತು 305ನ್ನು ನೀಡಲಾಗಿತ್ತು. ಎರಡೂ ಕೊಠಡಿ ನಡುವಿನ ನಾಲ್ಕು ಇಂಚು ದಪ್ಪದ ಗೋಡೆಯನ್ನು ಸೋಮವಾರ ಒಡೆಸಿ ಹಾಕಿ ತಮ್ಮ ಇಷ್ಟದಂತೆ ಕೊಠಡಿ ಆಧುನೀಕರಣಕ್ಕೆ ಸಚಿವರು ಹಸಿರು ನಿಶಾನೆ ತೋರಿದ್ದಾರೆ.
ಕೊಠಡಿಯ ಹಳೆಯ ನೆಲಹಾಸು ತೆಗೆಸಿ ಹೊಸ ಟೈಲ್ಸ್ ಜೋಡಿಸುವ ಕೆಲಸವೂ ಭರದಿಂದ ನಡೆಯುತ್ತಿದ್ದು, ಅರಣ್ಯ ಸಚಿವರ ಈ ಕಾರ್ಯವೈಖರಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ. ವಾಸ್ತುದೋಷ ಮತ್ತು ಕಚೇರಿ ಆಧುನೀಕರಣಕ್ಕಾಗಿ ವಿಧಾನಸೌಧದ ಕೊಠಡಿಯ ಗೋಡೆ ಕೆಡವಿದ ಬಗ್ಗೆ ಸದನದಲ್ಲೂ ಚರ್ಚೆ ನಡೆಯುವ ಸಾಧ್ಯತೆ ಇದೆ.
ಅನುಮತಿ ಇದೆಯಂತೆ : ಸವಿವರು ತಮ್ಮ ಕಾರ್ಯವನ್ನು ಸರ್ವ ರೀತಿಯಲ್ಲೂ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಕೊಠಡಿಯಲ್ಲಿ ಸ್ಥಳವಕಾಶ ಸಾಕಾಗುತ್ತಿಲ್ಲ. ಆದ್ದರಿಂದ ಗೋಡೆ ಒಡೆದು ಎರಡೂ ಕೊಠಡಿಗಳನ್ನು ಜೋಡಿಸಲು ಅವಕಾಶ ಮಾಡಿಕೊಡಬೇಕೆಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಅನುಮತಿ ಕೇಳಿದ್ದರಂತೆ.
ಮುಖ್ಯಮಂತ್ರಿಗಳಿಗೆ ಸಹ ಪತ್ರ ಬರೆದು ನಂತರರೇ ಗೋಡೆ ಒಡೆಯುವ ಸಾಹಸಕ್ಕೆ ಕೈ ಹಾಕಲಾಗಿದೆ ಎಂಬುವುದು ಸಚಿವರ ಸಮರ್ಥನೆ. ಇದು ಕಟ್ಟಡದ ಮೂಲ ಗೋಡೆ ಅಲ್ಲ. ಒಂದೇ ಕೊಠಡಿ ಇತ್ತು, ಆಪ್ತ ಕಾರ್ಯದರ್ಶಿ ಕಚೇರಿಗೆ ಜಾಗ ಮಾಡಿಕೊಡಲು ಕೊಠಡಿ ನಡುವೆ ಗೋಡೆ ಕಟ್ಟಲಾಗಿತ್ತು ಎನ್ನುತ್ತಾರೆ ಸಚಿವರು. (ನಿಮ್ಮ ಸಚಿವರ ಕೊಠಡಿ ಸಂಖ್ಯೆ ಗುರುತಿಸಿಕೊಳ್ಳಿ)
ಹಿಂದೇನಾಗಿತ್ತು : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಅವರ ಸಂಸದೀಯ ಕಾರ್ಯದರ್ಶಿ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ವಿಧಾನಸೌಧದ ಎರಡು ಕೊಠಡಿಗಳ ನಡುವಿನ ಗೋಡೆ ಒಡೆಸಿ ವಿವಾದಕ್ಕೊಳಗಾಗಿದ್ದರು.
ಆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, ಇದನ್ನು ತೀವ್ರವಾಗಿ ಖಂಡಿಸಿದ್ದರು. ವಿವಾದದಿಂದ ಬೇಸತ್ತ ಶಂಕರ್ ಪಾಟೀಲ್ ವಿಧಾನಸೌಧ ಬಿಟ್ಟು ವಿಕಾಸಸೌಧದಲ್ಲಿ ಕೊಠಡಿ ಪಡೆದುಕೊಂಡಿದ್ದರು. ಆದರೆ, ಈಗ ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟ ಸಚಿವರು ಗೋಡೆ ಒಡೆದಾಗ ಏಕೆ ಸುಮ್ಮನಿದ್ದಾರೆ ತಿಳಿಯದು.
ಮೂರನೇ ಮಹಡಿ ಬೇಕೆಂದ ಸಚಿವರು : ರಮಾನಾಥ್ ರೈ ಅವರಿಗೆ ವಿಕಾಸಸೌಧದಲ್ಲಿ ಕೊಠಡಿ ಆಯ್ಕೆ ಮಾಡಿಕೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಸೂಚಿಸಿದ್ದರು. ಅಲ್ಲಿಗೆ ಹೋಗಲು ಒಪ್ಪದ ಸಚಿವರು, ವಿಧಾನಸೌಧ 3ನೇ ಮಹಡಿಯಲ್ಲೇ ಕಚೇರಿ ಬೇಕೆಂದು ಪಟ್ಟು ಹಿಡಿದು ಕೊಠಡಿ ಪಡೆದಿದ್ದರು. ಸದ್ಯ ಈಗ ಗೋಡೆ ಕೆಡವಿಹಾಕಿ ವಿವಾದ ಸೃಷ್ಟಿಸಿದ್ದಾರೆ.












Click it and Unblock the Notifications