ಫಿಕ್ಸಿಂಗ್: ಗುರುನಾಥ್, ವಿಂದೂಗೆ ಜಾಮೀನು ಸಿಕ್ತು

ಇಬ್ಬರು ಆರೋಪಿಗಳು 25 ಸಾವಿರ ರು ಶ್ಯೂರಿಟಿ ಮೊತ್ತ ಪಾವತಿಸಬೇಕು. ತನಿಖಾಧಿಕಾರಿಗಳ ಮುಂದೆ ದಿನ ಬಿಟ್ಟು ದಿನ ಹಾಜರಾಗಬೇಕು. ಇಬ್ಬರು ಭಾರತ ಬಿಟ್ಟು ಹೊರಗಡೆ ಹೋಗುವಂತಿಲ್ಲ ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಗುರುನಾಥ್ ಹಾಗೂ ವಿಂದೂ ಇಬ್ಬರು ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ, ಸಂಜೆ ವೇಳೆಗೆ ಜೈಲಿನಿಂದ ಹೊರಬೀಳುವ ಸಾಧ್ಯತೆಯಿದೆ. ಮತ್ತೊಬ್ಬ ಆರೋಪಿ ಅಂಕಿತ್ ಚೌವಾಣ್ ಅವರು ಜೂ.6ರೊಳಗೆ ಜೈಲಿಗೆ ಮರಳಬೇಕಿದೆ.
ಶ್ರೀಶಾಂತ್, ಅಜಿತ್ ಚಂಡಿಲ ಸೇರಿದಂತೆ 12 ಜನರ ಜಾಮೀನು ಅರ್ಜಿ ವಿಚಾರಣೆ ದೆಹಲಿಯ ಸಾಕೇತ್ ಕೋರ್ಟ್ ನಲ್ಲಿ ಮಂಗಳವಾರ(ಜೂ.4) ವಿಚಾರಣೆಗೆ ಬರಲಿದೆ.
ಬಾಲಿವುಡ್ ನಟ ವಿಂದೂ ಹಾಗೂ ಇತರ ಎರಡು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸಬೇಕು ಎಂದು ಕೋರಿ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ, ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿ ಆರೋಪಿಗಳನ್ನು ಜೂನ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸುವುದರಿಂದ ತಲೆಮರೆಸಿಕೊಂಡಿರುವ ಬುಕ್ಕಿಗಳ ಜಾಡನ್ನು ಪತ್ತೆಹಚ್ಚಲು ಹಾಗೂ ಅವರು ನಡೆಸಿದ ಆರ್ಥಿಕ ವ್ಯವಹಾರಗಳ ಕುರಿತು ಅರಿಯಲು ಸಾಧ್ಯವಾಗುತ್ತದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಕಿರಣ್ ಬೆಂದ್ ಬಾರ್ ಕೋರ್ಟಿನಲ್ಲಿ ವಾದ ಮಂಡಿಸಿದರು.
ಪೊಲೀಸ್ ಕಸ್ಟಡಿಗೆ ಆರೋಪಿಗಳನ್ನು ಒಪ್ಪಿಸಲಾಗಿದ್ದು, ಮುಂದೆ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸುವುದು ಸೂಕ್ತ ಎಂದು ರಕ್ಷಣಾ ವಕೀಲ ಕೋರ್ಟಿನಲ್ಲಿ ವಾದಿಸಿದ್ದರು.
ಬುಕ್ಕಿ ಬಂಧನ: ಐಪಿಎಲ್ ಬೆಟ್ಟಿಂಗ್ ಜಾಲಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಮುಂಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಮತ್ತೋರ್ವ ಬುಕ್ಕಿಯನ್ನು ಬಂಧಿಸಿದ್ದಾರೆ.
ಕಿಶೋರ್ ಬದ್ಲಾನಿ ಅಲಿಯಾಸ್ ಕಿಶೋರ್ ಪುಣೆ ಎಂಬಾತ ತನ್ನ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದ ತಕ್ಷಣ ಯುರೋಪಿಗೆ ಹಾರಲು ಸಿದ್ಧತೆ ನಡೆಸಿದ್ದ. ಭಾರತ ಹಾಗೂ ಪಾಕಿಸ್ತಾನದ ಬುಕ್ಕಿಗಳ ನಡುವೆ ಆತ್ಮೀಯ ಸಂಬಂಧವನ್ನು ಹೊಂದಿದ್ದ ಬದ್ಲಾನಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications