ಸಿದ್ದು ಬಗ್ಗೆ ಬೆಂಗಳೂರಿನ ಶ್ರೀಸಾಮಾನ್ಯ ಏನಂತಾನೆ?
ಬೆಂಗಳೂರು, ಜೂ.3 : "ರಾಜ್ಯದ ಹೊಸ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಧಿಕಾರ ದೊರಕಿರುವುದು ಹಿಂದೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ದೊರಕಿದಂತೆಯೇ ಆಗಿದೆ". ಹೀಗೆ ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಿದ್ದು ಭಾಸ್ಕರ್ ರಾವ್.
ಭಾಸ್ಕರ್ ರಾಜಕೀಯ ವಿಶ್ಲೇಷಕರಲ್ಲ. ರಾಜಕೀಯವನ್ನು ಹತ್ತಿರದಿಂದ ಬಲ್ಲವರು ಅಲ್ಲ. ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಂದ ಮಾರುದೂರ ನಿಲ್ಲುವವರು. ಆದರೆ, ರಾಜ್ಯದ ಅಭಿವೃದ್ಧಿ ಮಾಡಬೇಕಾದ ರಾಜಕಾರಣಿಗಳು ಇಲ್ಲದ ವಿವಾದ ಸೃಷ್ಠಿಸಿಕೊಂಡು ಕಾಲ ಕಳೆದರೆ ಇವರಿಗೆ ಏನೋ ತಳಮಳ.
ಅಧಿಕಾರದ ಗದ್ದುಗೆ ಹಿಡಿದು ಕುಳಿತವರು ರಾಜ್ಯದ ಜನರ ಅಭಿವೃದ್ಧಿಗಾಗಿ ಏನು ಮಾಡುವುದಿಲ್ಲವಲ್ಲ ಎಂಬ ನಿರಾಸೆ. ಭಾಸ್ಕರ್ ಶಾಲೆಗಳ ಅಭಿವೃದ್ಧಿಗಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥಯೊಂದರ ದಾಖಲೀಕರಣ ವಿಭಾಗದಲ್ಲಿ ಕೆಲಸ ಮಾಡುತ್ತಾರೆ.
ದಿನನಿತ್ಯ ರಾಜ್ಯದ ವಿವಿಧ ಜಿಲ್ಲೆಗಳ ಶಾಲೆಗಳ ಸ್ಥಿತಿ-ಗತಿಯ ಕುರಿತು ಬರೆಯುತ್ತಾ, ಸಮಸ್ಯೆಗಳನ್ನು ಚೆನ್ನಾಗಿ ಬಲ್ಲ ಇವರಿಗೆ ಇಂದಿನ ರಾಜಕೀಯ ವ್ಯವಸ್ಥೆಯ ಕುರಿತು ಮಾತನಾಡಿ ಎಂದಾಗ, ತಮ್ಮ ರಾಜಕೀಯ ತಿಳುವಳಿಕೆಯನ್ನು ಒನ್ ಇಂಡಿಯಾ ಕನ್ನಡದ ಜೊತೆ ಹಂಚಿಕೊಂಡರು.

ನಿಮ್ಮ ಪ್ರಕಾರ ಹೊಸ ಸಿಎಂ ಹೇಗೆ?
ನೋಡು ಗುರು, ರಾಜ್ಯದ ಜನ ಹೊಸ ಸಿಎಂ ಮೇಲೆ ಬಹಳ ನಿರೀಕ್ಷೆ ಇಟ್ಟಿದ್ದರು. ಆದರೆ, ಅವರ ಇತ್ತೀಚಿನ ನಿರ್ಣಯಗಳನ್ನು ನೋಡಿದರೆ, ಇವರು ಮೂವರಲ್ಲಿ ಮತ್ತೊಬ್ಬರು ಆಗುವುದರಲ್ಲಿ ಸಂಶಯವಿಲ್ಲ. ಸಿಕ್ಕ ಅಧಿಕಾರವನ್ನು ಜನತೆಯ ಅಭಿವೃದ್ಧಿಗೆ ಬಳಸುತ್ತಾರೆ ಎಂದು ಅನಿಸುತ್ತಿಲ್ಲ.

ಸಿಎಂ ಖುರ್ಚಿ ಮೇಲೆ ಕುಳಿತು ಒಂದು ತಿಂಗಳು ಕಳೆದಿಲ್ಲ
ಹೌದು, ಒಪ್ಪೋಣ. ಆದರೆ, ಅಗ್ಗದ ಮದ್ಯ, ಒಂದು ರೂಪಾಯಿಗೆ ಅಕ್ಕಿ, ಕೃಷ್ಣ ಮಠ ವಿವಾದ, ಬಜೆಟ್ ಮಂಡನೆ ಹೀಗೆ ಇಲ್ಲದ ಕಿರಿಕಿರಿ ತಂದುಕೊಳ್ಳುತ್ತಿದ್ದಾರೆ. ರಾಜ್ಯದ ಹಣಕಾಸು ಸ್ಥಿತಿ ಇವರಿಂದ ಸುಧಾರಿಸಬಹುದು ಎಂದುಕೊಂಡಿದ್ದೆವು. ಆದರೆ, ಹಾಗೆ ಆಗುವ ಲಕ್ಷಣಗಳು ಕಾಣುತ್ತಿಲ್ಲ.

ಇನ್ನೂ ಸಮಯವಿದೆ ನಿರಾಸೆ ಏಕೆ?
ನೋಡಿ ಯಡಿಯೂರಪ್ಪ ಬಹಳ ವರ್ಷಗಳ ನಂತರ ಅಧಿಕಾರ ದೊರೆತಾಗ ಹೀಗೆ ಮಾಡಿದರು. ಇಲ್ಲ ಸಲ್ಲದ ಯೋಜನೆಗಳನ್ನು ಪ್ರಕಟಿಸಿ ಬೊಕ್ಕಸ ಖಾಲಿ ಮಾಡಿಕೊಂಡು ಕುಳಿತರು. ಅವರ ಯೋಜನೆಗಳು ಈಗ ಹೇಗೆ ದಾರಿ ತಪ್ಪಿವೆ ಎಂದು ಜನರಿಗೆ ಗೊತ್ತಿದೆ.

ಸಿಎಂ ತ್ವರಿತವಾಗಿ ಏನು ಮಾಡಬೇಕು?
ಇದು ಜೂನ್ ತಿಂಗಳು ಶಾಲೆಗಳು ಪ್ರಾರಂಭವಾಗಿವೆ. ಆರ್ ಟಿಐ ಕಡ್ಡಾಯ ಅನುಷ್ಟಾನ, ಶಾಲೆಗಳಿಗೆ ಅಗತ್ಯ ಸೌಲಭ್ಯಗಳ ಪೂರೈಕೆ ಮಾಡಬೇಕು. ರಾಜ್ಯದಲ್ಲಿ ಮಳೆಗಾಲ ಪ್ರಾರಂಭವಾಗಿದೆ. ಬರಗಾಲದ ನಂತರ ಮಳೆ ಬರುತ್ತಿದೆ. ಅಧಿಕಾರಿಗಳನ್ನು ಬಡಿದ್ದೆಬ್ಬಿಸಿ ಸರಿಯಾಗಿ ಕೆಲಸ ಮಾಡಿಸಬೇಕು. ಡ್ಯಾಂಗಳ ಹೂಳುಗಳನ್ನು ತೆಗಿಸಿ ನೀರಿನ ಸಂಗ್ರಹಣೆಗೆ ಕ್ರಮ ತಗೋಬೇಕು.

ರಾಜ್ಯದ ಅಭಿವೃದ್ಧಿ ಮಾನದಂಡವೇನು?
ನೋಡಿ ಅಭಿವೃದ್ಧಿ ಎಂಬ ಪದ ಹಿಂದಿನ ಸರ್ಕಾರದಲ್ಲಿ ಕೇಳಿ ಕೇಳಿ ಸಾಕಾಗಿದೆ. ಪೂರ್ಣ ಬೆಂಬಲವಿದೆ. ಉದ್ದಿಮೆಗಳನ್ನು ಆಕರ್ಷಿಸಿ ಬಂಡವಾಳ ಹರಿದು ಬರುವಂತೆ ಮಾಡಬೇಕು. ರಾಜ್ಯದ ಬೊಕ್ಕಸ ತುಂಬಿಸಿ, ನಿರುದ್ಯೋಗ ಸಮಸ್ಯೆ ನಿವಾರಿಸಲು ಗಮನ ಹರಿಸಬೇಕು.

ವಿವಾದಗಳ ಬಗ್ಗೆ ಏನಂತೀರಿ?
ಅಧಿಕಾರ ಸಿಕ್ಕ ತಕ್ಷಣ ಬಜೆಟ್ ಮಾಡುತ್ತೇನೆ ಎಂದು ಕೂತಿದ್ದಾರೆ. ಹಣವನ್ನು ಎಲ್ಲಿಂದ ತರುತ್ತಾರೆ. ನನ್ನ ಪ್ರಕಾರ ಗುಟ್ಕಾ ನಿಷೇಧ, ಅಗ್ಗದ ಮದ್ಯ, 1 ರೂ. ಅಕ್ಕಿ, ಕೃಷ್ಣ ಮಠ ಎಂದು ಸಿಎಂ ಸುಮ್ಮನೆ ವಿವಾದ ಎಳೆದುಕೊಳ್ಳುತ್ತಿದ್ದಾರೆ. ಎಲ್ಲಾ ಬಿಟ್ಟು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಗಮನ ಹರಿಸಿ, ಬೊಕ್ಕಸ ತುಂಬಿಸಲಿ.












Click it and Unblock the Notifications