ಲೈಂಗಿಕ ಕಿರುಕುಳ ಆರೋಪ ಐಐಎಂಬಿ ಸಿಬ್ಬಂದಿ ವಜಾ
ಬೆಂಗಳೂರು, ಮೇ.30: ನಗರದ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣ ವಿಚಿತ್ರ ರೀತಿಯಲ್ಲಿ ಕೊನೆಗೊಂಡಿದೆ. ಆರೋಪಿ ಹಾಗೂ ಸಂತ್ರಸ್ತೆ ಇಬ್ಬರನ್ನು ಐಐಎಂಬಿಯಿಂದ ಹೊರಹಾಕಿರುವ ಘಟನೆ ನಡೆದಿದೆ.
ಅಡ್ಮಿನಿಸ್ಟ್ರೇಷನ್ ವಿಭಾಗದ ಮುಖ್ಯಾಧಿಕಾರಿ(CAO) ಅವರ ಮೇಲೆ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಕೇಳಿ ಬಂದಿತ್ತು. ಪ್ರಕರಣ ಬೆಳಕಿಗೆ ಬಂದ ಮೇಲೆ ಕಠಿಣ ಕ್ರಮ ಜರುಗಿಸಿದ ಐಐಎಂಬಿ ಸಿಎಒ ಇಂದು ಶೇಖರ್ ವಸಿಷ್ಠ ಅವರನ್ನು ಕರ್ತವ್ಯದಿಂದ ವಜಾಗೊಳಿಸಿದ್ದಲ್ಲದೆ ವಶಿಷ್ಠ ವಿರುದ್ಧ ದೂರು ನೀಡಿದ ಮಹಿಳೆಯನ್ನು ಐಐಎಂಬಿಯಿಂದ ದೂರ ಇರುವಂತೆ ಸೂಚಿಸಿದ ಐಐಎಂಬಿ ವಿಚಿತ್ರ ನಡೆ ಇಟ್ಟಿತ್ತು.

ಆದರೆ, ದೂರು ಫಲ ನೀಡದಿದ್ದಾಗ ಸಿಎನ್ ಎನ್ ಐಬಿಎನ್ ವಾಹಿನಿ ನೆರವಿನಿಂದ ಮಾಧ್ಯಮದ ಮುಂದೆ ಪ್ರಕರಣವನ್ನು ತಂದಿಟ್ಟರು. ಸ್ಥಳೀಯ ಪೊಲೀಸ್ ಠಾಣೆ(ಹುಳಿಮಾವು)ಗೆ ದೂರು ಸಲ್ಲಿಸಲಾಯಿತು. ಇದಕ್ಕೆ ಉತ್ತರವಾಗಿ ಐಐಎಂ ಬೆಂಗಳೂರು ನಿರ್ದೇಶಕ ಡಾ. ಪಂಕಜ್ ಚಂದ್ರ ಅವರು ಎಲ್ಲಾ ಸಿಬ್ಬಂದಿಗಳಿಗೆ ಇ ಮೇಲ್ ಮಾಡಿ ಸಿಎಒ ವಶಿಷ್ಠ ಅವರನ್ನು ಅಮಾನತು ಮಾಡಲಾಗಿದೆ ಎಂದಿದ್ದರು.
ಲೈಂಗಿಕ ಕಿರುಕುಳ ಆರೋಪವನ್ನು ತನಿಖೆ ನಡೆಸಿದ ಐಐಎಂಬಿಯ ಆಯೋಗ ಕಳೆದ ವರ್ಷವೇ ಸಿಎಒ ಅಮಾನತಿಗೆ ಶಿಫಾರಸು ಮಾಡಿತ್ತು. ಆದರೆ, ಡಾ. ಪಂಕಜ್ ಚಂದ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎನ್ನಲಾಗಿದೆ.












Click it and Unblock the Notifications