ಪದ್ಮಭೂಷಣ ಡಾ. ಎನ್. ಶೇಷಗಿರಿ ಅವರ ನೆನಪು

ಬೆಂಗಳೂರಿನ ಬನಶಂಕರಿಯಲ್ಲಿರುವ ಚಿತಾಗಾರದಲ್ಲಿ ಮೇ 29, 2013ರ ಬುಧವಾರ ಮಧ್ಯಾಹ್ನ 2 ಗಂಟೆ ನಂತರ ಮೃತರ ಅಂತ್ಯಕ್ರಿಯೆಯನ್ನು ಧಾರ್ಮಿಕ ವಿಧಿವಿಧಾನಗಳಿಂದ ನೆರವೇರಿಸಲಾಗಿದೆ.
ರಾಷ್ಟ್ರೀಯ ಸೂಚನಾ ಕೇಂದ್ರದ (ಎನ್ ಐಸಿ) ಇಂದು ದಿನನಿತ್ಯದ ಸರ್ಕಾರಿ ವೆಬ್ ತಾಣಗಳ ಜಾಲವಾಗಿ ಬೆಳೆದಿದೆ. ಇದರ ಹಿಂದಿನ ರುವಾರಿ ಬೆಂಗಳೂರಿನ ಶೇಷಗಿರಿಯವರು. ಡಾ. ಎನ್. ಶೇಷಗಿರಿ ಅವರು ದೇಶದಾದ್ಯಂತ ಕಂಪ್ಯೂಟರ್ ನೆಟ್ ವರ್ಕ್ ಅನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಶೇಷಗಿರಿ ಅವರ ದೂರದೃಷ್ಟಿಯ ಫಲವಾಗಿ ಎನ್ ಐಸಿ ನೆಟ್ ರೂಪುಗೊಂಡಿತ್ತು. ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಗೆ ಸಂಬಂಧಿಸಿದ ಹಲವಾರು ನೀತಿಗಳನ್ನು ಸರ್ಕಾರಕ್ಕಾಗಿ ಸಿದ್ಧಪಡಿಸಿಕೊಟ್ಟ ಹಿರಿಮೆಯೂ ಇವರಿಗೆ ಸಲ್ಲುತ್ತದೆ.
ಭಾರತೀಯ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ (ಎಸ್ ಟಿಪಿಐ) ಅನ್ನು ದೇಶದಲ್ಲಿ ಸ್ಥಾಪಿಸುವಲ್ಲಿ ಇವರ ಕೊಡುಗೆ ಅತ್ಯಮೂಲ್ಯ. ಎಸ್ ಟಿಪಿಐನ ಫಲವಾಗಿಯೇ ಭಾರತದ ಸಾಫ್ಟ್ ವೇರ್ ರಫ್ತಿನಲ್ಲಿ ಗಮನಾರ್ಹ ಏರಿಕೆ ದಾಖಲಾಗಿದ್ದು ಇಲ್ಲಿ ಸ್ಮರಣೀಯ.
ಡಾ. ಎನ್. ಶೇಷಗಿರಿ ಅವರು ದೇಶದಲ್ಲಿ ಇ- ಆಡಳಿತವನ್ನು ಉತ್ತೇಜಿಸಿದ ಪ್ರಮುಖ ಪ್ರವರ್ತಕರೆನಿಸಿದ್ದಾರೆ. ದೇಶದಲ್ಲಿ ಇ-ಆಡಳಿತವನ್ನು ಜಾರಿಗೆ ತರಬೇಕೆನ್ನುವುದು ಅವರ ಮಹೋನ್ನತ ಕನಸಾಗಿತ್ತು. ಇದಕ್ಕಾಗಿಯೇ ಅವರು ರೂಪಿಸಿದ ಹಲವಾರು ‘ಅಪ್ಲಿಕೇಷನ್'ಗಳಿಂದಾಗಿಯೇ ಇಂದು ದೇಶದಲ್ಲಿ ಇ-ಆಡಳಿತ ದಿನನಿತ್ಯದ ಆಡಳಿತದಲ್ಲಿ ಹಾಸುಹೊಕ್ಕಾಗಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಪದವಿ ಪಡೆದ ನಂತರ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್(TIFR) ನಂತರ ಮಾಹಿತಿ ಯೋಜನಾ ಇಲಾಖೆ, ಎಲೆಕ್ಟ್ರಾನಿಕ್ ಆಯೋಗದ ಭಾಗವಾದರು. NICಯಲ್ಲಿ 25 ವರ್ಷ ಕರ್ತವ್ಯ ನಿರ್ವಹಿಸಿದ ನಂತರ ನಿವೃತ್ತಿ ಪಡೆದ ಶೇಷಗಿರಿ ಅವರು ಎಚ್ ಸಿಎಲ್ ಟೆಕ್ನಾಲಜೀಸ್ ಸಂಸ್ಥೆಗೆ ತಾಂತ್ರಿಕ ಸಲಹೆಗಾರರಾಗಿದ್ದರು.
ಡಾ. ಎನ್. ಶೇಷಗಿರಿ ಅವರು ಪತ್ನಿ, ಓರ್ವ ಮಗ ಮತ್ತು ಮಗಳು ಹಾಗೂ ಇಬ್ಬರು ಮೊಮ್ಮಕ್ಕಳು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಆದರೆ, ಶೇಷಗಿರಿ ಅವರು ಹರಿಡಿರುವ ಜ್ಞಾನ ಜಾಲ ಅಜರಾಮರವಾಗಿ ಉಳಿಯಲಿದೆ.












Click it and Unblock the Notifications