ಬಿಜೆಪಿ ರಣತಂತ್ರ: ಬಿಎಸ್ಸಾರ್- ಯಡಿಯೂರಪ್ಪಗೆ ಗಾಳ
ಬೆಂಗಳೂರು, ಮೇ 29- ಅಧಿವೇಶನದಲ್ಲಿ ಪಾಲ್ಗೊಳ್ಳಲೋ, ಬೇಡ್ವೋ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ಮುಜುಗುರ ಅನುಭವಿಸುತ್ತಿರುವಾಗ ಇತ್ತ ಬಿಜೆಪಿ ಶತಾಯಗತಾಯ ಪ್ರತಿಪಕ್ಷ ಸ್ಥಾನ ದಕ್ಕಿಸಿಕೊಳ್ಳಲು ರಣತಂತ್ರ ರೂಪಿಸುತ್ತಿದೆ.
ರಾಜ್ಯದಲ್ಲಿ ಐದು ವರ್ಷಗಳ ಕಾಲ ಮೆರೆದಾಡಿದ ಬಳಿಕ ಈಗ ಕನಿಷ್ಠ ಪ್ರತಿಪಕ್ಷ ಸ್ಥಾನವೂ ದಕ್ಕದೇ ಹೋದರೆ ಅದರಿಂದ (ಮಾನ) ಠೇವಣಿ ಹೋದಂತೆ ಎಂದು ಬಿಜೆಪಿ ಮಂದಿ ಭಾವಿಸಿದಂತಿದೆ. ಜತೆಗೆ ಆ ಪಕ್ಷವು ಈಗಾಗಲೇ ಲೋಕಸಭೆ modeಗೆ shift ಆಗಿದೆ.
ಹಾಗಾಗಿ ಪ್ರತಿಪಕ್ಷ ಸ್ಥಾನ ತನಗೇ ಗಿಟ್ಟಬೇಕೆಂದು ಪಕ್ಷ ಹವಣಿಸುತ್ತಿದೆ. ನಿನ್ನೆ ಪಿರಿಯಾಪಟ್ಟಣದ ಮತದಾರರು ಶ್ಯಾನೆ ಸಂಖ್ಯೆಯಲ್ಲಿ (ಶೇ. 84) ಬಂದು ಮತಹಾಕಿದ್ದಾರೆ. Last but First ಎಂಬಂತೆ 14ನೇ ವಿಧಾನಸಭೆ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಅತ್ಯಧಿಕ ಮತದಾನ ಮಾಡಿದ ಹೆಗ್ಗಳಿಕೆ ಪಿರಿಯಾಪಟ್ಟಣದ ಮತದಾರರಿಗೆ ಸಂದಿದೆ. ಈ ಹಿಂದೆ ಆಗಿದ್ದರೆ ಅತ್ಯಧಿಕ ಮತದಾನ ನಡೆದರೆ ಅದು ಬಿಜೆಪಿಗೆ ವರವಾಗಲಿದೆ ಎಂಬ ಮಾತಿತ್ತು.
ಆದರೆ ಬದಲಾದ ಕಾಲಮಾನದಲ್ಲಿ, ಬದಲಾದ ಮತದಾರನ ಮನಸ್ಥಿತಿಯಲ್ಲಿ ಈಗ ಬೇರೆಯದೇ ಲೆಕ್ಕಾಚಾರ ಅಡಗಿದೆ. ಹಾಗಾಗಿ, ಪಿರಿಯಾಪಟ್ಟಣದಲ್ಲಿ ಬಿಜೆಪಿ ಗೆಲ್ಲೋಲ್ಲ ಎಂದು ಪಕ್ಷದ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಇದರಿಂದ ಪಿರಿಯಾಪಟ್ಟಣದ ಒಂದು ಸ್ಥಾನ ಗೆದ್ದು 40ರ ಗಡಿ ದಾಟುವಲ್ಲಿ ಬಿಜೆಪಿ ಎಡವಿದಂತಿದೆ. ಇದರಿಂದ ಪ್ರತಿಪಕ್ಷ ಸ್ಥಾನದ ಕನಸು ಭಗ್ನವಾದಂತಿದೆ.

ಜನಾ ರೆಡ್ಡಿ ಶ್ರೀರಕ್ಷೆ ಇದೆಯಾ?
ಈ ಹಿನ್ನೆಲೆಯಲ್ಲಿ ಬಿಜೆಪಿ ಬೇರೆಯದೇ ಕಾರ್ಯತಂತ್ರ ರೂಪಿಸುತ್ತಿದೆ. ಎಲ್ಲ ಅವಕಾಶ/ ಸಾಧ್ಯತೆಗಳಿಗೂ ಬಿಜೆಪಿ ಮುಕ್ತವಾಗಿದೆ. ಬಿಜೆಪಿ ಪಕ್ಷದ ಒಂದು ತಂಡವನ್ನು ಬಳ್ಳಾರಿಗೆ ಅಟ್ಟಿದೆ. 'ಮತದಾರ ನಿಮಗೆ ದಯಪಾಲಿಸಿರುವ ನಾಲ್ಕು ಸ್ಥಾನಗಳನ್ನು ದಯಮಾಡಿ ನಮ್ಮ ಮಡಿಲಿಗೆ ಹಾಕಿ' ಎಂದು ರಾಮುಲುಗೆ ದುಂಬಾಲುಬಿದ್ದಿದೆ.
ಈ ನಿಟ್ಟಿನಲ್ಲಿ ಇಡೀ ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನೇ ತನ್ನಲ್ಲಿ ಲೀನ ಮಾಡಿಕೊಳ್ಳುವ ಸ್ಥಿತಿಗೆ ಬಿಜೆಪಿ ಬಂದು ನಿಂತಿದೆ. ಈ ವಿಲೀನಕ್ಕೆ ಅತ್ತ ಕಡೆಯಿಂದ ರಾಮುಲುಗಾರು ಹೇಗೆ ಸ್ಪಂದಿಸಿದ್ದಾರೆ/ ಚಂಚಲಗೂಡ ನಿವಾಸಿ ಜನಾ ರೆಡ್ಡಿ ಶ್ರೀರಕ್ಷೆ ಇದೆಯಾ? ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಧವಳಗಿರಿ ಎದುರು ರವಿ ಸೀಟಿ
ಇನ್ನು ಮುಂದಿನ ದಾರಿ ಪಕ್ಷದ ಹಿರಿಯ ನಾಯಕರಾಗಿದ್ದ ಯಡಿಯೂರಪ್ಪ ಅವರ ಧವಳಗಿರಿ ನಿವಾಸ. ಅದು ಜೇನುಗೂಡಿನಂತೆ ಮೂರು ದಿನಗಳಿಂದ ತೀವ್ರ ಚಟುವಟಿಕೆಯಿಂದ ಕೂಡಿದೆ. ಬಿಜೆಪಿ ಹಿರಿಯ ನಾಯಕರು ಒಬ್ಬೊಬ್ಬರಾಗಿ ಯಡಿಯೂರಪ್ಪಗೆ ಅಡ್ಡಬಿದ್ದು ಬರುತ್ತಿದ್ದಾರೆ. ಯಡಿಯೂರಪ್ಪ ಮನೆ ಮುಂದೆ ಹಿರಿಯರಾದ ಸದಾನಂದ ಗೌಡ, ರವಿ ಸೀಟಿ ಊದುತ್ತಿದ್ದಾರೆ ಎಂದು ಡಾಲರ್ಸ್ ಕಾಲನಿ ಮೂಲಗಳು ತಿಳಿಸಿವೆ.

ಅಡ್ವಾಣಿಯದ್ದೇ ಸಮಸ್ಯೆ
ಇಲ್ಲಿ ಕೆಜೆಪಿಯ ಆರು ಸ್ಥಾನ ಗಳಿಸಿಕೊಂಡು, ಪ್ರತಿಪಕ್ಷ ಸ್ಥಾನ ಬಾಚಿಕೊಳ್ಲುವುದಕ್ಕಿಂತ ಮುಂದಿನ ಲೋಕಸಭೆ ಮೇಲೆ ಕಣ್ಣಿಟ್ಟು ಬಿಜೆಪಿ ಯಡಿಯೂರಪ್ಪಗೆ ಗಾಳ ಹಾಕುತ್ತಿದೆ ಎನ್ನಲಾಗಿದೆ. ಆದರೆ ಆ ಅಡ್ವಾಣಿಯದ್ದೇ ಸಮಸ್ಯೆ. ಅದರ ಬದಲು ಮೋದಿಗೆ ಪಕ್ಷದ ಸರ್ವಾಧಿಕಾರ ನೀಡಿಬಿಟ್ಟರೆ 'ಕರ್ನಾಟಕದ ಮೋದಿಯಾಗುವಂತೆ ಯಡಿಯೂರಪ್ಪಗೆ ತಥಾಸ್ತು' ಅನ್ನಲು ಮೋದಿ ಸಿದ್ಧವಾಗಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಬಿಜೆಪಿ feelersಗೆ ಬಿಎಸ್ವೈ ಪ್ರತಿಕ್ರಿಯೆ
ತಮ್ಮ ತಾಕತ್ತು ಏನು ಎಂಬುದನ್ನು ಈಗಾಗಲೇ ಪ್ರದರ್ಶಿಸಿರುವ ಯಡಿಯೂರಪ್ಪ, ಮೊನ್ನೆ ಚುನಾವಣೆಯಲ್ಲಿ ಬಿಜೆಪಿಗೆ ಒದಗಿದ ದುಸ್ಥಿಃತಿಯನ್ನು ಕಂಡು ಮರುಗಿದ್ದಾರಂತೆ. ಆದಾಗ್ಯೂ, ಕೆಜೆಪಿಯಲ್ಲಿ ತಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೂ ಒಬ್ಬನೇ ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗದು. ಪಕ್ಷದಲ್ಲಿ 8 ಸದಸ್ಯರ ಕೋರ್ ಕಮಿಟಿ ಅಂತ ಒಂದಿದೆ. ಅಲ್ಲಿ ಚರ್ಚೆಯಾಗಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ಬಿಜೆಪಿ feelersಗೆ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿಯ ಯೋಗಾಯೋಗ
ಈ ಮಧ್ಯೆ, ಸದ್ಯಕ್ಕೆ ಪ್ರತಿಪಕ್ಷ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಳ್ಳುವ ಆಲೋಚನೆಯಲ್ಲಿರುವ ಬಿಜೆಪಿಯು ಬಿಎಸ್ಸಾರ್/ ಕೆಜೆಪಿ ಯತ್ನಗಳು ವಿಫಲವಾದರೆ ಅಂತಿಮವಾಗಿ ಸಿಪಿ ಯೋಗೀಶ್ವರ್ ಅವರನ್ನು ಅಪ್ಪಿಕೊಳ್ಳುವ ಸಾಧ್ಯತೆಯೂ ಇದೆ. ಸಮಾಜವಾದಿಯ ಯೋಗೀಶ್ವರ್ ಒಬ್ಬರನ್ನು ಬಿಜೆಪಿಗೆ ಸೆಳೆದುಕೊಳ್ಳುವುದು ಪಕ್ಷಕ್ಕೆ ಸುರಕ್ಷಿತ ಆಯ್ಕೆಯಾಗಿದೆ ಎಂದು ಬಿಜೆಪಿ ಚಿಂತಿಸುತ್ತಿದೆ.












Click it and Unblock the Notifications