ಟಿಪ್ಪು ವಿವಿ: ಒಡೆದು ಆಳುವ ನೀತಿ ಎಂದ ರವಿ

ಟಿಪ್ಪು ವಿವಿ ಸ್ಥಾಪನೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ರವಿ, ಇಸ್ರೇಲಿನಲ್ಲಿ ಅಡಾಲ್ಫ್ ಹಿಟ್ಲರ್ ಹೆಸರಿನಲ್ಲಿ ವಿವಿ ಸ್ಥಾಪಿಸಿದಂತೆ ಎಂದು ಟಿಪ್ಪು ವಿವಿ ಬಗ್ಗೆ ಹೇಳಿದ್ದರು.
ಮತೀಯ ಆಧಾರದಲ್ಲಿ ಸಂವಿಧಾನದ ಆಶಯಗಳಿಗೆ ವಿರೋಧವಾಗಿ ವಿವಿ ಸ್ಥಾಪಿಸಲು ಬಿಡುವುದಿಲ್ಲ. ಇದರಿಂದ ದೇಶವನ್ನು ಒಡೆದು ಆಳುವ ನೀತಿಗೆ ತಳ್ಳಿದ್ದಂತಾಗುತ್ತದೆ. ವಿವಿ ಹೆಸರಿನಲ್ಲಿ ಕೆಲವರು ವಿಷ ಬೀಜ ಬಿತ್ತುತ್ತಿದ್ದಾರೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಮತೀಯ ವಿವಿ ಸ್ಥಾಪನೆಯನ್ನು ಬಿಜೆಪಿ ಎಂದಿಗೂ ಒಪ್ಪುವುದಿಲ್ಲ.
ಈ ಬಗ್ಗೆ ಥೋರಟ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ವರದಿಯನ್ನು ನಮ್ಮ ಆಶಯಗಳಿಗೆ ಅನುಗುಣವಾಗಿದೆ. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳು ಮತಗಳಿಕೆ ಲಾಭಕ್ಕಾಗಿ ಸಮಾಜವನ್ನು ಒಡೆಯುವುದನ್ನು ಬಿಡಲಿ ಎಂದು ಮಾಜಿ ಶಿಕ್ಷಣ ಸಚಿವ ಸಿಟಿ ರವಿ ಹೇಳಿದ್ದಾರೆ.
ನಕ್ಸಲ್ ಕೃತ್ಯ ಖಂಡನೆ: ಭಯೋತ್ಪಾದಕರಿಗೂ ನಕ್ಸಲರಿಗೂ ವ್ಯತ್ಯಾಸವಿಲ್ಲ. ನಕ್ಸಲರ ಬಗ್ಗೆ ಮೃದು ಧೋರಣೆ ತಾಳುವುದನ್ನು ಕಾಂಗ್ರೆಸ್ ಸರ್ಕಾರ ಬಿಟ್ಟರೆ ಒಳ್ಳೆಯದು. ಛತ್ತೀಸ್ ಗಢದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಾಠ ಕಲಿಯಬೇಕಿದೆ. ಚಿಕ್ಕಮಗಳೂರು ಜಿಲ್ಲೆ ಕಿಗ್ಗಾ ಸಮೀಪ ನಕ್ಸಲರು ಸುಳಿದಾಡಿದ ಮಾಹಿತಿ ಇದೆ. ಸರ್ಕಾರದ ನಿಧಾನ ಗತಿ ಧೋರಣೆ ಅಪಾಯಕಾರಿ ಎಂದರು.
ಜಿಲ್ಲೆಗೆ ಮಹಿಳಾ ಕಾಲೇಜು, ವಾಜಪೇಯಿ ಮಾದರಿ ವಸರಿ ಶಾಲೆ ಆರಂಭಿಸುವ ಬಗ್ಗೆ ಶಾಸಕ ಸಿಟಿ ರವಿ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರ ಪಟ್ಟು: ತಜ್ಞರ ಸಮಿತಿಯ ಅಭಿಪ್ರಾಯ ಏನೇ ಇರಲಿ, ಟಿಪ್ಪು ವಿಶ್ವವಿದ್ಯಾಲಯದ ಸ್ಥಾಪನೆ ಶತಃಸಿದ್ಧ ಎಂದು ಸಂಸದ ಎಚ್.ವಿಶ್ವನಾಥ್. ಅಲ್ಪಸಂಖ್ಯಾತ ವಿಶ್ವವಿದ್ಯಾಲಯಗಳ ಸ್ಥಾಪನೆಯು ಸಂವಿಧಾನಬಾಹಿರ ಎಂದು ಪ್ರೊ. ಸುಖದೇವ್ ಥೋರಟ್ ನೇತೃತ್ವದ ಸಮಿತಿ ವರದಿ ಮಾಡಿದ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ವಿಶ್ವನಾಥ್, ಟಿಪ್ಪು ವಿಶ್ವವಿದ್ಯಾಲಯದ ಸ್ಥಾಪನೆ ಆಗಿಯೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರ ಕೇಂದ್ರೀಯ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದಾದರೂ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ವಿಶ್ವವಿದ್ಯಾಲಯ ಸ್ಥಾಪಿಸುತ್ತೇವೆ ಎಂದು ವಿಶ್ವನಾಥ್ ಹೇಳಿದ್ದಾರೆ.
ಕರ್ನಾಟಕ, ಜಮ್ಮುಕಾಶ್ಮೀರ, ಬಿಹಾರ, ಮಧ್ಯಪ್ರದೇಶ ಮತ್ತು ಪಶ್ಚಿಮಬಂಗಾಳದಲ್ಲಿ ಅಲ್ಪಸಂಖ್ಯಾತರಿಗಾಗೇ ವಿಶ್ವವಿದ್ಯಾಲಯಗಳನ್ನ ಸ್ಥಾಪಿಸುವ ಯೋಜನೆ ಸರ್ಕಾರಕ್ಕಿದೆ. ಈ ವಿವಿಗಳಲ್ಲಿ ಅಲ್ಪಸಂಖ್ಯಾತರಿಗೆ ಕನಿಷ್ಠ ಶೇ.50ರಷ್ಟು ಮೀಸಲಾತಿ ನೀಡುವ ಪ್ರಸ್ತಾವವಿದೆ.
ಈ ಯೋಜನೆಯ ರೂಪುರೇಖೆಗಳ ಪರಿಶೀಲನೆಗಾಗಿ ಸರ್ಕಾರವು ಪ್ರೊ. ಸುಖದೇವ್ ಥೋರಟ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅಲ್ಪಸಂಖ್ಯಾತರಿಗಾಗಿ ಶಿಕ್ಷಣ ಸಂಸ್ಥೆಗಳನ್ನ ಸ್ಥಾಪಿಸಬಹುದೇ ಹೊರತು, ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಂವಿಧಾನಲ್ಲಿ ಆಸ್ಪದವಿಲ್ಲವೆಂದು ಸಮಿತಿ ಅಭಿಪ್ರಾಯಪಟ್ಟಿದೆ.
ಕೇಂದ್ರ ಸಚಿವ ರೆಹಮಾನ್ ಖಾನ್ ಅವರು ಇದೇ ಮಾತುಗಳನ್ನು ಪುನರುಚ್ಚರಿಸಿದ್ದರು. ಅಲ್ಪ ಸಂಖ್ಯಾತ ವಿವಿಯಲ್ಲಿ ಶೇ 50 ರಷ್ಟು ಮಾತ್ರ ಒಂದು ಸಮುದಾಯಕ್ಕೆ ಮೀಸಲಾಗಿರುತ್ತದೆ. ಮಿಕ್ಕಂತೆ ಸಾಮಾನ್ಯ ವರ್ಗಕ್ಕೆ ಸೀಟುಗಳ ಹಂಚಿಕೆಯಾಗಲಿದೆ. ವಿವಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಲು ಯಾವುದೇ ಕಾರಣಗಳಿಲ್ಲ. ಟಿಪ್ಪು ಸುಲ್ತಾನ್ ಅವರ ಹೆಸರು ಇಡಲು ಕೆಲವರ ವಿರೋಧವಿದೆ ಅಷ್ಟೇ ಎಂದು ಹೇಳಿದ್ದರು.












Click it and Unblock the Notifications