ಸಾಲು ಸಾಲು ಚಾನೆಲುಗಳು ಮಂಗಮಾಯ ಆಗುತ್ತಿವೆ

ಸೆಟ್ ಟಾಪ್ ಬಾಕ್ಸ್ ಹಾಕಿಸಿಕೊಂಡ ಬಳಿಕ ಸದರಿ ಚಾಲೆನ್ ನಂಬರಿಗೆ ತಿರುಗಿಸಿದರೆ ಉಹುಃ ಅಲ್ಲಿ ಧೋ ಎಂಬೋ ಮಳೆ. ಅದು ಹಳೆಯ ದೂರದರ್ಶನ ಕಂಡ ದುಃಸ್ವಪ್ನದಂತೆ ಭಾಸವಾಗುತ್ತಿದೆ. ಅಯ್ಯೋ ಶಿವನೇ ನಾವು ಮನಸಾರೆ ಇಷ್ಟಪಡುವ ಕಾರ್ಯಕ್ರಮಗಳನ್ನು ನೋಡೋಣ ಅಂದರೆ ಇದೇನು ಹೀಗಾಗಿದೆ ಎಂದು ಕೋಪಿಸಿಕೊಳ್ಳುತ್ತಾ ಕೇಬಲ್ ಆಪರೇಟರ್ ಮೊಬೈಲ್ ನಂಬರಿಗೆ ತಿರುಗಿಸಿದರೆ ನಾಟ್ ರೀಚಬಲ್ ಆಗಿದೆ.
ಆದರೂ ಶಕ್ತಿಮೀರಿ ಪ್ರಯತ್ನಿಸಿದಾಗ ಹೌದು ಮಾಯಾ ಪೆಟ್ಟಿಗೆಯ ಸೆಳೆತವೇ ಹಾಗೆ ಅದಿಲ್ಲಾಂದ್ರೆ ಊಟ ನಿದ್ದೆಯೂ ನಡೆಯೋಲ್ಲ. ಹಾಗಾಗಿ, ಸೀದಾ ಕೇಬಲ್ ಆಪರೇಟರ್ ಕಚೇರಿಗೇ ಹೋದರೆ ಅವರು ಗೊಳೋ ಅನ್ನುತ್ತಿದ್ದಾರೆ. ವಾಸ್ತವವಾಗಿ ಅದು ಕೇಬಲ್ ಟಿವಿ ಆಪರೇಟರ್ಸ್ ಮತ್ತು ಚಾನೆಲ್ ಮ್ಯಾನೇಜ್ ಮೆಂಟಿನವರ ನಡುವಣ ಹಗ್ಗಜಗ್ಗಾಟದ ಪರಿಣಾಮ ಎಂಬುದು ಕಿವಿಗೆ ಬೀಳುತ್ತದೆ.
ಈ ಮಧ್ಯೆ, ಚಾನೆಲ್ ಮ್ಯಾನೇಜ್ ಮೆಂಟಿನವರು ಹೆಚ್ಚು ಹಣಕ್ಕಾಗಿ ಆಗ್ರಹಿಸುತ್ತಿದ್ದು, ದಿಕ್ಕು ತೋಚದಾಗಿದೆ ಎಂದು ಕೇಬಲ್ ಆಪರೇಟರುಗಳು ಅಲವತ್ತುಕೊಂಡಿದ್ದಾರೆ.
ಇಡೀ ಬೆಂಗಳೂರಿನಾದ್ಯಂತ ಇದೇ ಪರಿಸ್ಥಿತಿ ಇದೆ. ತಾವು ಇಷ್ಟಪಡುವ ಕೋಟ್ಯಧಿಪತಿ, ಬಿಗ್ ಬಾಸ್, ಸಿನಿಮಾಗಳು ಯಾವುದಕ್ಕೂ ದರುಶನ ಭಾಗ್ಯವಿಲ್ಲ. ಇದು ಭಾಷಾತೀತವಾಗಿದೆ. ಎಲ್ಲ ಭಾಷೆಗಳ ಚಾನೆಲುಗಳಿಗೂ ಇದೇ ದುಃಸ್ಥಿತಿ. ಇದರಿಂದ ಬೇಸತ್ತಿರುವ ಅನೇಕ ಮಂದಿ ಈ ಕೇಬಲ್ ನವರ ಸಹವಾಸವೇ ಬೇಡವೆಂದು ಮತ್ತಷ್ಟು ಹಣ ಸುರಿದು ಡಿಶ್ ಕನೆಕ್ಷನಿಗೆ ಮೊರೆಹೋಗುತ್ತಿದ್ದಾರೆ.
ಆದರೆ ತಿಂಗಳ ಹಿಂದಷ್ಟೇ ಸೆಟ್ ಟಾಪ್ ಬಾಕ್ಸಿಗೆಂದು ದುಬಾರಿ ಹಣ ತೆತ್ತಿರುವ ಜನ ಮಾತ್ರ ಕೇಬಲ್ ಆಪರೇಟರ್ ಈ ತಿಂಗಳು ಬಿಲ್ ವಸೂಲಿಗೆ ಬರಲಿ. ಆಗ ಅವನಿಗೆ ಮಂಗಳಾರತಿ ಮಾಡುತ್ತೇವೆ ಎಂದು ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಜೂನ್ ಮೊದಲ ವಾರದಲ್ಲಿ ಮನೆ ಮನೆಗಳಲ್ಲಿ ಭರಪೂರ್ ಎಂಟರ್ ಟೈನ್ಮೆಂಟ್, ಟಿವಿಯಲ್ಲಿ ಅಲ್ಲ, ಟಿವಿಯಿಂದಾಗಿ ಮನೆಯ ಮುಂದೆ!












Click it and Unblock the Notifications