ಎಲ್ ಕೆ ಅಡ್ವಾಣಿ ವಿರುದ್ಧ ಡಂಗೂರ ಸಾರುವೆ: ಲೆಹರ್ ಸಿಂಗ್
ಬೆಂಗಳೂರು, ಮೇ 24: ಸದ್ಯದಲ್ಲೇ 7 ರಾಜ್ಯಗಳ ರಾಜಧಾನಿಗಳಿಗೆ ಭೇಟಿ ನೀಡಿ ಅಲ್ಲೆಲ್ಲಾ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ವಿರುದ್ಧ ಡಂಗೂರ ಹೊಡೆಯುವ ಕಾರ್ಯಕ್ರಮ ಹಾಕಿಕೊಂಡಿದ್ದೇನೆ ಎಂದು ವಿಧಾನಪರಿಷತ್ ಮೇಲ್ಮನೆ ಸದಸ್ಯ ಲೆಹರ್ ಸಿಂಗ್ ಹೇಳಿದ್ದಾರೆ.
ಲೆಹರ್ ಸಿಂಗ್ ಅವರು, ಎನ್ ಡಿಎ ಅಧ್ಯಕ್ಷರೂ ಆದ ಎಲ್ ಕೆ ಅಡ್ವಾಣಿಗೆ ಮೇ 13ರಂದು ಖಾರವಾದ ಪತ್ರ ಬರೆದಿದ್ದರು. (ಪತ್ರ ಓದಲು ಇಲ್ಲಿ ಕ್ಲಿಕ್ಕಿಸಿ) ಅದರಲ್ಲಿ ಆಡ್ವಾಣಿ ಪ್ರಾಮಾಣಿಕತೆಯನ್ನು ಪ್ರಶ್ನಿಸಿ, 13 ಪ್ರಶ್ನೆಗಳನ್ನು ಎತ್ತಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಪ್ರಧಾನ ಕಾರ್ಯದರ್ಶಿಗಳಾದ ರಾಮಲಾಲಜಿ ಮತ್ತು ಧರ್ಮೇಂದ್ರ ಪ್ರಧಾನ್ ಅವರಿಗೂ ಪತ್ರದ ಪ್ರತಿಯನ್ನು ಕಳಿಸಿಕೊಟ್ಟಿದ್ದರು.

ಸಾರ್ವಜನಿಕವಾಗಿ ಹೀಗೆ ಹಿರಿಯ ನಾಯಕನ ಪ್ರಾಮಾಣಿಕತೆ ಪ್ರಶ್ನಿಸಿದ್ದಕ್ಕೆ ರೊಚ್ಚಿಗೆದ್ದ ಬಿಜೆಪಿ ಲೆಹರ್ ಸಿಂಗರನ್ನು ಪಕ್ಷದಿಂದ ತಕ್ಷಣ ಉಚ್ಛಾಟಿಸಿತ್ತು. ಅದಾಗುತ್ತಿದ್ದಂತೆ ಈಗ ನವದೆಹಲಿ, ಭೋಪಾಲ್, ಪಾಟ್ನಾ, ರಾಯಪುರ, ಮುಂಬೈ, ಅಹಮದಾಬಾದ್, ಜೈಪುರಗಳಲ್ಲಿ ಸುದ್ದಿಗೋಷ್ಠಿಗಳನ್ನು ನಡೆಸಿ, ಅಲ್ಲೆಲ್ಲ ಎಲ್ಲಾ ವಿಚಾರಗಳನ್ನು ಮಾಧ್ಯಮಗಳ ಮುಂದೆ ವಿವರವಾಗಿ ಹೇಳುತ್ತೇನೆ ಎಂದು ಲೆಹರ್ ಸಿಂಗ್ ತಿಳಿಸಿದ್ದಾರೆ.
ಇದರಿಂದ ಬಿಜೆಪಿಯ ಎಲ್ಲ ಘಟಕಗಳಿಗೂ ಆಡ್ವಾಣಿ ಕುರಿತು ವಾಸ್ತವದ ಸಂಗತಿಗಳು ಮನದಟ್ಟಾಗುವಂತೆ ತಿಳಿಸುವುದು ನನ್ನ ಉದ್ದೇಶ. ಕರ್ನಾಟಕ ಬಿಜೆಪಿಯಲ್ಲಿ ನಡೆದ ವಿದ್ಯಾಮನಗಳು, ಆಡ್ವಾಣಿಗೆ ಬರೆದಿರುವ ಪತ್ರದ ಪ್ರತಿ, ತಮ್ಮನ್ನು ಉಚ್ಛಾಟಿಸಿದ ನಂತರ ರಾಜ್ಯ ಘಟಕಕ್ಕೆ ನೀಡಿದ ಉತ್ತರದ ಪ್ರತಿಗಳನ್ನು ಮಾಧ್ಯಮ ಪ್ರತಿಗಳಿಗೆ ನೀಡಿ, ನಿಜ ಸಂಗತಿಯನ್ನು ಬಯಲು ಮಾಡುವೆ ಎಂದು ಲೆಹರ್ ಗುಡುಗಿದ್ದಾರೆ.












Click it and Unblock the Notifications