ಫಿಕ್ಸಿಂಗ್ : ಚೆನ್ನೈ ಸೂಪರ್ ಕಿಂಗ್ಸ್ ಬಾಸ್ ಗೆ ಸಮನ್ಸ್

ಐಪಿಎಲ್ 6ರಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಗುರುನಾಥ್ ಮೇಯಪ್ಪನ್ ಅವರಿಗೂ ಸ್ಪಾಟ್ ಫಿಕ್ಸಿಂಗ್ ಆರೋಪಿಗಳಿಗೂ ಸಂಪರ್ಕವಿದೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಚೆನ್ನೈಗೆ ಆಗಮಿಸಿದ್ದಾರೆ.
ಗುರುನಾಥ್ ಅಲ್ಲದೆ ಚೆನ್ನೈ ತಂಡದ ಹಿರಿಯ ಅಧಿಕಾರಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಫಿಕ್ಸಿಂಗ್ ಆರೋಪಿಗಳ ಜೊತೆ ನಿಕಟ ಸಂಪರ್ಕ ಹೊಂದಿರುವ ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಹಾಗೂ ಗುರುನಾಥ್ ಅವರು ನಿರಂತರ ಸಂಪರ್ಕದಲ್ಲಿರುವುದು ಸ್ಪಷ್ಟವಾಗಿದೆ. ಹೆಚ್ಚಿನ ಮಾಹಿತಿ ಕಾಲಕಾಲಕ್ಕೆ ಒದಗಿಸಲಾಗುವುದು ನಿರೀಕ್ಷಿಸಿ...
ಸಮಯ 2.45: ಗುರುನಾಥ ಮನೆಯೊಳಗೆ ಮುಂಬೈ ಪೊಲೀಸರಿಗೆ ಕೊನೆಗೂ ಪ್ರವೇಶ ಸಿಕ್ಕಿದೆ. ಆದರೆ, ಮೊದಲೇ ಹೇಳಿದಂತೆ ಗುರುನಾಥ್ ಮನೆಯಲ್ಲಿಲ್ಲ. ಮನೆಯಲ್ಲಿದ್ದವರಿಗೆ ಅಧಿಕೃತವಾಗಿ ಸಮನ್ಸ್ ಪ್ರತಿಯನ್ನು ನೀಡಿ ಪೊಲೀಸರು ಹಿಂತಿರುಗಿದ್ದಾರೆ.
ಸಮಯ 12.45: ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಗುರುನಾಥ್ ಅವರ ಚೆನ್ನೈ ನಿವಾಸಕ್ಕೆ ತೆರಳಿದ ಮುಂಬೈ ಪೊಲೀಸರು ಬರಿಗೈನಲ್ಲಿ ವಾಪಸ್ಸಾಗಿದ್ದಾರೆ. ಟೈಮ್ಸ್ ನೌ ವರದಿ ಪ್ರಕಾರ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಅವರು ಎಲ್ಲಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಚೆನ್ನೈ ಪೊಲೀಸರ ನೆರವಿನಿಂದ ಮುಂಬೈ ಪೊಲೀಸರು ಗುರುನಾಥ್ ಮನೆಗೆ ತೆರಳಿದ್ದರು. ಗುರುನಾಥ್ ಇರುವಿಕೆ ಬಗ್ಗೆ ಯಾವುದೇ ಸೂಚನೆ ಸಿಕ್ಕಿಲ್ಲ.
ಸಮಯ 12.30: ಅಜ್ಮೇರ್ ನಲ್ಲಿ ಮತ್ತೊಬ್ಬ ಬುಕ್ಕಿ ಬಂಧನ. ರಾಜಸ್ಥಾನ ರಾಯಲ್ಸ್ ತಂಡದ ಪಂದ್ಯಗಳ ಮೇಲೆ ಬೆಟ್ ಕಟ್ಟುತ್ತಿದ್ದ ಆರೋಪ ಆತನ ಮೇಲಿದೆ. ಹೆಚ್ಚಿನ ವಿವರ ಸಿಕ್ಕಿಲ್ಲ.
ಸಮಯ 12.10: ಸಿಎಸ್ ಕೆ ಸಿಇಒ ಗುರುನಾಥ್ ಗೆ ಹಲವು ಬಾರಿ ಕರೆ ಮಾಡಿದ್ದು ನಿಜ ಎಂದು ವಿಂದೂ ಒಪ್ಪಿಕೊಂಡಿದ್ದಾರೆ. ಆದರೆ, ಅದೆಲ್ಲವೂ ಖಾಸಗಿ ಕರೆಯಾಗಿತ್ತು. ಬೆಟ್ಟಿಂಗ್, ಫಿಕ್ಸಿಂಗ್ ಕುರಿತು ಮಾತನಾಡಿಲ್ಲ ಎಂದಿದ್ದಾರೆ.
ಗುರುನಾಥ್ ಅವರ ಪಾತ್ರ ಏನು ಎಂಬುದನ್ನು ತಕ್ಷಣಕ್ಕೆ ಹೇಳಲು ಬರುವುದಿಲ್ಲ. ಬೆಟ್ಟಿಂಗ್ ಜಾಲದೊಡನೆ ಸಂಪರ್ಕ ಹೊಂದಿರುವ ಬಗ್ಗೆ ಸದ್ಯಕ್ಕೆ ಏನು ಹೇಳಲಾಗದು ಎಂದು ಮುಂಬೈ ಜಂಟಿ ಆಯುಕ್ತ(ಕ್ರೈಂ) ಹಿಮಾಂಶು ರಾಯ್ ಹೇಳಿದ್ದಾರೆ.
ಸಮಯ 11.15: ಶ್ರೀಶಾಂತ್ ಬೆಟ್ಟಿಂಗ್ ಹೌಸ್ : ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಪೊಲೀಸ್ ಕಸ್ಟಡಿಯಲ್ಲಿರುವ ಕಳಂಕಿತ ಕ್ರಿಕೆಟಿಗ ಎಸ್.ಶ್ರೀಶಾಂತ್ ಮಾಲಕತ್ವದ ಕಂಪೆನಿ ಎಸ್ 36 ಸ್ಪೋರ್ಟ್ಸ್ ಆ ಯಂಡ್ ಎಂಟರ್ ಟೈನ್ ಮೆಂಟ್ ಪ್ರೈ.ಲಿ. 'ಬೆಟ್ಟಿಂಗ್ ಹೌಸ್' ಆಗಿತ್ತು ಎಂಬ ಅಂಶ ದಾಖಲೆಗಳಿಂದ ತಿಳಿದು ಬಂದಿದೆ.
ಶ್ರೀಶಾಂತ್ ತನ್ನ ಕಂಪೆನಿಯಲ್ಲಿ ಶೇ. 74 ರಷ್ಟು ಹಕ್ಕು ಹೊಂದಿದ್ದು, ಮಾಜಿ ಕೋಚ್ ಪಿ ಶಿವಕುಮಾರ್ ಉಳಿದ ಶೇ. 26 ಹಕ್ಕು ಹೊಂದಿದ್ದರು. ಈ ಕಂಪೆನಿ ಕರ್ನಾಟಕದಲ್ಲಿ ನೋಂದಣಿಯಾಗಿದೆ.
ಭಾರತ ಹಾಗೂ ವಿದೇಶದಲ್ಲಿ ಬೆಟ್ಟಿಂಗ್ ಹೌಸ್, ಜಿಮ್ಸ್ ಹಾಗೂ ಕೋಚಿಂಗ್ ಸೆಂಟರ್ ಗಳನ್ನು ನಡೆಸುವುದು ಕಂಪೆನಿಯ ಉದ್ದೇಶ ಎಂದು ದಾಖಲೆಗಳಲ್ಲಿ ನಮೂದಿಸಲಾಗಿದೆ. ಕಂಪೆನಿ ಬೆಂಗಳೂರಿನಲ್ಲಿ ಸೆ.29, 2010ರಲ್ಲಿ ಸ್ಥಾಪನೆಯಾಗಿತ್ತು ಎಂದು ದಾಖಲೆಯಿಂದ ತಿಳಿದು ಬಂದಿದೆ.
ಮೇ 22 ರ ಹೇಳಿಕೆ: 'ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಿಂದಾಗಿ ಕ್ರೀಡೆಗೆ ಕೆಟ್ಟ ಹೆಸರು ಬಂದಿದೆ. ಆದರೆ, ಐಪಿಎಲ್ ನಿಲ್ಲಿಸುವುದು ಸರಿಯಲ್ಲ. ಕಳಂಕಿತರ ವಿರುದ್ಧ ತನಿಖೆ ನಡೆಯುತ್ತಿದೆ. ಅಪರಾಧಿಗಳಿಗೆ ತಕ್ಕ ಶಿಕ್ಷೆ ಕಾದಿದೆ' ಎಂದು ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.












Click it and Unblock the Notifications