ಮತ್ತೊಂದು ಸಮೀಕ್ಷೆ; ಯುಪಿಎಗೆ ಮತ್ತೊಂದು ಸೋಲು
ನವದೆಹಲಿ, ಮೇ 22- ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿ ಸರಕಾರ ನವ ವಸಂತದ ಕೂಸು. ಇಂದು ಜನುಮ ದಿನ. ಆದರೆ ನಾಲ್ಕನೆಯ ವರ್ಷಾಚರಣೆಯಲ್ಲಿರುವ ಯುಪಿಎ-2 ಸರಕಾರಕ್ಕೆ ಬಾಲಗ್ರಹಪೀಡೆ. ಯುಪಿಎ-2 ಮುಂದುವರಿದು ಯುಪಿಎ-3 ಆಗುವುದಿಲ್ಲ ಎನ್ನುತ್ತಿದೆ ತಾಜಾ ಸಮೀಕ್ಷೆಯೊಂದು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ ಎಂದು ಸಿಎನ್‌ಎನ್- ಐಬಿಎನ್ ಸುದ್ದಿವಾಹಿನಿಯ ಸಮೀಕ್ಷೆ ಹೇಳುತ್ತಿದೆ. ಪ್ರಧಾನಿ ಮನಮೋಹನ್ ಸಿಂಗ್ ಪ್ರಧಾನಿ ಹುದ್ದೆಯನ್ನು ತ್ಯಜಿಸುವುದು ಒಳಿತು ಎಂಬುದು ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕರ ಮಂದಿಯ ಅಭಿಪ್ರಾಯವಾಗಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎಗೆ ಕಹಿಯಾಗುವ ಸುದ್ದಿ ಬಿಜೆಪಿ ನೇತೃತ್ವದ ಎನ್ ಡಿಎಗೆ ಸಿಹಿಯಾಗಿರಲೇಬೇಕು. ಅದರಲ್ಲೂ ಭಾವಿ ಪ್ರಧಾನಿ ಎಂದೇ ಚಾಲ್ತಿಯಲ್ಲಿರುವ ಗುಜರಾತ್ ಸಿಎಂ ನರೇಂದ್ರ ಮೋದಿಗೆ ಮುಂದಿನ ಪ್ರಧಾನಿಯಾಗಲಿ ಎಂದು ಶೇ. 38ರಷ್ಟು ಮಂದಿ ಬಯಸಿದ್ದಾರೆ. ಅದೇ ರಾಹುಲ್ ಗಾಂಧಿಗೆ ಶೇ. 14 ರಷ್ಟು ಮತ ಬಿದ್ದಿವೆ.
ದೇಶದ 12 ಪ್ರಮುಖ ನಗರಗಳಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ ಶೇ. 61 ಮಂದಿ ಮನಮೋಹನ್ ಸಿಂಗ್ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಬೇಕೆಂದು ಬಯಸಿದ್ದಾರೆ. ಶೇ. 37 ರಷ್ಟು ಮಂದಿ ಮಾತ್ರ ಅವರು ಪ್ರಧಾನಿಯಾಗಿ ಮುಂದುವರಿಯಬೇಕೆಂದು ಬಯಸಿದ್ದಾರೆ.
ಯುಪಿಎ ಆಡಳಿತವು ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 67 ಮಂದಿ ಹೇಳಿದ್ದರೆ, ಶೇ. 31 ಮಂದಿ ಮಾತ್ರ ತಮ್ಮ ಮುಂದೆ ಇರುವ ಇತರ ಆಯ್ಕೆಗಳಿಗಿಂತ ಯುಪಿಎ ಸರಕಾರವೇ ವಾಸಿಯೆಂದು ಅಭಿಪ್ರಾಯಿಸಿದ್ದಾರೆ.
ಆದರೆ ಪ್ರಾಮಾಣಿಕತೆಯ ವಿಷಯದಲ್ಲಿ ಬಹುತೇಕ ಮಂದಿ ಮನಮೋಹನ್ ಸಿಂಗ್ ಗೆ ಕ್ಲೀನ್ ಚಿಟ್ ನೀಡಿದ್ದಾರೆ. ಶೇ. 40ರಷ್ಟು ಮಂದಿ ಅವರೊಬ್ಬ ಪ್ರಾಮಾಣಿಕ ವ್ಯಕ್ತಿ ಎಂದಿದ್ದಾರೆ. ಶೇ. 33 ಮಂದಿ ಮಾತ್ರ ಅವರ ಪ್ರಾಮಾಣಿಕರಲ್ಲ ಎಂದು ಭಾವಿಸಿದ್ದಾರೆ. ಉಳಿದ ಶೇ. 24 ಮಂದಿ, ಅವರ ಪ್ರಾಮಾಣಿಕತೆಯು ಕಳೆದೊಂದು ವರ್ಷದಿಂದ ಕುಸಿದಿದೆಯೆಂದು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಯುಪಿಎ ಸರಕಾರದಲ್ಲಿ ಭ್ರಷ್ಟಾಚಾರವು ಹೆಚ್ಚಿದೆಯೆಂದು ಶೇ. 71 ಮಂದಿಯ ಅಭಿಮತ. ಶೇ. 20 ಮಂದಿ ಭ್ರಷ್ಟಾಚಾರವು ಮೊದಲು ಹೇಗಿತ್ತೋ ಅಷ್ಟೇ ಇದೆಯೆಂದು ಹೇಳಿದ್ದಾರೆ.












Click it and Unblock the Notifications