ಯಶವಂತಪುರ : ವಿವಾಹ ನಿಶ್ಚಯವಾಗಿದ್ದ ಯುವತಿ ಕಗ್ಗೊಲೆ

ಬುಧವಾರ ರಮ್ಯಾಳ ಶವ ಪತ್ತೆಯಾಗಿದ್ದು, ವೈರ್ ನಿಂದ ಕುತ್ತಿಗೆಗೆ ಬಿಗಿದು ಆಕೆಯನ್ನು ಕೊಲೆ ಮಾಡಲಾಗಿದೆ. ಶವದ ಗುರುತು ಸಿಗದಂತೆ ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಲಾಗಿದೆ. ನಿನ್ನೆ ಸಂಜೆಯಿಂದ ಕಾಣೆಯಾಗಿದ್ದ ರಮ್ಯಾ ಇಂದು ಶವವಾಗಿ ಪತ್ತೆಯಾಗಿದ್ದಾಳೆ.
ಯಶವಂತಪುರದ ನಿವಾಸಿಯಾಗಿದ್ದ ರಮ್ಯಾ(25)ಳಿಗೆ ನಂದನ್ ಗೌಡ ಎಂಬುವವರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಇದೇ ತಿಂಗಳ ಅಂತ್ಯಕ್ಕೆ ಅವರ ವಿವಾಹ ನಿಗದಿಯಾಗಿತ್ತು.
ಮಂಗಳವಾರ ಸಂಜೆ ಪತಿಯೊಂದಿಗೆ ಹೊರ ಹೋಗಿ ಬರುವುದಾಗಿ ಹೇಳಿ ರಮ್ಯಾ ಮನೆಯಿಂದ ಹೊರ ನಡೆದಿದ್ದಳು. ನಂತರ 6.30ರ ಸುಮಾರಿಗೆ ಕರೆ ಮಾಡಿ ಗೆಳತಿಯ ಮನೆಗೆ ಹೋಗುತ್ತೇನೆ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಳು.
ಇಂದು ಬೆಳಗ್ಗೆ ರಮ್ಯಾಳ ಮೃತದೇಹ ಜಾಲಹಳ್ಳಿ ರಸ್ತೆಯ ಬಳಿಯ ಖಾಲಿ ನಿವೇಶನದಲ್ಲಿ ಪತ್ತೆಯಾಗಿದ್ದು. ರಮ್ಯಾಳನ್ನು ಕೊಲೆ ಮಾಡಿ ಶವವನ್ನು ಜಾಲಹಳ್ಳಿಯ ರಸ್ತೆಯ ಬಳಿ ಬಿಸಾಡಿ ಹೋಗಲಾಗಿದೆ ಎಂದು ಯಶವಂತಪುರ ಪೊಲೀಸರು ತಿಳಿಸಿದ್ದಾರೆ. ರಮ್ಯಾಳ ಪತಿ ನಂದನ್ ಗೌಡ ನಾಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಮಾಧ್ಯಮಗಳಿಂದ ಪತ್ತೆ : ಗೆಳತಿಯ ಮನೆಗೆ ಹೋಗುತ್ತೇನೆ ಎಂದಿದ್ದ ರಮ್ಯಾ ಇಂದು ಬೆಳಗ್ಗೆಯೂ ಮನೆಗೆ ಮರಳಿರಲಿಲ್ಲ. ಆಕೆ ಮತ್ತು ಪತಿ ನಂದನ್ ಗೌಡ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಇದರಿಂದ ಕುಟುಂಬದವರು ಗಾಬರಿಯಾಗಿದ್ದರು.
ಯಶವಂತಪುರ ಬಳಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ ಎಂದು ಮಾಧ್ಯಮಗಳಲ್ಲಿ ಇಂದು ಬೆಳಗ್ಗೆಯಿಂದ ವರದಿ ಪ್ರಸಾರವಾಗುತ್ತಿತ್ತು. ಟಿವಿಯಲ್ಲಿ ವರದಿ ನೋಡಿದ ರಮ್ಯಾ ಕುಟುಂಬದವರು, ತಮ್ಮ ಮಗಳು ಇದ್ದಹಾಗೆ ಇದ್ದಾಳೆ ಎಂದು ಯಶವಂತಪುರ ಪೊಲೀಸರಿಗೆ ಕರೆ ಮಾಡಿದ್ದಾರೆ.
ಪೊಲೀಸರು ಶವವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇಡಲಾಗಿದೆ. ಬಂದು ನೋಡಿ ಗುರುತು ಹಿಡಿಯಿರಿ ಎಂದು ಹೇಳಿದ್ದಾರೆ. ಆಸ್ಪತ್ರೆಗೆ ಬಂದ ರಮ್ಯಾ ಕುಟುಂಬದವರು ಆಕೆಯ ಗುರುತು ಹಿಡಿದಿದ್ದಾರೆ.
ಕುಟುಂಬದವರಿಂದಾಗಿ ಯುವತಿ ಮತ್ತು ಆಕೆಯ ಕುರಿತಾದ ವಿವರಗಳು ಪೊಲೀಸರಿಗೆ ತಿಳಿದಿವೆ. ರಮ್ಯಾ ಜೊತೆಗೆ ಹೋಗಿದ್ದ ನಂದನ್ ಗೌಡ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.












Click it and Unblock the Notifications