6 ಬಾಲಿಗೆ 60 ಲಕ್ಷ ರೂ: ಬುಕ್ಕಿಗಳು ಎಣಿಸಿದ್ದೆಷ್ಟು?

ಪಾಪಿ ಶ್ರೀಶಾಂತ ಪಡೆದ 'ಗೌರವಧನ': ಐಪಿಎಲ್ಲೋ ಮತ್ತೊಂದೋ ಒಟ್ನಲ್ಲಿ ಇಡೀ ಕ್ರಿಕೆಟ್ ಜಗತ್ತು ತಲೆತಗ್ಗಿಸುವಂತೆ ಸ್ಪಾಟ್ ಫಿಕ್ಸಿಂಗ್ ಭೂತನರ್ತನ ಮಾಡಿದನಲ್ಲಾ ಶ್ರೀಶಾಂತ, ಅದಕ್ಕೆ ಅವನು ಪಡೆದ 'ಗೌರವಧನ' 60 ಲಕ್ಷ ರೂ. ಎಂಬುದು ಈಗಾಗಲೇ ಜಗತ್ತಿಗೆ ತಿಳಿದಿದೆ. ಆದರೆ ಹಾಗೆ ಮೇ 9ರಂದು ಅವನು 7 ನಿಮಿಷಗಳಲ್ಲಿ 6 ಬಾಲು ಎಸೆಯಲು ಲಕ್ಷಾಂತರ ರೂ ಪಡೆದಿದ್ದರೆ ಅವನ ಮೇಲೆ ಅಷ್ಟೊಂದು ಬಂಡವಾಳ ಹೂಡಿದ ಪಾಪಿ ಬುಕ್ಕಿಗಳು ಎಣಿಸಿದ ದುಡ್ಡೆಷ್ಟು ಎಂಬುದು ಕುತೂಹಲಕಾರಿಯಾಗಿದೆ.
7 ನಿಮಿಷದಲ್ಲಿ 6 ಬಾಲಿಗೆ 60 ಲಕ್ಷ ರೂ ಬಂಡವಾಳ ಹೂಡಿದರೆ ಬುಕ್ಕಿ ಅದರಿಂದ ಎಷ್ಟು ಲಾಭ ಮಾಡಿಕೊಂಡ? ಎಂಬುದು ಇಲ್ಲಿನ ಸರಳ ಪ್ರಶ್ನೆ. ಇದಕ್ಕೆ ಉತ್ತರ ಬರೋಬ್ಬರಿ 2.5 ಕೋಟಿ ರೂ!
ಹೌದು ಚಂದ್ರಶೇಷ ಪಟೇಲ್ ಎಂಬ ಬುಕ್ಕಿ ಆವತ್ತು 7 ನಿಮಿಷದಲ್ಲಿ ಗಳಿಸಿದ್ದು 2.5 ಕೋಟಿ ರೂ! ಅತ್ತ ಶ್ರೀಶಾಂತ ಎಂಬ ಚಂಡಾಲ ಒಂದೊಂದೇ ಚೆಂಡೆಸೆಯುತ್ತಾ ಜಂಟಲ್ ಮನ್ ಕ್ರಿಕೆಟ್ ಆಟಕ್ಕೆ ಮಸಿ ಬಳಿಯುತ್ತಿದ್ದರೆ ಇತ್ತ ಬುಕ್ಕಿ ಮೊಗದಲ್ಲಿ ನಗೆ ಉಕ್ಕಿ ಹರಿಯುತ್ತಿತ್ತು. ಮತ್ತು ಅವನ ಜೇಬು ತುಂಬಿ ತುಳುಕತೊಡಗಿತ್ತು.
ಈ ಬಗ್ಗೆ ನಮಗೆ ಸಾಕ್ಷಿ ಸಿಕ್ಕಿದೆ ಎಂದು ದಿಲ್ಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಹೇಳುತ್ತಿದ್ದರೆ ಕ್ರಿಕೆಟ್ ಪ್ರೇಮಿಗಳ ಕಿವಿಗಳಿಗೆ ಕಾದ ಕಬ್ಬಿಣ ಸುರಿದಂತಾಗುತ್ತಿತ್ತು. ಇದು ಮುಂಬೈನ ಅಂಧೇರಿಯಲ್ಲಿರುವ ಚಂದ್ರಶೇಷ ಪಟೇಲ್ ಎಂಬ ಒಬ್ಬ ಬುಕ್ಕಿಯ ಲೆಕ್ಕ. ಸದ್ಯಕ್ಕೆ ಇಂತಹ 14 ಬುಕ್ಕಿಗಳನ್ನು ಪೊಲೀಸರು ರುಬ್ಬುತ್ತಿದ್ದಾರೆ. ಅವರು ಗಳಿಸಿದ ಮೊತ್ತವೆಷ್ಟೋ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಈ ಮಧ್ಯೆ ಮುಂಬೈ ಪೊಲೀಸರು ಅತ್ಯಂತ ದುರ್ಗಮವೆನಿಸಿರುವ Maharashtra Control of Organised Crime Act (MCOCA) ಅಡಿ ಶ್ರೀಶಾಂತನ ವಿರುದ್ಧ ಪ್ರಕರಣ ದಾಖಲಿಸಲು ಸಜ್ಜಾಗುತ್ತಿದ್ದಾರೆ.












Click it and Unblock the Notifications