ತಕ್ಷಣಕ್ಕೆ ಚುನಾವಣೆ ನಡೆದ್ರೆ ಕಾಂಗ್ರೆಸ್-ಯುಪಿಎ ಧೂಳೀಪಟ
ನವದೆಹಲಿ, ಮೇ 21- ಮತ್ತೊಂದು ಸಮೀಕ್ಷೆ ಹೊರಬಿದ್ದಿದೆ. ಆದರೆ ನಾಳೆ ನಾಲ್ಕನೆಯ ವರ್ಷಾಚರಣೆಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರಕ್ಕೆ ಅದು ಆಘಾತಕಾರಿಯಾಗಿದೆ.
ABP Ananda - Nielsen survey ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ ಈ ತಕ್ಷಣಕ್ಕೆ ಲೋಕಸಭಾ ಚುನಾವಣೆ ಏರ್ಪಟ್ಟರೆ ಯುಪಿಎ-2 ಮೈತ್ರಿಕೂಟಕ್ಕೆ ಹೀನಾಯ ಸೋಲು ಕಟ್ಟಿಟ್ಟಬುತ್ತಿ ಎನ್ನಲಾಗಿದೆ.
ಇದು ಪ್ರಧಾನವಾಗಿ ಪ್ರಧಾನ ಮಂತ್ರಿ ಸಿಂಗ್ ಅವರ ನಿಸ್ತೇಜ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಜತೆಗೆ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ, ಕುಂಠಿತ ಆರ್ಥಿಕ ಪ್ರಗತಿಯೂ ಇದಕ್ಕೆ ಹೇತುವಾಗಿದೆ ಎನ್ನುತ್ತಿದೆ ಸಮೀಕ್ಷೆ.
ಒಟ್ಟು 21 ರಾಜ್ಯಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು ಅನೇಕ ರಾಜ್ಯಗಳಲ್ಲಿ UPA-2 ಧೂಳೀಪಟವಾಗಲಿದೆ. ಸಮೀಕ್ಷೆಯಲ್ಲಿ ತಿಳಿದುಬಂದಿರುವ ಮತ್ತೊಂದು ಅಂಶವೆಂದರೆ ಈ ಬಾರಿ ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತರ ಚರಿಷ್ಮಾವೇನೂ ವರ್ಕ್ ಔಟ್ ಆಗುವುದಿಲ್ಲವಂತೆ.
ಹಾಗಾದರೆ ಗೆಲ್ಲೋರು ಯಾರು, ಸಮೀಕ್ಷೆಯ ವಿವರ ಏನು, ಎತ್ತ? Details ಇಲ್ಲಿದೆ:

ಅರ್ಧಕ್ಕರ್ಧ ಸೋಲು ಗ್ಯಾರಂಟಿ
ಈ ತಕ್ಷಣಕ್ಕೆ ಲೋಕಸಭಾ ಚುನಾವಣೆ ಏರ್ಪಟ್ಟರೆ ಯುಪಿಎ-2 ಮೈತ್ರಿಕೂಟವು ಈಗಿರುವ 262 ಸ್ಥಾನಗಳಿಂದ 136ಕ್ಕೆ ಕುಸಿಯಲಿದೆ. ಆದರೆ ಬಿಜೆಪಿ 206ಕ್ಕೆ ಏರಲಿದೆ. ಈಗ ಬಿಜೆಪಿ ಟ್ಯಾಲಿ 158ರಲ್ಲಿದೆ.

ರಾಹುಲ್ ಮತ್ತೆ ಫೇಲ್; ಮೋದಿ ಲೀಡಿಂಗ್ ಲೀಡರ್
ಎಬಿಪಿ ನ್ಯೂಸ್ ಹಿಂದಿ ಸುದ್ದಿವಾಹಿನಿ ಮತ್ತು ಎಸಿ ನೀಲ್ಸನ್ ಸಮೀಕ್ಷಾ ಸಂಸ್ಥೆ ನಡೆಸಿದ ಲೋಕಸಭಾ ಚುನಾವಣೆ ಸಮೀಕ್ಷೆಯಲ್ಲಿ ಪ್ರಧಾನಿ ಹುದ್ದೆಯ ನೆಚ್ಚಿನ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. 151 ಕ್ಷೇತ್ರಗಳ 33 ಸಾವಿರ ಜನರನ್ನು ಸಮೀಕ್ಷೆಯಲ್ಲಿ ಸಂದರ್ಶಿಸಿದಾಗ ಬಿಜೆಪಿಯ ಸಂಭಾವ್ಯ ಪ್ರಧಾನಿ ಅಭ್ಯರ್ಥಿ ಮೋದಿ ಪರ ಶೇ. 48 ಮತ್ತು ಕಾಂಗ್ರೆಸ್ಸಿನ ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾದ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಪರ ಕೇವಲ ಶೇ. 18 ಜನ ಒಲವು ತೋರಿದ್ದಾರೆ.

ಸಿಂಗ್ ಈಸ್ ಕಿಂಗ್ ಅಲ್ಲ
ಸಮೀಕ್ಷೆಯ ಅನುಸಾರ ಮೂರನೆಯ ಬಾರಿಗೂ ಮನಮೋಹನ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ನೋಡಲು ಜನ ಸಿದ್ಧರಿಲ್ಲ. ಶೇ. 12 ಮಂದಿಯಷ್ಟೇ ಸಿಂಗ್ ಈಸ್ ಕಿಂಗ್ ಅಂದಿದ್ದಾರೆ.

ಪಶ್ಚಿಮ ಬಂಗಾಳದ್ದು ಇಂಟರೆಸ್ಟಿಂಗ್ ಆಗಿದೆ
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸಿಗೆ 9 ಲೋಕಸಭಾ ಸ್ಥಾನಗಳು. ಕಾಂಗ್ರೆಸ್ಸಿಗೆ ಕೈಕೊಟ್ಟು ತೃಣಮೂಲ ಸ್ವತಂತ್ರವಾಗಿ ಸ್ಪರ್ಧಿಸಿದರೆ ಅದಕ್ಕೆ 14, ಇನ್ನು, ಎಡರಂಗಕ್ಕೆ 18 ಸೀಟು ಪ್ರಾಪ್ತಿಯಾಗಲಿದೆ. ಒಂದು ವೇಳೆ ಮೈತ್ರಿಯೊಂದಿಗೆ ಕಣಕ್ಕಿಳಿದರೆ ಕಾಂಗ್ರೆಸ್-ತೃಣಮೂಲ ಜೋಡಿಗೆ 24 ಸ್ಥಾನಗಳ ಖಾತ್ರಿಯಿದೆ. ಆಗ ವಾಮಪಕ್ಷಕ್ಕೆ ಕೇವಲ 17 ದಕ್ಕುತ್ತದೆ.

ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿಗೆ ಮಣೆ
ಉತ್ತರ ಪ್ರದೇಶದಲ್ಲಿಯೂ ಕಾಂಗ್ರೆಸ್ಸಿಗೆ ಭಾರಿ ಆಘಾತ ಕಾದಿದೆ. ಈಗಿರುವ 21 ಸ್ಥಾನಗಳಿಂದ 6ಕ್ಕೆ ಇಳಿಯಲಿದೆ. 24 ಸ್ಥಾನಗಳೊಂದಿಗೆ ಆಡಳಿತಾರೂಢ ಸಮಾಜವಾದಿ ಪಕ್ಷದ ಹಿಡಿತ ಬಿಗಿಯಾಗಲಿದೆ. ಆದರೆ ಬಿಜೆಪಿ ಈಗಿರುವ 10 ರಿಂದ 23ಕ್ಕೆ ಜಿಗಿಯಲಿದೆ.

ಮಹಾರಾಷ್ಟ್ರ-ಬಿಹಾರದಲ್ಲಿ ಹೇಗೆ?
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್- ಎನ್ ಸಿಪಿ ಮೈತ್ರಿಗೆ 9 ಸೀಟು ಸಂಚಕಾರವಾಗಲಿದೆ. ಈಗಿರುವ 25 ರಿಂದ 16 ಸ್ಥಾನಕ್ಕೆ ಕುಸಿಯಲಿದೆ. ಬಿಹಾರದಲ್ಲಿ ಆಡಳಿತಾರೂಢ ಬಿಜೆಪಿ-ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳಕ್ಕೆ 34 ಸ್ಥಾನ ದಕ್ಕಲಿದೆ. ಕಾಂಗ್ರೆಸ್ಸಿಗೆ ಮೂರು ಬಂದರೆ ಅದೇ ಹೆಚ್ಚು.












Click it and Unblock the Notifications