ಸಿಎಂ ಸಿದ್ದುಗೆ ಆನೆಬಲ ತುಂಬಿದ ಕೇಂದ್ರ ಕಾಂಗೈ
ಬೆಂಗಳೂರು, ಮೇ 20- ಗುರು-ಹಿರಿಯರ ಆಶೀರ್ವಾದ, ಮಠಗಳಿಗೆ ಸೌಹಾರ್ಧ ಭೇಟಿ, ಹೈಕಮಾಂಡಿನ ಸಂಪೂರ್ಣ ಕೃಪಾಶೀರ್ವಾದದ ಹಿಮ್ಮೇಳದೊಂದಿಗೆ ಕ್ಲೀನ್ ಇಮೇಜ್ ಸಂಪುಟ ಹೊತ್ತುಕೊಂಡು ಉತ್ತಮ ಆಡಳಿತ ನೀಡಲು ನಾಡಿನ ನೂತನ ಅರಸ ಸಿದ್ದರಾಮಯ್ಯ ಟೊಂಕಕಟ್ಟಿ ನಿಂತಿದ್ದಾರೆ.
ಈ ಸಂದರ್ಭದಲ್ಲಿ ತುಸು ವೇಗವಾಗಿಯೇ ಜನಮನವನ್ನು ತಲುಪುತ್ತಿರುವ ಸಿದ್ದರಾಮಯ್ಯ ಅವರನ್ನು ಗಮನಿಸಿ, ಕೇಂದ್ರ ಕಾಂಗ್ರೆಸ್ ಸರಕಾರವು ಅವರಿಗೆ ಮತ್ತಷ್ಟು ಪ್ರೋತ್ಸಾಹಕಗಳನ್ನು ನೀಡಲು ನಿರ್ಧರಿಸಿದೆ.

4 ವರ್ಷಗಳಿಂದ ಬಿಜೆಪಿ ಆಡಳಿತವಿದ್ದ ಕಾರಣ ಯೋಜನೆಗಳಿಗೆ ಅನುಮತಿ ನೀಡಲು ಹಿಂದೇಟು ಹಾಕುತ್ತಿದ್ದ ಕೇಂದ್ರ ಸರಕಾರ ಈಗ ಕರ್ನಾಟಕದ ಜನತೆಯ ಬಗ್ಗೆ ದಿಢೀರ್ ಮುತುವರ್ಜಿ ವಹಿಸಿ, ಬಾಕಿಯುಳಿದಿರುವ ಯೋಜನೆಗಳಿಗೆ ತಥಾಸ್ತು ಅನ್ನುತ್ತಿದೆ. ಈ ಸಂಬಂಧ pending projectಗಳನ್ನು ಕೈಯಲ್ಲಿ ಹಿಡಿದು ಮತ್ತೊಮ್ಮೆ ದಿಲ್ಲಿಗೆ ಬನ್ನಿ ಎಂದೂ ಕೇಂದ್ರವು ಸಿದ್ದರಾಮಯ್ಯಗೆ ಸೂಚಿಸಿದೆ.
ಹೇಗೂ ಯುಪಿಎ-2 ಸರ್ಕಾರಕ್ಕೆ ನಾಡಿದ್ದು ಬುಧವಾರಕ್ಕೆ 4 ವರ್ಷ ತುಂಬಲಿದೆ. ಅಥವಾ ಅಬ್ಬಬ್ಬಾ ಅಂದರೆ ಇನ್ನಾರು ತಿಂಗಳಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಅವಸಾನ ಕಾಣಲಿದೆ. ಆ ವೇಳೆಗೆ ಭದ್ರ ಅಡಿಪಾಯ ಹಾಕಿಕೊಳ್ಳಲು ಸರ್ವರೀತಿಯಲ್ಲೂ ಯತ್ನಿಸಬೇಕಿದೆ. ಹಾಗಾಗಿ, ಒಂದಷ್ಟು ಯೋಜನೆಗಳ ಗೊಂಚಲನ್ನು ಸಿದ್ದು ಕೈಗೆ ಹಸ್ತಾಂತರಿಸುವುದು ಕೇಂದ್ರದ ಇರಾದೆಯಾಗಿದೆ.
ಲೋಕಸಭಾ ಚುನಾವಣೆ ಮುನ್ನೆಲೆಯಲ್ಲಿ ಈಗಾಗಲೇ ಕರ್ನಾಟಕದಲ್ಲಿ ಭರ್ಜರಿ ಗೆಲುವು ಸಾಧಿಸಿರುವುದನ್ನು ಬಂಡವಾಳ ಮಾಡಿಕೊಳ್ಳಲು ನಿರ್ಧರಿಸಿರುವ ಕೇಂದ್ರ ಕಾಂಗೈ, ಕರ್ನಾಟಕದಲ್ಲಿ ಅನೇಕ ಅಭಿವೃದ್ದಿ ಯೋಜನೆಗಳನ್ನು ಕಾರ್ಯಗತಗೊಳಿಸಲು ನಿರ್ಧರಿಸಿದೆ.
ಕಳೆದ ವಾರ ಬಿಪಿಎಲ್ ಗಾಗಿ ಸಾಕಷ್ಟು ಅಕ್ಕಿಯನ್ನು ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಸಿದ್ದು ಯಶಸ್ವಿಯಾಗಿದ್ದಾರೆ. ಇದರ ಜತೆಗೆ, ಖುದ್ದು ಪ್ರಧಾನಿಯೇ ಆಸಕ್ತಿ ವಹಿಸಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ 'ನಮ್ಮ ಮೆಟ್ರೋ' ಎರಡನೆಯ ಹಂತದ ಯೋಜನೆಗೆ ಅಸ್ತು ಅನ್ನಲು ಯೋಜನಾ ವರದಿಯನ್ನು ತರಿಸಿಕೊಂಡು ಮತ್ತೊಮ್ಮೆ ಪರಿಶೀಲಿಸುತ್ತಿದ್ದಾರೆ. ಇದು ಈಗಿನ ದರದಲ್ಲಿ 14,774 ಕೋಟಿ ರೂ. ಮೊತ್ತದ ಯೋಜನೆ.
ಇನ್ನು, Mumbai-Bangalore-Chennai Industrial Corridor ರೈಲ್ವೆ ಯೋಜನೆಗೆ ಶೀಘ್ರವೇ ಹಸಿರು ನಿಶಾನೆ ತೋರಿಸಲು ಸಿದ್ಧಗೊಳ್ಳುವಂತೆ ರೈಲ್ವೆ ಮತ್ತು ವಾಣಿಜ್ಯ ಸಚಿವಾಲಯಗಳಿಗೆ ಪ್ರಧಾನಿ ಸಿಂಗ್ ತಾಕೀತು ಮಾಡಿದ್ದಾರೆ.
ಇನ್ನು ಹಳ್ಳಿಗಳ ಅಭಿವೃದ್ಧಿಯಲ್ಲಿ ನಿಜಕ್ಕೂ ಶ್ಲಾಘನೀಯ ಕೆಲಸ ಮಾಡುತ್ತಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಅವರು ಸಿದ್ದು ಜತೆ ಹಾಟ್ ಲೈನಿನಲ್ಲಿದ್ದಾರೆ. ಈ ಮಧ್ಯೆ ಉದ್ಯೋಗ ಖಾತ್ರಿ ಯೋಜನೆ ವಿವಾದಕ್ಕೀಡಾಗುತ್ತಿದ್ದಂತೆ ಎಚ್ಚೆತ್ತಿರುವ ರಮೇಶ್, ಅದನ್ನೆಲ್ಲ ಸರಿಪಡಿಸಿಕೊಂಡು ಹಳ್ಳಿಗಳತ್ತ ದೃಢ ಹೆಜ್ಜೆ ಹಾಕಿ ಎಂದಿದ್ದಾರೆ. 'ಗ್ರಾಮೀಣ ಭಾಗಗಳ ಅಭಿವೃದ್ಧಿಗಾಗಿ ತಮ್ಮ ಅಧೀನದ ಸಚಿವಾಲಯದಲ್ಲಿ ಹತ್ತಾರು ಯೋಜನೆಗಳಿದ್ದು ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತನ್ನಿ ಸಿದ್ದು' ಎಂದಿದ್ದಾರೆ ಜೈರಾಮಣ್ಣ.
'ದಕ್ಷ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಿದರೆ ಸಾಕು. ಹಿಂದಿನ ಸರಕಾರದ ದುರಾಡಳಿತದ ಹಿನ್ನೆಲೆಯಲ್ಲಿ ಉಳಿದಿದ್ದೆಲ್ಲ ತಂತಾನೇ ನಿಮಗೆ ಸಿದ್ಧಿಸುತ್ತದೆ ಸಿದ್ದು' ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸಿದ್ದುಗೆ ಕೇಳಿಸುವಷ್ಟು ತುಸು ಜೋರಾಗಿಯೇ ಹೇಳಿದೆ.












Click it and Unblock the Notifications