ಮೈಸೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮದ ಅನಿಲ್ ಕುಮಾರ್ ಕಳೆದ ಐದು ವರ್ಷಗಳ ಹಿಂದೆ ಹಾಸನ ಜಿಲ್ಲೆ ಹೊಳೆನರಸೀಪುರದ ಬಿದಿರಕ್ಕ ಗ್ರಾಮದ ರಮ್ಯಾಳನ್ನು ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದರು. ಸಂಸಾರ ಚೆನ್ನಾಗಿ ನಡೆದಿತ್ತು.
ಎರಡು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಕುಮಾರ್ ಬಂಧಿತನಾಗಿದ್ದ. ಜಾಮೀನಿನ ಮೇಲೆ ಹೊರ ಬಂದ ಮೇಲೆ ತನ್ನದೇನು ತಪ್ಪಿಲ್ಲ ಎಂದು ಪತ್ನಿ ಹತ್ತಿರ ಹೇಳಿಕೊಂಡಿದ್ದ ಆದರೆ, ನೊಂದ ಪತ್ನಿ ರಮ್ಯಾ ತವರಿಗೆ ತೆರಳಿದ್ದಳು.
ಕಡೆಗೆ ಪೋಷಕರ ಮಧ್ಯಸ್ಥಿಕೆಯಿಂದ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿ ಅನಿಲ್ ಕುಮಾರ್ ಮತ್ತು ರಮ್ಯಾ ಜೊತೆಗಿದ್ದರು. ಆದರೆ, ಹುಟ್ಟು ಗುಣ ಸುಟ್ಟರೂ ಹೋಗದು ಎನ್ನುವಂತೆ ಅನಿಲ್ ಕುಮಾರ್ ಪರ ಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದರಿಂದ ಗಂಡ ಹೆಂಡತಿಗೆ ದಿನ ನಿತ್ಯ ಜಗಳವಾಗುತ್ತಿತ್ತು.
ಅನಿಲ್ ಕುಮಾರ್ ರಮ್ಯಾಳಿಗೆ ಹಲ್ಲೆ ನಡೆಸಿ ರಾತ್ರಿ ಪಾಳಯದ ಕೆಲಸಕ್ಕೆ ತೆರಳಿದ್ದ. ಬೆಳಗ್ಗೆ ವಾಪಸ್ ಬಂದು ನೋಡಿದಾಗ, ಪತ್ನಿ ರಮ್ಯಾ ಮತ್ತು ಇಬ್ಬರು ಮಕ್ಕಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದರಿಂದ ಮನನೊಂದ ಅನಿಲ್ ಕುಮಾರ್ ವಿಜಯನಗರ 4ನೇ ಹಂತದ ಬಳಿಯ ಹೈಟೆಕ್ ಸ್ಮಶಾನದ ಬಳಿ ಕುಳಿತು ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸುದ್ದಿ ತಿಳಿದ ವಿಜಯನಗರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ದೇಹಗಳನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದರು. ಆತ್ಮಹತ್ಯೆಗೂ ಮುನ್ನ ರಮ್ಯಾ ಪತ್ರವೊಂದನ್ನು ಬರೆದಿಟ್ಟಿದ್ದು, 'ತನ್ನ ಪತಿ ಕಾಮುಕನಾಗಿದ್ದು, ಎದುರು ಮನೆಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ರಮ್ಯಾ ಪೋಷಕರೂ ಕೂಡಾ ಅನಿಲ್ ಕುಮಾರ್ ಗೆ ಅನೈತಿಕ ಸಂಬಂಧ ಇತ್ತು ಎಂದು ಆರೋಪಿಸಿದ್ದಾರೆ. ವಿಜಯನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications