ಸಿದ್ದು ವಿರುದ್ಧ ಕುಮಾರಸ್ವಾಮಿಯೇ ವಿಪಕ್ಷ ನಾಯಕ

ಸಿದ್ದರಾಮಯ್ಯ ಅವರ ಬಹುಕಾಲದ ಕನಸು ನನಸಾಗಿದೆ. ಈಗೇನಿದ್ದರೂ ಕೆಲಸ್ ಮಾಡುವ ಕಾಲ. ಒಳ್ಳೆಯ ಜನಪರ ಕೆಲಸ ಮಾಡಿ, ಎಲ್ಲರೂ ಮೆಚ್ಚುವ ಆಡಳಿತ ನೀಡುತ್ತಾರೆ ಎಂದು ಆಶಿಸುತ್ತೇನೆ ಎಂದು ರೇವಣ್ಣ ಶುಭ ಹಾರೈಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಕಾಣಲು ಜನ ಬಯಸಿದ್ದರು. ಆದರೆ, ಹಲವು ಕ್ಷೇತ್ರಗಳಲ್ಲಿ ಮತ ವಿಭಜನೆಯಾಗಿ ನಮಗೆ ಹಿನ್ನಡೆ ಉಂಟಾಯಿತು. ಕುಮಾರಸ್ವಾಮಿ ನಮ್ಮ ನಾಯಕ. ಪಕ್ಷ ಅಧಿಕಾರಕ್ಕೆ ಬಂದಿದ್ದರೆ ಅವರೇ ಸಿಎಂ ಆಗುತ್ತಿದ್ದರು. ಆದರೆ, ನಮ್ಮ ದುರಾದೃಷ್ಟ ಈಗ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದರು.
ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ನನ್ನ ಕುಟುಂಬದ ಇತರೆ ಸದಸ್ಯರನ್ನು ರಾಜಕೀಯಕ್ಕೆ ತರಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ರೇವಣ್ಣ ಸ್ಪಷ್ಟಪಡಿಸಿದರು.
ಜಿಲ್ಲೆಯ ಬೇಡಿಕೆಗಳು: ಬಾಳ್ಳುಪೇಟೆಯಲ್ಲಿ ಕೆಲವು ಜನರನ್ನು ಮೆಚ್ಚಿಸಲು ನೂರಾರು ರೈತರ ಮನೆಗಳನ್ನು ವಶಪಡಿಸಿಕೊಳ್ಳಲಾಗಿದೆ. ರಸ್ತೆ ವಿಸ್ತರಣೆ ಪ್ರಸ್ತಾಪಣೆಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಐಐಟಿಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಯಿತು. ಆದರೆ, ಕಾಲೇಜು ಕಟ್ಟಡ ನಿರ್ಮಾಣ ಹಾಗಿರಲಿ, ಶಂಕುಸ್ಥಾಪನೆ ಹಂತಕ್ಕೂ ಯಾವ ಸರ್ಕಾರ ಬರಲಿಲ್ಲ. ಕಾಲೇಜು ಆರಂಭಿಸಿದ್ದರೆ ಅಲ್ಲೇನು ನನ್ನ ಮಕ್ಕಳು ಮಾತ್ರ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದರೆ? ಎಂದು ಖಾರವಾಗಿ ಈ ಹಿಂದಿನ ಸರ್ಕಾರಗಳ ನೀತಿಯನ್ನು ರೇವಣ್ಣ ಪ್ರಶ್ನಿಸಿದರು.
ಒಳ್ಳೆ ಉದ್ದೇಶಕ್ಕೆ ಭೂಮಿ ಬೇಕಾಗಿತ್ತು. ಈಗ ಕಾಲೇಜು ಬೇಡ ಎಂದರೆ ರೈತರೇ ಭೂಮಿಯನ್ನು ಮರಳಿ ಪಡೆಯಲಿ ಎಂದರು. ಹಾಸನದಿಂದ ಮೈಸೂರು ಮಾರ್ಗವಾಗಿ 7 ಫ್ಲೇ ಓವರ್ ಗಳ ಅಗತ್ಯವಿದೆ. ಇದಕ್ಕೆ ಮಂಜೂರಾತಿ ನೀಡಬೇಕು ಎಂದು ಕೇಂದ್ರ ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ವರ್ಷಗಳು ಕಳೆದಿದೆ.
ಆದರೆ, ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಪಿಪಿಪಿ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿ ಯೋಜನೆ ಕಾರ್ಯಗತಗೊಳಿಸುವ ಭರವಸೆ ಹಾಗೆ ಉಳಿದಿದೆ ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದರು.
ಹಾಸನ -ಬೆಂಗಳೂರು ರೈಲು ಮಾರ್ಗ ಕಾಮಗಾರಿ ಆರಂಭವಾಗಿ 14 ವರ್ಷ ಕಳೆದರೂ ಇದುವರೆವಿಗೂ ಯೋಜನೆ ಪೂರ್ಣಗೊಂಡಿಲ್ಲ. ಈ ಮಾರ್ಗದಲ್ಲಿ ಹಾದುಹೋಗುವ ಭಾಗದಿಂದ ಎಚ್ ಡಿ ದೇವೇಗೌಡ, ಕುಮಾರಸ್ವಾಮಿ, ಚೆಲುವರಾಯ ಸ್ವಾಮಿ ಅವರು ಜೆಡಿಎಸ್ ಸಂಸದರು ಎಂಬ ಕಾರಣಕ್ಕೆ ಕಡೆಗಣಿಸಲಾಗಿದೆ ಎಂದು ರೇವಣ್ಣ ಆರೋಪಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ಹೇಮಾವತಿ ನದಿ ನೀರು ಬರಿದು ಮಾಡಲು ಎಲ್ಲರೂ ವ್ಯವಸ್ಥಿತ ಯೋಜನೆ ಹಾಕಿರುವ ಹಾಗೆ ಕಾಣುತ್ತದೆ ಎಂದು ರೇವಣ್ಣ ಹೇಳಿದರು.












Click it and Unblock the Notifications