ಇನ್ನೆಂದಿಗೂ ಚುನಾವಣೆಗೆ ನಿಲ್ಲೋಲ್ಲ; ಶೀಘ್ರ ಹೊಸ ಬಜೆಟ್

'ಚುನಾವಣೆ ವ್ಯವಸ್ಥೆ ಕೆಟ್ಟುಹೋಗಿದೆ. ಹಣದ ಪ್ರಭಾವ, ಜಾತಿ ಪ್ರಭಾವ ಹೆಚ್ಚಾಗಿ ಹೋಗಿದೆ. ನಾನೂ ಪ್ರಮಾಣಿಕನಲ್ಲ, ಈಗಿನ ಚುನಾವಣೆಗಾಗಿ ಹಣ ಖರ್ಚು ಮಾಡಲೇಬೇಕಾಗುತ್ತದೆ.ಇವತ್ತು ಮಹಾತ್ಮ ಗಾಂಧಿ ಚುನಾವಣೆಗೆ ನಿಂತರೆ ಅವರಿಗೂ 5-6 ಕೋಟಿ ರೂ. ಬೇಕಾಗುತ್ತದೆ. ಚುನಾವಣೆ ಎಂದರೆ ಕೋಟ್ಯಂತರ ರೂ. ಲೆಕ್ಕಾಚಾರವಾಗಿದೆ'
ಎಂದು ಇಂದಿನ ಚುನಾವಣೆ ವ್ಯವಸ್ಥೆಯ ಬಗ್ಗೆ ಈ ಹಿಂದೆ ತಮ್ಮ ಪ್ರಾಮಾಣಿಕ ಅನಿಸಿಕೆಯನ್ನು ಹಂಚಿಕೊಂಡಿದ್ದ ಸೋಷಿಯಲಿಸ್ಟ್ ಸಿದ್ದರಾಮಯ್ಯ, ನಿನ್ನೆಯೂ 'ಕನ್ನಡಪ್ರಭ' ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅದನ್ನು ಪುನರುಚ್ಚರಿಸಿದ್ದಾರೆ.
'ಯಾರು ಹೇಳಿದರು ಇನ್ನು ನಾನು ಚುನಾವಣೆಗೆ ನಿಲ್ಲೊಲ್ಲ. ಇದೇ ನನ್ನ ಕೊನೆಯ ಚುನಾವಣೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಚುನಾವಣೆ ವ್ಯವಸ್ಥೆ ಕೆಟ್ಟುಹೋಗಿದೆ. ಅದನ್ನು ನಿಭಾಯಿಸೋದು ಬಹಳ ಕಷ್ಟ. ನಾನು ಮಾನಸಿಕವಾಗಿ ಈಗಾಗಲೇ ಸಿದ್ಧವಾಗಿದ್ದೇನೆ.
ಯಾರು ಏನೇ ಹೇಳಿದರು, ಎಷ್ಟೇ ಒತ್ತಡ ಹಾಕಿದರೂ ಚುನಾವಣೆಗೆ ನಿಲ್ಲೊಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ' ಎಂದು ಸಿದ್ದು ನಿನ್ನೆ ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ. (ಕಪ್ಪು ಹಣ, ಚುನಾವಣೆ ಬಗ್ಗೆ ಅಂದು ಸಿದ್ದು ಏನು ಹೇಳಿದ್ದರು -ಇಲ್ಲಿ ಕ್ಲಿಕ್ಕಿಸಿ)
ಸದ್ಯದಲ್ಲೇ ಸಿದ್ದು ಬಜೆಟ್: ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ಬದಲಾಗಿ ಹೊಸದಾಗಿ ಬಜೆಟ್ ಮಂಡಿಸಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮಾಜಿ ಹಣಕಾಸು ಮಂತ್ರಿಯೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಹೊಸ ಸರ್ಕಾರ ಬಂದಿರುವುದರಿಂದ ಮತ್ತೊಮ್ಮೆ ಜಂಟಿ ಅಧಿವೇಶನ ನಡೆಸಬೇಕಾಗುತ್ತದೆ. ಜತೆಗೆ ಹೊಸದಾಗಿ ಬಜೆಟ್ ಮಂಡಿಸಿ ಅದನ್ನು ಜಾರಿಗೊಳಿಸಬೇಕು ಎಂಬುದು ತಮ್ಮ ಉದ್ದೇಶ. ಆದ್ದರಿಂದ ಸಂಪುಟ ವಿಸ್ತರಣೆಯಾದ ಕೂಡಲೇ ಈ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.












Click it and Unblock the Notifications