ಕಪ್ಪುಹಣ: ತಪ್ಪೊಪ್ಪಿಕೊಂಡ ಏಕೈಕ ರಾಜಕಾರಣಿ

ಹೌದು, 'ಮುಂದಿನ ವಿಧಾನಸಭೆ ಚುನಾವಣೆಯೇ ಕಟ್ಟಕಡೆಯ ಆಟ. ಮತ್ತೆಂದೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ' ಎಂದು ಹೇಳಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿನ್ನೆ ಮೈಸೂರಿನಲ್ಲಿ ಕಹಿ ಸತ್ಯವೊಂದನ್ನು ಬಯಲಿಗೆ ಹಾಕಿದ್ದಾರೆ. ತಾನು ಚುನಾವಣೆ ವೇಳೆ ಕಪ್ಪುಕಪ್ಪ ಸ್ವೀಕರಿಸಿದ್ದು ನಿಜ. ಅದನ್ನು ಚುನಾವಣೆಗಾಗಿ ಬಳಸಿದ್ದೇನೆ. ನಾನೇನೂ ಸತ್ಯಹರಿಶ್ಚಂದ್ರನಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಮ ಸಮಾಜ ವೇದಿಕೆ, ಕನ್ನಡ ಜನಜಾಗೃತಿ ಸಂಘವು ಇಲ್ಲಿನ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ 'ಸಿದ್ದರಾಮಯ್ಯ ಸಾರ್ವಜನಿಕ ಬದುಕು-40 ವರ್ಷ' ಎಂಬ ವಿಚಾರ ಸಂಕಿರಣವನ್ನು ನಿನ್ನೆ ಮಂಗಳವಾರ ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲಿ ಮಾತನಾಡಿದ ನೇರನಡೆಯ ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದಲ್ಲಿ 40 ವರ್ಷ ಪೂರೈಸಿದ ಸಂದರ್ಭದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತಾ ಹೀಗೆ ಹೇಳಿದ್ದಾರೆ.
'ಲೋಕದಳದಿಂದ ಮೊದಲ ಬಾರಿಗೆ 1982ರಲ್ಲಿ ಜನರೇ ನೀಡಿದ್ದ 63 ಸಾವಿರ ರೂ. ಗಳನ್ನು ಖರ್ಚು ಮಾಡಿ ಗೆದ್ದಿದ್ದೆ. ಆದರೆ ಇತ್ತೀಚೆಗೆ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ 257 ಮತಗಳ ಅಂತರದಿಂದ ಗೆಲವು ಸಾಧಿಸುವುದಕ್ಕೆ ಸಾಕು ಬೇಕಾಯಿತು. ಇವತ್ತು ಮಹಾತ್ಮ ಗಾಂಧಿ ಚುನಾವಣೆಗೆ ನಿಂತರೆ ಅವರಿಗೂ 5-6 ಕೋಟಿ ರೂ. ಬೇಕಾಗುತ್ತದೆ. ಚುನಾವಣೆ ಎಂದರೆ ಕೋಟ್ಯಂತರ ರೂ. ಲೆಕ್ಕಾಚಾರವಾಗಿದೆ' ಎಂದು ಅವರು ತರ್ಕಿಸಿದರು
ಜಾತಿ, ಭ್ರಷ್ಟಾಚಾರದಿಂದ ತುಂಬಿರುವ ರಾಜಕಾರಣವನ್ನು ಶುದ್ಧೀಕರಿಸುವುದು ಹೇಗೆ? ಬಸವಣ್ಣ ಸಹಿತ ಎಲ್ಲ ದಾರ್ಶನಿಕರ ತತ್ತ್ವಾದರ್ಶಗಳು ಉಪಯೋಗಕ್ಕೆ ಬಾರದಂತಾಗಿವೆ. ತಾವು ಇವರೆಗೂ ಪ್ರಾಮಾಣಿಕವಾಗಿರಲು ಪ್ರಯತ್ನಿಸಿಕೊಂಡು ಬಂದಿದ್ದು, ಮುಂದೆ ಕೂಡ ಅದೇ ರೀತಿ ಇರಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.
ಸಾಮಾಜಿಕ ನ್ಯಾಯದ ಪರ ಹಿಂದುಳಿದ, ಶೋಷಿತ ವರ್ಗಗಳ ಹೆಸರು ಹೇಳಿದರೆ ಸಿದ್ದರಾಮಯ್ಯ ಮೇಲ್ವರ್ಗದವರ ವಿರೋಧಿ, ದುರಹಂಕಾರಿ ಎಂದು ಹಣೆ ಪಟ್ಟಿಕಟ್ಟುತ್ತಾರೆ. ಜಾತಿ ಕ್ಯಾನ್ಸರ್ ಇದ್ದಂತೆ. ವಿದ್ಯಾವಂತರೂ ಕೂಡ ಜಾತಿ ಮೋಹದಲ್ಲಿ ಸಿಲುಕಿದ್ದಾರೆ ಎಂದು ಸಿದ್ದು, ತಮ್ಮ 40 ವರ್ಷದ ರಾಜಕೀಯ ಜೀವನ ಕುರಿತು ಸುದೀರ್ಘವಾಗಿ ಮಾತನಾಡಿದರು.
ಮೈಸೂರು ಶಾರದಾ ವಿಲಾಸ ಕಾಲೇಜಿನಲ್ಲಿ ಕಾನೂನು ವಿದ್ಯಾಭ್ಯಾಸ ಮಾಡಿದ್ದೆ. ತಮ್ಮದು ರಾಜಕಾರಣ ಹಿನ್ನೆಲೆಯ ಕುಟುಂಬವಲ್ಲ, ಅಪ್ಪ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. 1970ರ ದಶಕದಲ್ಲಿ ರೈತ ಮುಖಂಡ ಪ್ರೊ. ನಂಜುಂಡಸ್ವಾಮಿ ಪರಿಚಯವಾಗದಿದ್ದರೆ ರಾಜಕಾರಣಕ್ಕೆ ಬರುವುದು ಅನುಮಾನವಿತ್ತು ಎಂದು ಅವರು ಹೇಳಿದರು.












Click it and Unblock the Notifications