ಪ್ರತಿಪಕ್ಷ ನಾಯಕ ಸ್ಥಾನ: ಎಚ್ಡಿಕೆಗೆ ಅಲ್ಲ; ಸುರೇಶ್ ಗೆ

ಈ ಮಧ್ಯೆ, ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ನಿರಾಶೆ ತರುವ ಸುದ್ದಿಯೊಂದು ಕೇಳಿಬಂದಿದೆ. 14ನೆಯ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸಬೇಕೆಂಬ ಕುಮಾರಸ್ವಾಮಿ ಅವರ ಅಭಿಲಾಷೆಗೆ ಪೆಟ್ಟುಬಿದ್ದಿದೆ. ಬ್ರಿಟನ್ ಸಂಸತ್ತಿನಿಂದ ಪ್ರೇರಿತಗೊಂಡು ತಮ್ಮ ಜೆಡಿಎಸ್ ಪಕ್ಷದಿಂದ ಆಯ್ಕೆಗೊಂಡಿರುವ 40 ಮಂದಿ ಶಾಸಕರನ್ನೂಳಗೊಂಡ shadow cabinet ರಚಿಸಿ 40 ಇಲಾಖೆಗಳ ಕಾವಲು ಕಾಯಲು ಬಿಡುವುದಾಗಿ ಕಳೆದ ವಾರ ಕುಮಾರಸ್ವಾಮಿ ಹೇಳಿದ್ದರು.
ಸುರೇಶ್ ಕುಮಾರ್ ಆಯ್ಕೆ?: ಆದರೆ ಕುಮಾರಸ್ವಾಮಿಗೆ ಅಂತಹ ಭಾಗ್ಯ ಒದಗಿಬರುವ ಸಾಧ್ಯತೆಯಿಲ್ಲ. ಏಕೆಂದರೆ ಬಿಜೆಪಿ ಪಕ್ಷವು ಪ್ರತಿಪಕ್ಷ ನಾಯಕನನ್ನಾಗಿ ಎಸ್ ಸುರೇಶ್ ಕುಮಾರ್ ಆಯ್ಕೆ ಬಗ್ಗೆ ಬಿಜೆಪಿ ಚಿಂತನೆ ನಡೆಸುತ್ತಿದೆ. ಈ ಸಂಬಂಧ, ನಾಳೆ (ಮೇ 14ರಂದು) ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ವಾಸ್ತವದ ನೆಲೆಗಟ್ಟಿನಲ್ಲಿ ಸದ್ಯಕ್ಕೆ ಅಧಿಕೃತ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುವ ಅವಕಾಶ ಬಿಜೆಪಿಗೆ ಇಲ್ಲವಾಗಿದೆ. ಆದರೆ ಪಿರಿಯಾಪಟ್ಟಣ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದ್ದು, ಅದರಲ್ಲಿ ಪಕ್ಷವು ಶತಾಯಗತಾಯ ಗೆಲುವು ಸಾಧಿಸಲಿದೆ. ಇದರಿಂದ ಬಿಜೆಪಿ 41 ಸ್ಥಾನಗಳನ್ನು ಗೆಲ್ಲುವ ಮೂಲಕ ಈ ಬಾರಿ ವಿಧಾನಸಭೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ ಎರಡನೆಯ ಪಕ್ಷವಾಗಿ ಹೊರಹೊಮ್ಮಲಿದೆ. ಅದರೊಂದಿಗೆ ಪ್ರತಿಪಕ್ಷ ನಾಯಕ ಸ್ಥಾನ ತನ್ನಷ್ಟಕ್ಕೆ ತಾನೇ ಬಿಜೆಪಿಗೆ ಒಲಿಯಲಿದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.
ಆದರೆ ಹಾಗಾಗುತ್ತದಾ? ಪಿರಿಯಾಪಟಣ್ಣದ ಮತದಾರ ಅನುಕಂಪದ ಅಲೆಯಲ್ಲಿ ಬಿಜೆಪಿಗೇ ಮತ ಹಾಕುತ್ತಾರಾ ಅಥವಾ ಈಗಾಗಲೇ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಒಂದು ಸ್ಥಾನ ಹೆಚ್ಚು ದಕ್ಕಿಸಿಕೊಡುತ್ತಾನಾ? ಎಂಬುದು ಸದ್ಯದ ಕುತೂಹಲ.
ಅದೇನೇ ಆಗಲಿ. ಈ ಮಧ್ಯೆ, 'ಸುರೇಶ್ ಕುಮಾರ್ ಒಬ್ಬ ಉತ್ತಮ ರಾಜಕಾರಣಿ. ಪ್ರಾಮಾಣಿಕ ಹಾಗೂ ಜನಸ್ನೇಹಿ ನಾಯಕ. ಅಲ್ಲದೆ ಶೋಭಾರಂಥಹ ಅತ್ಯಂತ ಬಲಿಷ್ಠ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ ಗೆದ್ದುಬಂದವರು. ಶೋಭಾ ಹಂಚಿದ ನೋಟಿಗೆ ಸೊಪ್ಪು ಹಾಕದೆ ಸುರೇಶ್ ಅವರ ಪ್ರಾಮಾಣಿಕತೆಗೆ ಜನ ಮರುಳಾಗಿದ್ದಾರೆ. ಅಲ್ಲದೆ ಬಾಯಿಗೆ ಬಂದಂತೆ ಮಾತನಾಡುವ ವ್ಯಕ್ತಿಯೂ ಅಲ್ಲ. ಸರಳ ಸಜ್ಜನ ರಾಜಕಾರಣಿ ನಾಯಕತ್ವ ವಹಿಸಿದರೆ ಶಾಸನಸಭೆಗೂ ಒಂದು ಘನತೆ ಬರುತ್ತದೆ' ಎಂಬ ಆಶಾಭಾವ ಬಿಜೆಪಿಯಲ್ಲಿ ಮನೆ ಮಾಡಿದೆ.












Click it and Unblock the Notifications