ಜಗನ್ ಅಂದರ್ -ಬಾಹರ್ ಭವಿಷ್ಯಕ್ಕೆ ಡೆಡ್ ಲೈನ್

ಸಾವಿರಾರು ಕೋಟಿ ರು ಅಕ್ರಮ ಆಸ್ತಿ ಪ್ರಕರಣವನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮೊದಲಿಗೆ ವೈಎಸ್ ಜಗನ್, ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಜೊತೆಗೆ ಜಗನ್ ಕಂಪನಿ ಆಡಿಟರ್ ವಿಜಯ್ ಸಾಯಿ ರೆಡ್ಡಿ ಜಾಮೀನು ರದ್ದುಗೊಳಿಸಲಾಗಿದೆ. ಮುಂದಿನ ನಾಲ್ಲು ತಿಂಗಳಿನೊಳಗೆ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿ, ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.
ಸಿಬಿಐ ಪರ ವಕೀಲ ಆಶೋಕ್ ಬಾನ್ ಅವರು, ಈ ಪ್ರಕರಣದ ತನಿಖೆ ಮುಕ್ತಾಯಗೊಳಿಸಲು ನಾಲ್ಕರಿಂದ ಆರು ತಿಂಗಳಾದರೂ ಬೇಕಾಗುತ್ತದೆ. ಜಗನ್ ಅವರ ಅಕ್ರಮಗಳ ಬಗ್ಗೆ ಸಾಬೀತುಪಡಿಸಲು ಇರುವ ದಾಖಲೆಗಳ ಪರಿಶೀಲನೆಗೆ ಹೆಚ್ಚಿನ ಕಾಲಾವಕಾಶ ನೀಡಿ ಎಂದು ಕೋರ್ಟನ್ನು ಕೇಳಿಕೊಂಡಿದ್ದಾರೆ.
ಜಗನ್ ಗೆ ಸೇರಿದ 143 ಕೋಟಿ ರು ಮೊತ್ತದ ಆಸ್ತಿಯನ್ನು ಇಡಿ (ಜಾರಿ ನಿರ್ದೇಶನಾಲಯ) ಇತ್ತೀಚೆಗೆ ತನ್ನದಾಗಿಸಿಕೊಂಡಿತ್ತು. ನಂತರ 122 ಕೋಟಿ ರು ಜಾರಿ ನಿರ್ದೇಶನಾಲಯ ಪಾಲಾಯಿತು. ಹಣ ಹೋದರೆ ಹೋಗಲಿ ಎಂದು ನಿಶ್ಚಿಂತರಾಗಿದ್ದ ಜಗನ್ ಅವರಿಗೆ ಸಿಬಿಐ ಚುರುಕು ಮುಟ್ಟಿಸಿದೆ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡ ಮಂಗಳವಾರ(ಏ.2) ಹೊಸದಾಗಿ ಹೆಚ್ಚುವರಿ ಚಾರ್ಚ್ ಶೀಟ್ ಸಲ್ಲಿಸುವ ಮೂಲಕ ಭರ್ಜರಿ ಹೊಡೆತ ನೀಡಿತ್ತು.
ಜಗನ್ ಒಡೆತನದ ಫಾರ್ಮಾ ಕಂಪನಿಗಳ ಕುರಿತಾದ ಮಹತ್ವದ ದಾಖಲೆಗಳನ್ನು ಸಿಬಿಐ ಒಟ್ಟುಗೂಡಿಸಿದ್ದು, ಪೂರಕ ದೋಷಾರೋಪಣ ಪಟ್ಟಿ ಸಲ್ಲಿಸಲು ಮುಂದಾಗಿದೆ. ಈವರೆಗೂ ಒಟ್ಟು ನಾಲ್ಕು ಚಾರ್ಚ್ ಶೀಟ್ ಸಲ್ಲಿಸಲಾಗಿದೆ. ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಮೇ27, 2012ರಂದು ಜಗನ್ ಅವರನ್ನು ಬಂಧಿಸಲಾಗಿತ್ತು.
ಕಳೆದ ಮಾರ್ಚ್ ತಿಂಗಳಿನಲ್ಲಿ ಜಗನ್ ವಿರುದ್ಧ ಸಿಬಿಐ ತಂಡ ಚಾರ್ಚ್ ಶೀಟ್ ಸಲ್ಲಿಸಿತ್ತು. ಜಗನ್ ಜೊತೆಗೆ ಸಹ ಆರೋಪಿಗಳಾದ ಉದ್ಯಮಿ ನಿಮ್ಮಗಡ್ಡ ಪ್ರಸಾದ್, ಐಆರ್ ಎಎಸ್ ಅಧಿಕಾರಿ ಕೆವಿ ಬ್ರಹ್ಮಾನಂದ ರೆಡ್ಡಿ, ಆಂಧ್ರ ಪ್ರದೇಶ ಮಾಜಿ ಅಬಕಾರಿ ಸಚಿವ ಮೋಪಿದೇವಿ ವೆಂಕಟ ರಮಣ ರಾವ್ ಕೂಡಾ ಚಂಚಲಗುಡ ಜೈಲಿನಲ್ಲಿದ್ದಾರೆ.
ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ರೆಡ್ಡಿ ಪರ ಸಮರ್ಥವಾಗಿ ವಾದ ಮಂಡಿಸಿದರೂ ಜಾಮೀನು ಕೊಡಿಸುವಲ್ಲಿ ವಿಫಲರಾಗಿದ್ದರು. ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ಕೂಡಾ ಜಗನ್ ಹಿಂಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್ ಹಾಗೂ ಸಿಬಿಐ ಕೋರ್ಟಿನ ತೀರ್ಪು ಜಗನ್ ಅವರ ವಿರುದ್ಧವಾಗಿ ಬಂದಿದೆ.
ಬಾಕಿ ಉಳಿದಿರುವ 7 ಪ್ರಕರಣಗಳ ಮೊತ್ತ ಸುಮಾರು 3000 ಕೋಟಿ ರು ದಾಟುತ್ತದೆ ಎಂದು ಸಿಬಿಐ ಹೇಳಿದೆ. ಹಾಗಾದರೆ ಸಮಸ್ತ ಆಸ್ತಿ ಲೆಕ್ಕಾಚಾರ ಇನ್ನೂ ಬಹಿರಂಗಗೊಂಡಿಲ್ಲ. ಹೀಗಾಗಿ ತನಿಖೆ ಬಾಕಿ ಇರುವುದರಿಂದ ಜಗನ್ ಗೆ ಬೇಲ್ ಸಿಗುವುದು ಕಷ್ಟಕರವಾಗಿದೆ. ಸುಮಾರು 7 ಪ್ರಕರಣಗಳಲ್ಲಿ ಸೇರಿಸಿ ಚಾರ್ಚ್ ಶೀಟ್ ಹಾಕಬೇಕಾಗುತ್ತದೆ. ಸಂಡೂರು ಪವರ್ ಕಂಪನಿ, ಭಾರತಿ ರಘುರಾಮ್ ಸಿಮೆಂಟ್ಸ್, ಇಂಡಿಯಾ ಸಿಮೆಂಟ್ಸ್, ಪೆನ್ನಾ ಸಿಮೆಂಟ್ಸ್, ದಾಲ್ಮಿಯಾ ಸಿಮೆಂಟ್ಸ್, ಇಂಡಿಯಾ ಸಿಮೆಂಟ್ಸ್ ಹಾಗು ಕೋಲ್ಕತ್ತಾ ಭ್ರೀಫ್ ಕೇಸ್ ಕಂಪನಿ ಅಕ್ರಮ ಗಳಿಕೆ ಬಗ್ಗೆ ಚಾರ್ಚ್ ಶೀಟ್ ಹಾಕಿಲ್ಲ. ಲೇಪಾಕ್ಷಿ ನಾಲೆಡ್ಜ್ ಪಾರ್ಕ್ ಮುಂತಾದ ಕಂಪನಿಗಳ ಮೂಲಕ ಗಳಿಸಿದ ಅಕ್ರಮ ಆಸ್ತಿಗಳ ವಿವರ ಸಂಗ್ರಹಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.












Click it and Unblock the Notifications