ರಮ್ಯಾ ತಮಿಳು ಪ್ರೇಮಕ್ಕೆ ಮುಖ್ಯಮಂತ್ರಿ ಗರಂ
ಗೋಲ್ಡನ್ ಗರ್ಲ್ ರಮ್ಯಾ ಅವರು ತಮಿಳು ಭಾಷೆಯಲ್ಲಿ ಚುನಾವಣಾ ಪ್ರಚಾರ ಮಾಡಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿತ್ತು. ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹ್ಯಾರಿಸ್ ಪರವಾಗಿ ಪ್ರಚಾರ ಸಂದರ್ಭದಲ್ಲಿ ರಮ್ಯಾ ತಮಿಳಿನಲ್ಲಿ ಭಾಷಣ ಮಾಡಿ, ಮತ ಯಾಚಿಸಿದ್ದರು.
ಈ ಬಗ್ಗೆ ಎಲ್ಲೆಡೆಯಿಂದ ಅಸಮಾಧಾನ ವ್ಯಕ್ತವಾಗಿತ್ತು. ರಮ್ಯಾ ಅವರು ತಮ್ಮ ತಮಿಳು ಭಾಷಣವನ್ನು ಸಮರ್ಥಿಸಿಕೊಂಡಿರುವುದು ಇನ್ನಷ್ಟು ಗೊಂದಲಕ್ಕೆ ಕಾರಣ ಮಾಡಿಕೊಟ್ಟಿದೆ. ರಮ್ಯಾ ಅವರು ಕನ್ನಡಿಗರ ಕ್ಷಮೆಯಾಚಿಸಬೇಕೆಂದು ಕರವೇ ಒತ್ತಾಯಿಸಿತ್ತು.
ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆ. ಅಂತಹದರಲ್ಲಿ ನಟಿ ರಮ್ಯಾ ಕನ್ನಡ ಭಾಷೆಯಲ್ಲಿ ಮಾತ ಪ್ರಚಾರ ಮಾಡದೆ ತಮಿಳಿನಲ್ಲಿ ಪ್ರಚಾರ ಮಾಡಿರುವುದು ವಿಷಾದನೀಯ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಕನ್ನಡ ನಾಡಿನವರು ಬೆಳೆಸಿದ್ದರಿಂದಲೇ ನಟಿ ರಮ್ಯಾ ಈ ಮಟ್ಟಕ್ಕೆ ಬರಲು ಕಾರಣ. ಆದರೆ, ಕನ್ನಡ ಭಾಷೆಯಲ್ಲಿ ಮಾತನಾಡಿ ಕನ್ನಡತನವನ್ನು ಹೆಚ್ಚಿಸುವುದು ಬಿಟ್ಟು ತಮಿಳಿನಲ್ಲಿ ಮಾತನಾಡಿರುವುದರಿಂದ ಕನ್ನಡಿಗರ ಮನಸ್ಸಿಗೆ ನೋವುಂಟಾಗಿದೆ. ಆದ್ದರಿಂದ ನಟಿ ರಮ್ಯಾ ಅವರು ಈ ಕೂಡಲೇ ಕ್ಷಮೆಯಾಚಿಸಬೇಕೆಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.
ಕನ್ನಡಾಭಿಮಾನಿಗಳು ರಮ್ಯಾ ಅವರ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಪ್ರಶ್ನಿಸಿದ್ದರು. ಆದರೆ, ಮತದಾರರ ಓಲೈಕೆಗಾಗಿ ಮಾತ್ರ ಈ ತಂತ್ರ ಅನುಸರಿಸಬೇಕಾಯಿತು ಎಂದು ತಪ್ಪೊಪ್ಪಿಕೊಳ್ಳದ ರಮ್ಯಾ ಅವರು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದವರಿಗೆ ತಕ್ಕ ಉತ್ತರ ನೀಡಿದ್ದರು. [ರಮ್ಯಾ ಉತ್ತರ ಇಲ್ಲಿದೆ ಓದಿ]