ಬೆಂಗಳೂರು: ಹೈ ವೋಲ್ಟೇಜಿನ ಹತ್ತು ಕ್ಷೇತ್ರಗಳು
ಬೆಂಗಳೂರು, ಮೇ 2: ಚುನಾವಣೆ ದಿನಾಂಕ ಎದುರಿಗೇ ಇದೆ. ಚುನಾವಣೆ ಕಣ ಆಖೈರಾಗಿದೆ. ರಾಜಧಾನಿಯಲ್ಲಿ ಕಳೆದ ಬಾರಿ 28 ಸ್ಥಾನಗಳ ಪೈಕಿ 17 ಕ್ಷೇತ್ರಗಳನ್ನು ದಕ್ಕಿಸಿಕೊಂಡಿದ್ದ ಆಡಳಿತಾರೂಢ ಪಕ್ಷಕ್ಕೆ ಈ ಬಾರಿ ಮತದಾರ ಕೃಪೆ ತೋರುತ್ತಾನಾ? ಅಥವಾ ಆಡಳಿತ-ವಿರೋಧಿ ಸುನಾಮಿ ಏಳುವುದೇ?
ಅಥವಾ ಕಾಂಗ್ರೆಸ್ ಕೈಚಳಕ ಕಂಡುಬರುವುದೇ? ಅಥವಾ ಇವೆರಡೂ ಬೇಡವೆಂದು ಮತದಾರ ಮತ್ತೆರಡು ಪಕ್ಷಗಳಾದ ಕೆಜೆಪಿ/ಜೆಡಿಎಸ್ಸಿಗೆ ಮಣೆ ಹಾಕುತ್ತಾನಾ? ಕೊನೆಗೆ ಲೋಕಸತ್ತಾ ಅದೃಷ್ಟ ಹೇಗಿದೆ? ಇಂತಹುದೇ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನೋಡಿದಾಗ ರಾಜಧಾನಿಯಲ್ಲಿ ಹೈ ವೋಲ್ಟೇಜಿನ 10 ಕ್ಷೇತ್ರಗಳನ್ನು ಗುರುತಿಸಬಹುದಾಗಿದೆ.
ಏನೇ ಆಗಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇಲ್ಲಿನ ರಿಯಲ್ ಸ್ಟೋರಿ. ದುಡ್ಡು ಚೆಲ್ಲಿ ಚುನಾವಣೆ ಗೆಲ್ಲುವುದು ರಿಯಲ್ ಎಸ್ಟೇಟ್ ಕುಳಗಳಿಗೆ ಕರಗತವಾಗಿದೆ.

ಆದಿಶಕ್ತಿ ವರ್ಸಸ್ ಶಿಸ್ತಿನ ಸಿಪಾಯಿ
ಇಡೀ ರಾಜ್ಯದ ಜನರ ಗಮನಸೆಳೆದಿರುವ ಕ್ಷೇತ್ರ. ಮೇ8 ರಂದು ಫಲಿತಾಂಶ ಪ್ರಕಟವಾಗುವಾಗ ರಾಜಾಜಿನಗರದಲ್ಲಿ ಶೋಭಾ ಕರಂದ್ಲಾಜೆ ಗೆದ್ದರಾ/ಸೋತರಾ ಎಂದು ಜನ ಕುತೂಹಲದಿಂದ ಕೇಳುವುದು ಖಚಿತ. ಆರೆಸ್ಸೆಸ್ ಮೂಲದ ಸುರೇಶ್ ಕುಮಾರ್ ಮತ್ತು ಶೋಭಾ ಕರಂದ್ಲಾಜೆ ನಡುವಣ ಸಮರ ತೀವ್ರ ಕದನ ಕುತೂಹಲ ಕೆರಳಿಸಿದೆ.
ಸುರೇಶ್ ಕುಮಾರ್ ಬಿಜೆಪಿಯ ಶಿಸ್ತುಬದ್ಧ ಸೇನಾನಿಯಾಗಿದ್ದರೆ ಶೋಭಾ ಅವರು ಕೆಜೆಪಿಯ ಆದಿಶಕ್ತಿ. ಮಧ್ಯಮ ವರ್ಗದ ಮತದಾರರು ಮತ್ತು ಸಾಕಷ್ಟು ಸ್ಲಂ ಓಟುಗಳು ಇಲ್ಲಿ ನಿರ್ಣಾಯಕ. ಜಾತಿ ಪ್ರಾಧಾನ್ಯತೆಯ ರಾಜಾಜಿನಗರದಲ್ಲಿ ಸುರೇಶ್ ಬ್ರಾಹ್ಮಣರು, ಉತ್ತರ ಕರ್ನಾಟಕದವರ ಬೆಂಬಲವನ್ನು ನೆಚ್ಚಿಕೊಂಡಿದ್ದರೆ ಶೋಭಾ ಒಕ್ಕಲಿಗರು, ಲಿಂಗಾಯತರು ಮತ್ತು ತಮಿಳರ ಓಟುಗಳನ್ನು ಆಧರಿಸಿದ್ದಾರೆ.

ಕಾಣದ 'ಕೈ' ಚಿತಾವಣೆ: 'ತೇಜಸ್ವೀ' ಅಭ್ಯರ್ಥಿ ಯಾರು?
ಕಾಂಗ್ರೆಸ್ಸಿನ ತೇಜಸ್ವಿನಿ ಈ ಕ್ಷೇತ್ರದಲ್ಲಿ ಮತ್ತೊಮ್ಮೆ ಶಾಸಕಿಯಾಗಲು ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಟಿಕೆಟ್ ಪಡೆಯುವುದರಲ್ಲೇ ತಮ್ಮ ಶ್ರಮವೆಲ್ಲ ವ್ಯಯಿಸಿರುವ ತೇಜಸ್ವಿನಿ, ಆದಾಗ್ಯೂ ಒಂದಷ್ಟು ಉತ್ಸಾಹ ಉಳಿಸಿಕೊಂಡು ಮನೆಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ. ಆದರೆ ಕಾಣದ 'ಕೈ' ಚಿತಾವಣೆ ಮೇರೆಗೆ ಸ್ಥಳೀಯ ಮುಖಂಡರು ಪ್ರಚಾರದಿಂದ ವಿಮುಖರಾಗಿದ್ದಾರೆ.
ತೇಜಸ್ವಿನಿ ಅವರದು ಈ ಕಥೆಯಾದರೆ ಬಿಜೆಪಿಯ ಎಂ ಕೃಷ್ಣಪ್ಪ ಅವರದು ಇದಕ್ಕೆ ತದ್ವಿರುದ್ಧ. ಅವರು ಎಲ್ಲೆಡೆಯಿಂದಲೂ ಅಂದರೆ ಸುತ್ತಮುತ್ತಲ ಕ್ಷೇತ್ರದ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಗೆಲುವಿಗೆ ಪಣತೊಟ್ಟಿದ್ದಾರೆ.

ಮಲ್ಲೇಶ್ವರ: ಬಿಜೆಪಿ ಅಂಗಳದಲ್ಲೇ ಬಾಂಬು!
ಪ್ರಶಾಂತ ಮಲ್ಲೇಶ್ವರದಲ್ಲಿ ಬಾಂಬ್ ಸ್ಫೋಟವಾಗಿರುವುದು ಬಿಜೆಪಿಗೆ ವರವಾಗುವುದೇ ಆದರೆ ಹಾಲಿ ಶಾಸಕ ಡಾ. ಸಿಎನ್ ಅಶ್ವತ್ಥನಾರಾಯಣ ಅವರ ಗೆಲುವು ನಿರಾಯಾಸ. ಆದರೆ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯ ಎದುರೇ ಬಾಂಬು ಸ್ಫೋಟಗೊಂಡಿದ್ದಕ್ಕೆ ತಣ್ಣೀರೆರಚಲು ನಿವೃತ್ತ ಖಡಕ್ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ಸರ್ವಸಜ್ಜಾಗಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷದವರೇ ಆದ, ಈ ಹಿಂದೆ ಕ್ಷೇತ್ರದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದ ಎಂಆರ್ ಸೀತಾರಾಂ ಅವರ ಒಲವು ಸಂಪಾದಿಸುವಲ್ಲಿ ಶಿವರಾಂ ವಿಫಲರಾಗಿದ್ದಾರೆ ಎನ್ನಲಾಗಿದೆ. 2008ರ ಚುನಾವಣೆಯಲ್ಲಿ ತಮ್ಮ ಸೋಲಿಗೆ ಶಿವರಾಂ ಕಾರಣ ಎನ್ನುವ ಅಸಮಾಧಾನ ಸೀತಾರಾಂ ಅವರಲ್ಲಿದೆ ಎಂದು ಕಾರ್ಯಕರ್ತರು ಇಂದಿಗೂ ದೂರುತ್ತಾರೆ. ಈ ತೊಡಕುಗಳ ನಡುವೆಯೂ ಪೊಲೀಸ್ ಅಧಿಕಾರಿಯಾಗಿ ಗಳಿಸಿದ್ದ ಹೆಸರನ್ನು ಶಿವರಾಂ ಅವರು ಪಣಕ್ಕೆ ಇಟ್ಟಿದ್ದಾರೆ.
ಒಟ್ಟಿನಲ್ಲಿ, 16 ಮಂದಿ ಅಭ್ಯರ್ಥಿಗಳಿರುವ ಅಖಾಡದಲ್ಲಿ ಡಾಕ್ಟರ್ ವರ್ಸಸ್ ಪೊಲೀಸ್ ಫೈಟ್ ನಡೆದಿದೆ. ಉತ್ತರಕ್ಕಾಗಿ ಉಸಿರುಬಿಗಿ ಹಿಡಿದು ಮೇ 8ರವರೆಗೂ ಕಾಯಬೇಕಿದೆ.

ವಿಚಿತ್ರ ಸ್ಪರ್ಧಾಕಣ ಹೆಬ್ಬಾಳ
ಗೆರಿಲ್ಲಾ ವಾರ್: ಕಟ್ಟಾ ಸುಬ್ರಮಣ್ಯ ಬಂಡಾಯ, ಎಚ್ಎಂ ರೇವಣ್ಣ ಬಂಡಾಯ, ಖುದ್ದು ಜಾಫರ್ ಷರೀಪ್ ಸವಾಲ್ ಇದರ ಜತೆಗೆ ಹೋರಾಟ ನಡೆಸಿ ಟಿಕೆಟ್ ಪಡೆದ ಅಬ್ದುಲ್ ಅಜೀಂ ಅವರು ಸಮರವನ್ನು ತಾರಕಕ್ಕೆ ಕೊಂಡೊಯ್ದಿದ್ದಾರೆ.
ತತ್ಫಲವಾಗಿ ಅಂತಿಮವಾಗಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ನಿಕಟವರ್ತಿ ಜಗದೀಶ ಕುಮಾರ್ ಬಿಜೆಪಿ ಹುರಿಯಾಳು. ಸಿಕೆ ಜಾಫರ್ ಷರೀಫ್ ಅವರ ಮೊಮ್ಮಗ ಅಬ್ದುಲ್ ರೆಹಮಾನ್ ಷರೀಫ್ ಕಾಂಗ್ರೆಸ್ ಅಭ್ಯರ್ಥಿ. ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ ಜೆಡಿಎಸ್ ಅಭ್ಯರ್ಥಿ.
ಹಾಲಿ ಶಾಸಕರ ವಿರುದ್ಧ ಆರೋಪಗಳ ಹೊರತಾಗಿಯೂ ಇಲ್ಲಿ ಸಾಕಷ್ಟು ಜನಪ್ರಿಯ ಕೆಲಸಗಳನ್ನು ಮಾಡಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಇನ್ನು, ರೇವಣ್ಣ ಬೆಂಬಲಿಗರು ಕಾಂಗ್ರೆಸ್ ಪರ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ಅಜೀಂ ಕಣದಲ್ಲಿ ಇರುವುದರಿಂದ ಮುಸ್ಲಿಂ ಸಮುದಾಯದ ಮತಗಳು ವಿಭಜನೆಯಾದರೆ ಬಿಜೆಪಿ ಅಭ್ಯರ್ಥಿಗೆ ಅನುಕೂಲ ಆಗಬಹುದು.

ಕೆಆರ್ ಪುರ: ರಿಯಲ್ ಫೈಟ್
ಬಿಜೆಪಿಯ ನಂದೀಶ್ ರೆಡ್ಡಿಯೋ/ ಕಾಂಗ್ರೆಸ್ಸಿನ ಬೈರತಿ ಬಸವರಾಜು ಅವರೋ? ಎಂಬುದನ್ನು ನಿರ್ಧರಿಸಲು ಬಲ ಪ್ರದರ್ಶನ ಜೋರಾಗಿಯೇ ನಡೆದಿದೆ. ಇಬ್ಬರೂ ಭಾರಿ ರಿಯಲ್ ಎಸ್ಟೇಟ್ ಕುಳಗಳೇ. ಮಹದೇವಪುರ ನಿವಾಸಿಗಳಾದ ಇಬ್ಬರೂ ಕೆಆರ್ ಪುರಕ್ಕೆ ಹೊರಗಿನವರೇ. ರೆಡ್ಡಿ ಆಸ್ತಿ 119 ಕೋಟಿ ರೂ. ಇದ್ದರೆ ಬಸವರಾಜು ಬಳಿ 58 ಕೋಟಿ ಇದೆ. ದುಡ್ಡು ದುಡ್ಡು ದುಡ್ಡು ಕೊನೆಗೆ ಇದೇ ನಿರ್ಣಾಯಕ ಅಂಶವಾಗಲಿದೆ. ಜತೆಗೆ, ಇಬ್ಬರೂ ತೆಲುಗು ಭಾಷಿಕರಾಗಿದ್ದು, ಕ್ಷೇತ್ರದಲ್ಲೂ 50 ಸಾವಿರ ತೆಲುಗು ಮತದಾರರಿದ್ದಾರೆ.
ಟಿಕೆಟ್ ಕೈತಪ್ಪಿದ ಬೇಸರಕ್ಕೆ ಕಾಂಗ್ರೆಸ್ಸಿನ ಎ ಕೃಷ್ಣಪ್ಪ ಹಿರಿಯೂರಿನಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಕೆಆರ್ ಪುರದಲ್ಲಿನ ಅವರ ಬೆಂಬಲಿಗರು ಈಗ ಬಿಜೆಪಿ ಪರವಾಗಿದ್ದಾರೆ. ಇದು ಬಸವರಾಜು ಅವರಿಗೆ ನುಂಗಲಾರದ ತುತ್ತು. ಆದರೆ, ಕೃಷ್ಣಪ್ಪ ಅವರ ಸಹೋದರ ಗೋಪಾಲ ಅವರು ಬೈರತಿ ಪರ ಕೆಲಸ ಮಾಡುತ್ತಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.
ಒಟ್ಟು 26 ಮಂದಿ ಕಣದಲ್ಲಿದ್ದಾರೆ. ನಂದೀಶ ರೆಡ್ಡಿ ಐದು ವರ್ಷಗಳಲ್ಲಿ ಕೆಆರ್ ಪುರದ ಚಿತ್ರಣ ಬದಲಿಸಿದ್ದಾರೆ. ಒಳ್ಳೆಯ ರಸ್ತೆಗಳ ಜತೆಗೆ ಈ ಭಾಗದ ಜನರಿಗೆ ಕಾವೇರಿ ನೀರು ಸಿಗುವಂತೆ ಮಾಡಿದ್ದಾರೆ ಎಂದು ಜನರು ನೆನೆಯುತ್ತಾರೆ.

ಜಾತಿ ಪ್ರಭಾವದ ರಾರಾ ನಗರ ಯಾರಿಗೆ?
ನಿಜಕ್ಕೂ ಇದು ಪ್ರತಿಷ್ಠೆಯ ಕಣವೇ. ಬಿಜೆಪಿ ಭದ್ರಕೋಟೆಯನ್ನು ಕೆಡವಲು ಕಾಂಗ್ರೆಸ್ಸಿನಿಂದ ಚಿತ್ರ ನಿರ್ಮಾಪಕ ಮುನಿರತ್ನ ನಾಯ್ಡು ಕಸರತ್ತು ನಡೆಸಿದ್ದಾರೆ. ಕ್ಷೇತ್ರದ ಇತ್ತೀಚೆಗೆ ನಿರ್ಮಾಣಗೊಂಡಿರುವ ಹೊಸ ಬಡಾವಣೆಗಳಲ್ಲಿ ಶ್ರೀಮಂತರು ಮತ್ತು ಮಧ್ಯಮ ವರ್ಗದ ಜನ ವಾಸಿಸುತ್ತಿದ್ದರೆ ಹಳೆಯ ಬಡಾವಣೆಗಳಲ್ಲಿ ಬಡವರು ಹೆಚ್ಚಾಗಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಮುನಿರತ್ನ ಅವರು 'ಮಂಡ್ಯದ ಗಂಡು' ಅಂಬರೀಷ್ ಅವರಂತೆ ಚಿತ್ರರಂಗದ 'ಬಿಗ್ ಬ್ರದರ್' ಆಗಬಹುದು.
ಜಾತಿ ಪ್ರಭಾವದ ರಾರಾ ನಗರದಲ್ಲಿ ಜಾತಿಯ ಜತೆಗೆ ದುಡ್ಡೂ ಸೇರಿದ್ದು ತೀವ್ರ ಹಣಹಣಿ ನಿರೀಕ್ಷಿಸಲಾಗಿದೆ. ಕ್ಷೇತ್ರದ ಜಾಲಹಳ್ಳಿ 4 ಕೊಳೆಗೇರಿಗಳಲ್ಲಿ ವಾಸವಿರುವ ತಮಿಳು ಮತ್ತು ತೆಲುಗು ಭಾಷಿಕರ ಮತ ಗೆದ್ದೋನೆ ಇಲ್ಲಿ ಬಾಸು. ಜತೆಗೆ ಲಿಂಗಾಯತ ಮತಗಳೂ ನಿರ್ಣಾಯಕವಾಗುತ್ತವೆ.

'ಅನಂತ' ಪದ್ಮನಾಭನಿಗೆ ಸುಲಭ ಗೆಲುವು
ಹೇಳಿಕೇಳಿ ಗೌಡರ ಪ್ರಾಬಲ್ಯದ ಕ್ಷೇತ್ರವಿದು. ಜತೆಗೆ, ಗೃಹ ಸಚಿವ ಅಶೋಕ್ ಅವರ ಕ್ಷೇತ್ರವೂ ಆಗಿದೆ. ಕಾಂಗ್ರೆಸ್ಸಿನ ಚೇತನ್ ಗೌಡ ಸಹ ಪ್ರಭಾವಶಾಲಿಯಾಗಿದ್ದಾರೆ. ಹಾಗಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
5ನೇ ಬಾರಿ ಶಾಸಕರಾಗಲು ಸಜ್ಜಾಗಿರುವ ಅಶೋಕ್ ಮೇಲೆ 'ಅನಂತ' ಪ್ರಭಾವವಿದೆ. ಸದ್ಯಕ್ಕೆ ಬಿಜೆಪಿಯಲ್ಲಿ ಒಕ್ಕಲಿಗರ ಸಾಮ್ರಾಟ್ ಅಂದರೆ ಅದು ಅಶೋಕ್ ಒಬ್ಬರೇ. ಮುಂದೆಯೂ ಬಿಜೆಪಿಯೇ ಅಧಿಕಾರಕ್ಕೆ ಬಂದರೆ ಸರಕಾರದಲ್ಲಿ ಪ್ರಭಾವಿ ಸಚಿವರಾಗುವ ಲಕ್ಷಣಗಳು ಸ್ಪಷ್ಟವಾಗಿವೆ. ಇನ್ನು ದೀಪದಡಿ ಕತ್ತಲು ಎಂಬಂತೆ ದೇವೇಗೌಡರು ಇಲ್ಲೇ ವಾಸವಾಗಿದ್ದರೂ ಅಶೋಕರ ಮೇಲಿನ ಪ್ರೀತಿಯಿಂದಾಗಿ ತಮ್ಮ ಪಕ್ಷದ ವತಿಯಿಂದ ಗೆಲ್ಲುವಂತಹ ಅಭ್ಯರ್ಥಿಯನ್ನೇನೂ ಅವರು ಕಣಕ್ಕಿಳಿಸಿಲ್ಲ. ಹಾಗೆಯೇ, ಕಾಂಗ್ರೆಸ್ಸಿನ ಚೇತನ್ ಗೌಡರಿಗೆ ಮಂಡ್ಯದ ಸ್ಥಳೀಯ ಜನ ಮತ್ತು ಅಪಾರ ದುಡ್ಡು ಶ್ರೀರಕ್ಷೆಯಾಗಬೇಕಿದೆ.

ಬಸವನಗುಡಿ 'ಕ್ಲಿಕ್' ಆಗುವವರು ಯಾರು?
ರಾಜಧಾನಿಯ ಹಳೆಯ ಬಡಾವಣೆಯಾದ ಬಸವನಗುಡಿಯಲ್ಲಿ 'ಕ್ಲಿಕ್' ಆಗುವವರು ಯಾರು? ಕಾಂಗ್ರೆಸ್ಸಿನ ಪ್ರೊಫೆಸರ್ ಬಿಕೆ ಚಂದ್ರಶೇಖರ್ ಅಥವಾ ಬಿಜೆಪಿಯ ರವಿ ಸುಬ್ರಮಣ್ಯ ಅವರೋ ಎಂಬುದು ಪ್ರಶ್ನೆ. ಜತೆಗೆ, ಜೆಡಿಎಸ್ ನಿಂದ ಬಾಗೇಗೌಡರು ಶಕ್ತಿಮೀರಿ ಯತ್ನಿಸುತ್ತಿದ್ದಾರೆ. ಜೆಡಿಎಸ್ ಹಣ ಬಲದೆದುರು ಕಾಂಗ್ರೆಸ್/ಜೆಡಿಎಸ್ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ. ಮತದಾರನೂ ಯಾರು ಹಿತವರು ತನಗೆ ಈ ಮೂವರಲ್ಲಿ ಎಂದು ಕೇಳುತ್ತಿದ್ದಾನೆ. ಅಷ್ಟೆ ಅಲ್ಲ. ಲೋಕಸತ್ತಾದ ಶಾಂತಲಾ ದಾಮ್ಲೆ ಏನು ಮಾಡುತ್ತಾರೆ ಎಂಬ ಕುತೂಹಲವಿದೆ.
ಇದರ ಹೊರತಾಗಿ ಇಲ್ಲಿರುವ ಬಹುಸಂಖ್ಯಾತ ಟೆಕ್ಕಿಗಳು ಏನು ಮಾಡುತ್ತಾರೆ? ರಾಜಕೀಯವನ್ನು ಪಕ್ಕಕ್ಕಿಟ್ಟು ಅಭಿವೃದ್ಧಿ/ಪ್ರಗತಿಗೆ ಮಣೆ ಹಾಕುವುದಾದರೆ ಟೆಕ್ಕಿಗಳೂ ಮತ ಹಾಕಲು ಮುಂದೆ ಬಂದರೆ ಫಲಿತಾಂಶ ನಿಜಕ್ಕೂ ಭಿನ್ನವಾಗಿರುತ್ತದೆ.

ಲೇ ಔಟ್ ಕೃಷ್ಣಪ್ಪಗೆ ಜೈ ಅಂದ್ರೆ ಸೋಮಣ್ಣ ಔಟ್
ಲೇ ಔಟ್ ಡೆವಲಪರ್ ಎಂ ಕೃಷ್ಣಪ್ಪ ವರ್ಸಸ್ ವಸತಿವೀರ ವಿ ಸೋಮಣ್ಣ ನಡುವಣ ನೇರ ಕದನ ಇದಾಗಿದೆ. ಒಕ್ಕಲಿಗರು ಒಕ್ಕೊರಲಿನಿಂದ ಲೇ ಔಟ್ ಕೃಷ್ಣಪ್ಪಗೆ ಜೈ ಅಂದರೆ ಸೋಮಣ್ಣ ಔಟ್ ಆಗುವುದು ಖಚಿತ. ಆದರೆ ಸೋಮಣ್ಣ ಅಷ್ಟು ಸುಲಭವಾಗಿ ಸೋಲಣ್ಣ ಆಗುವುದಿಲ್ಲ.
ಪಕ್ಷ ಯಾವುದಾದರೇನು ಸೋಮಣ್ಣಗೆ ಜೈ ಅಂದುಬಿಡಿ ಅನ್ನುತ್ತಾರೆ ಇಲ್ಲಿನ ಮತದಾರ. ಏಕೆಂದರೆ ಜನರ ಕೈಗೆ ಸಲೀಸಾಗಿ ಸಿಗುವುದು ಸೋಮಣ್ಣ ಮಾತ್ರ ಎಂಬುದು ಜನಜನಿತವಾಗಿದೆ. ಏನೇ ಆದರೂ ಒಕ್ಕಲಿಗರು ಮತ್ತು ಲಿಂಗಾಯತರು ಯಾರಿಗೆ ಮಣೆ ಹಾಕುತ್ತಾರೋ ಕಾದುನೋಡಬೇಕು.

ಗಾಂಧಿನಗರದಲ್ಲಿ ಎಂಪಿಗೆ ಮಣೆ?
ಇದು ಶ್ರೀಗಂಧದ ನಾಡು. ಅಂದರೆ ಸ್ಯಾಂಡಲ್ ವುಡ್ ನೆಲೆಯೂರಿರುವುದು ಇಲ್ಲೇ. ಅಂದರೆ ಕನ್ನಡ ಚಿತ್ರರಂಗದ ಕಾಶಿ ಕ್ಷೇತ್ರವಿದು. ಆದರೆ ಇಲ್ಲಿನ ರಿಯಲ್ ಸ್ಟೋರಿಯೇ ಬೇರೆ. ತಮಿಳರು ಇಲ್ಲಿ ರಾಜಾಜಿಸುತ್ತಿದ್ದಾರೆ. ಸ್ಥಳೀಯ ಪ್ರಜ್ಞಾಂತರಗಿಂತ, ಮತ ಗಳಿಕೆಯಲ್ಲಿ ಅವರೇ ನಿರ್ಣಾಯಕವೂ ಆಗುತ್ತಾರೆ.
ಹಾಲಿ ಶಾಸಕ (ಕಾಂಗೈನ ದಿನೇಶ್ ಗುಂಡೂರಾವ್) ಮತ್ತು ಹಾಲಿ ಸಂಸದ (ಬಿಜೆಪಿಯ ಪಿಸಿ ಮೋಹನ್) ನಡುವೆ ನೇರ ಸಮರ ನಡೆದಿದೆ. ಮೆಜೆಸ್ಟಿಕ್ ಸುತ್ತಮುತ್ತ ನಾಳೆ/ ನಾಳಿದ್ದು ಯಾರು, ಎಷ್ಟು ದುಡ್ಡು ಮತ್ತು ಹೆಂಡ ಹರಿಸುತ್ತಾರೆ ಎಂಬುದನ್ನು ಅವಲಂಬಿಸಿ ಜಯ ಯಾರಿಗೆ ಎಂಬುದನ್ನು ನಿರ್ಧರಿಸಬಹುದು.












Click it and Unblock the Notifications