ಕಾವೇರಿ ವಿವಾದ ರಾಹುಲ್ ಮೌನವೇಕ : ಎಚ್ಡಿಕೆ

ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಗುರುವಾರ ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ಜನರು ರಾಷ್ಟ್ರೀಯ ಪಕ್ಷಗಳಿಗೆ ಮತ ನೀಡಿದೆ, ಜೆಡಿಎಸ್ ಪಕ್ಷ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಕೇಂದ್ರ ಸರ್ಕಾರ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ರಾಹುಲ್ ಗಾಂಧಿ ಮಂಡ್ಯದಲ್ಲಿ ಹೋಗಿ ಜನರಿಗೆ ಮತ ನೀಡುವಂತೆ ಕೇಳಿದ್ದಾರೆ. ಆದರೆ, ಕಾವೇರಿ ವಿವಾದದ ಕುರಿತು ಮೌನ ವಹಿಸಿದ್ದಾರೆ. ಮೈಸೂರಿಗೆ ಪ್ರಚಾರಕ್ಕೆ ಆಗಮಿಸುವ ಸೋನಿಯಾ ಗಾಂಧಿ ಕಾವೇರಿ ವಿವಾದದ ಬಗ್ಗೆ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಆಡಳಿತಕ್ಕೆ : ಮಂಗಳೂರು ಮತ್ತು ಉಡುಪಿ ಜಿಲ್ಲೆಗಳನ್ನು ಹೊರತು ಪಡಿಸಿ ರಾಜ್ಯದ ಉಳಿದ ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ. ಜೆಡಿಎಸ್ ಪರವಾದ ಅಲೆ ರಾಜ್ಯದಲ್ಲಿ ಕಾಣಿಸುತ್ತಿದೆ. ಜನರು ಪಕ್ಷಕ್ಕೆ ಅಧಿಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಮೀಕ್ಷೆಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ಈ ಬಾರಿ ಸಮೀಕ್ಷೆಗಳು ಸುಳ್ಳಾಗಿವೆ ಎಂದು ಹೇಳಿದರು.
ಬಹುಮತ ಖಚಿತ : ಸರ್ಕಾರ ರಚಿಸಲು ಬೇಕಾದ 113 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಬೆಂಗಳೂರಿನಲ್ಲಿ 13 ಸ್ಥಾನಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ. ಉತ್ತರ ಕರ್ನಾಟಕದಲ್ಲಿ 35 ಸ್ಥಾನಗಳನ್ನು ಗಳಿಸಲಿದ್ದೇವೆ. ಹಾಸನ ಜಿಲ್ಲೆಯ ಏಳು ಸ್ಥಾನಗಳು ಜೆಡಿಎಸ್ ಪಾಲಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೈಕೆಟ್ ಪ್ರಚಾರ : ಪ್ರಚಾರದಲ್ಲಿ ಜೆಡಿಎಸ್ ಹಿಂದುಳಿದಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲ. ಸಾಮಾಜಿಕ ತಾಣಗಳನ್ನು ಉಪಯೋಗಿಸಿಕೊಂಡು ನಾವು ಪ್ರಚಾರ ನಡೆಸುತ್ತಿದ್ದೇವೆ. ವಾಯ್ಸ್ ಮೇಲ್ ಮೂಲಕ ಒಂದೂವರೆ ಕೋಟಿ ಮತದಾರರನ್ನು ನಾವು ತಲುಪಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.
ಯಡಿಯೂರಪ್ಪ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ನನಗೆ ವೈಯಕ್ತಿಕ ದ್ವೇಷವಿಲ್ಲ. ಅವರು ಮಾಡಿರುವ ಭ್ರಷ್ಟಾಚಾರದ ವಿರುದ್ದ ಮಾತ್ರ ನಾನು ಹೋರಾಟ ಮಾಡುತ್ತಿದ್ದೇನೆ ಎನ್ನುವ ಮೂಲಕ ಕೆಜೆಪಿ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಪರೋಕ್ಷ ಸೂಚನೆ ನೀಡಿದರು.
ವಿಚಲಿತನಾಗಿಲ್ಲ : ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಕರೆಸಿ ಪ್ರಚಾರ ಮಾಡುತ್ತಿರುವುದರಿಂದ ನಾನು ವಿಚಲಿತನಾಗಿಲ್ಲ. ಆಗುವುದೂ ಇಲ್ಲ. ನನಗೆ ಶಕ್ತಿ ಇದೆ. ರಾಜ್ಯಾದ್ಯಂತ ಏಕಾಂಗಿಯಾಗಿ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇನೆ. ರಾಷ್ಟ್ರೀಯ ನಾಯಕರು ಬಂದು ಮತ ಕೇಳಿದರೆ ಜನರು ಮತ ಹಾಕುತ್ತಾರೆ ಎಂದು ನಾನು ನಂಬುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications