ಸ್ಫೋಟಕ ಸುದ್ದಿ: 21 PFI ಉಗ್ರರ ಅರೆಸ್ಟ್
ಕಾಸರಗೋಡು, ಎ.25: ಇತ್ತ ರಾಜಧಾನಿ ಬೆಂಗಳೂರು ಬಾಂಬ್ ಸ್ಫೋಟದ ಆಘಾತದಲ್ಲಿರುವಾಗಲೇ ಅತ್ತ ದೂರದ ಕಾಸರಗೋಡಿನ ಕಣ್ಣೂರಿನಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಕಣ್ಣೂರು ಸಮೀಪದ ಮೈಯಿಲ್ ನಾರಾತ್ ಎಂಬ ಪ್ರದೇಶದಲ್ಲಿ ಮಾರಕ ಆಯುಧ ತರಬೇತಿ ಕೇಂದ್ರವೊಂದನ್ನು ಪತ್ತೆ ಮಾಡಿರುವ ಪೊಲೀಸರು ಉಗ್ರರೊಂದಿಗೆ ನಂಟು ಹೊಂದಿರುವ ಶಂಕೆಯ ಮೇರೆಗೆ 21 ಮಂದಿಯನ್ನು ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಬಂಧಿತರೆಲ್ಲಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಗೆ ಸೇರಿದವರು.

ಬಂಧಿತರಿಂದ 10 ಮೊಬೈಲ್, ಸಿಮ್, ಎಟಿಎಂ ಕಾರ್ಡ್, ಕೋಮು ವೈಷಮ್ಯ ಸಾಹಿತ್ಯವಿರುವ ಕಿರುಹೊತ್ತಿಗೆ, 8 ಖಡ್ಗ, 2 ನಾಡ ಬಾಂಬ್, ಮತ್ತಿತರ ಬಾಂಬ್ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಗುಪ್ತ ತಾಣದಲ್ಲಿ ಆಯುಧ ತರಬೇತಿ ಕೇಂದ್ರವಿರುವ ಬಗ್ಗೆ ಖಚಿತ ಸುಳಿವು ಸಿಗುತ್ತಿದ್ದಂತೆ ಕಣ್ಣೂರು ಮೈಯಿಲ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುರೇಂದ್ರನ್ ಕಲ್ಯಾಡನ್ ನೇತೃತ್ವದ ತಂಡ ದಾಳಿ ನಡೆಸಿ, ಶಂಕಿತ ಉಗ್ರರನ್ನು ಬಂಧಿಸಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೇರಳ ADGP ಶಂಕರ ರೆಡ್ಡಿ ಅವರೂ ಕಣ್ಣೂರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಆಯುಧ ತರಬೇತಿ ಕೇಂದ್ರದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು, ಸಂಸ್ಥೆಗಳ ಪಟ್ಟಿ ದೊರೆತಿದ್ದು, ಅದು ಉಗ್ರರ ಹಿಟ್ ಲಿಸ್ಟ್ ಇರಬಹುದು. ಬಂಧಿತರು ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇಲ್ಲಿ ಮನುಷ್ಯ ಆಕೃತಿಗಳನ್ನು ನಿಲ್ಲಿಸಿ, ಶಸ್ತ್ರಾಸ್ತ್ರ ಬಳಕೆ ತರಬೇತಿ ನಡೆಸಲಾಗುತ್ತಿತ್ತು ಎಂದು ಡಿವೈ ಎಸ್ಪಿ ಸುಕುಮಾರನ್ ಮಂಗಳವಾರ ತಿಳಿಸಿದ್ದಾರೆ. (PTI)












Click it and Unblock the Notifications