ಭರ್ಜರಿ ಬೇಟೆ: ಬಾಂಬ್ ಸ್ಫೋಟದ ರೂವಾರಿಗಳ ಬಂಧನ
ಚೆನ್ನೈ, ಎ.23: ಇದು ನಿಜಕ್ಕೂ ಸ್ಫೋಟಕ ಸುದ್ದಿಯೇ. ಪ್ರಮುಖ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಕಚೇರಿ ಎದುರು ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಬೆಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡು ಗುಪ್ತಚರ ದಳದ ಸಕಾಲಿಕ ನೆರವಿನೊಂದಿಗೆ ಈ ಬಂಧನ ಸಾಧ್ಯವಾಗಿದೆ. ಮೊಬೈಲ್ ಕರೆಗಳ ಜಾಡು ಹಿಡಿದ ಬೆಂಗಳೂರು ಪೊಲೀಸರು ಈ ಮಹತ್ವದ ಸಾಧನೆ ಮಾಡಿದ್ದಾರೆ.
ಚೆನ್ನೈನ ಹೂವಿನ ಮಾರುಕಟ್ಟೆಯಲ್ಲಿ ಅವಿತುಕೊಂಡಿದ್ದ ತಿರುನೆಲ್ವೇಲಿಯ ಬಶೀರ್ ಮತ್ತು ಬೆಂಗಳೂರಿನ ಪೀರ್ ಮೊಹಿದ್ದೀನ್ ಎಂಬಿಬ್ಬರು ಶಂಕಿತ ಆರೋಪಿಗಳನ್ನು ನಿನ್ನೆ ರಾತ್ರಿ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.

ಈ ಇಬ್ಬರು ಉಗ್ರರ ಬಂಧನದಿಂದ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭ್ಯವಾಗಿದೆ. ಪ್ರಾಥಮಿಕ ವಿಚಾರಣೆಯಿಂದ ಇವರಿಬ್ಬರೂ ನಿಷೇಧಿತ ಉಗ್ರ ಸಂಘಟನೆಗೆ ಸೇರಿದವರು ಎಂಬುದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಗಮನಾರ್ಹವೆಂದರೆ, ಈ ಬಂಧನಗಳಿಗೂ ಮುನ್ನ ಸೋಮವಾರ ಮಧ್ಯಾಹ್ನ ಸ್ಫೋಟ ಕುರಿತು ಲೋಕಸಭೆಯಲ್ಲಿ ಹೇಳಿಕೆಯೊಂದನ್ನು ನೀಡಿದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಎಪ್ರಿಲ್ 17ರ ಈ ಉಗ್ರಗಾಮಿ ದಾಳಿಯಲ್ಲಿ ಇಂಡಿಯನ್ ಮುಜಾಹಿದೀನ್ (ಐಎಂ) ಕೈವಾಡವಿದೆಯೆಂದು ಅಧಿಕಾರಿಗಳು ತಿಳಿಸಿರುವುದಾಗಿ ಹೇಳಿದ್ದರು.
ಉಗ್ರಗಾಮಿ ದಾಳಿಯಲ್ಲಿ ಐಎಂ ಕಾರ್ಯಕರ್ತರು ಭಾಗಿಯಾಗಿರುವ ಶಂಕೆಯಿದೆ ಎಂದು ಕರ್ನಾಟಕ ಪೊಲೀಸರ ಜತೆ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯೂ (ಎನ್‌ಐಎ) ಗೃಹ ಖಾತೆಗೆ ಮಾಹಿತಿ ನೀಡಿತ್ತು. ಸ್ಫೋಟದಲ್ಲಿ 11 ಪೊಲೀಸರ ಸಹಿತ 16 ಮಂದಿ ಗಾಯಗೊಂಡಿದ್ದರು.
ದೇಶದ ವಿವಿಧೆಡೆ ಬಾಂಬ್ ದಾಳಿಗೆ ಕಾರಣವಾಗಿರುವ ನಿಷೇಧಿತ ಉಗ್ರಗಾಮಿ ಗುಂಪು ಬೆಂಗಳೂರು ಸ್ಫೋಟಕ್ಕೂ ಕಾರಣವಾಗಿದೆಯೆಂದು ತೀರ್ಮಾನಕ್ಕೆ ಬರುವುದಕ್ಕೆ ಸ್ಫೋಟಕ್ಕೆ ಅನುಸರಿಸಲಾದ ಕಾರ್ಯವಿಧಾನ ಮತ್ತು ಬಳಸಲಾದ ಸ್ಫೋಟಕಗಳು ಪುರಾವೆ ನೀಡುತ್ತವೆ ಎಂದು ಎನ್‌ಐಎ ಅಂದಾಜಿಸಿತ್ತು.












Click it and Unblock the Notifications