ಜಯನಗರದಲ್ಲಿ ಚಿನ್ನಕ್ಕಾಗಿ ವೃದ್ಧೆ ಭೀಕರ ಕೊಲೆ

ಜಯನಗರದ 7ನೇ ಬ್ಲಾಕಿನ ಅಯ್ಯಪ್ಪ ಸ್ವಾಮಿ ದೇಗುಲದ ಪಕ್ಕದಲ್ಲಿರುವ ಮನೆಯಲ್ಲಿ ಈ ದುರ್ಘಟನೆ ನಡೆದಿದ್ದು, 76 ವರ್ಷದ ಚಂದ್ರಾ ಎಂಬ ವೃದ್ಧೆಯನ್ನು ಕತ್ತು ಹಿಸುಕಿಸಿ ಸಾಯಿಸಲಾಗಿದೆ. ನಂತರ ಆಕೆ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಆರೋಪಿಯನ್ನು ರಾಮು ಅಲಿಯಾಸ್ ರಾಮಚಂದ್ರನ್ ಎಂದು ಗುರುತಿಸಲಾಗಿದೆ.
ಚಂದ್ರಾ ಅವರ ಮನೆಯಲ್ಲಿ ಸುಮಾರು 6 ವರ್ಷಗಳಿಂದ ಪ್ಲಂಬರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರಾಮು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಗೆ ಬಂದಿದ್ದಾನೆ. ಕಳೆದ ನಾಲ್ಕು ದಿನಗಳಿಂದ ಪ್ಲಂಬಿಗ್ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.
ಮನೆಯಲ್ಲಿ 76 ವರ್ಷದ ಚಂದ್ರಾ ಅವರನ್ನು ಕೊಲೆ ಮಾಡುವ ಮೊದಲು ಮನೆಯಲ್ಲಿದ್ದ 90 ವರ್ಷದ ಮಹಿಳೆ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಕೂಡಿಹಾಕಲಾಗಿದೆ. ಮನೆಯಲ್ಲಿರುವ ಆಭರಣ ದುಡ್ಡು ನೀಡುವಂತೆ ಚಂದ್ರಾ ಅವರನ್ನು ರಾಮು ಪೀಡಿಸಿದ್ದಾನೆ. ಹಣ ನೀಡಲು ಒಪ್ಪದಿದ್ದಾಗ ಕತ್ತು ಹಿಸುಕಿದ್ದಾನೆ. ಚಂದ್ರಾ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.
ನಂತರ ಚಂದ್ರಾ ಅವರ ಮಗಳು ಚಿತ್ರಾ ಅವರಿಗೆ ನೆರೆ ಮನೆಯವರು ಕರೆ ಮಾಡಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಚಿತ್ರಾ ಅವರು ಮನೆಗೆ ಬಂದು ನೋಡಿದಾಗ ತಾಯಿ ಚಂದ್ರಾ ಕೊಲೆಯಾಗಿರುವುದು ಕಂಡು ಬಂದಿದೆ. ಈ ಮನೆಯಲ್ಲಿ ಚಂದ್ರಾ ಹಾಗೂ ಚಿತ್ರಾ ಅಲ್ಲದೆ ಇನ್ನಿಬ್ಬರು ವೃದ್ಧೆಯರು ಮಾತ್ರ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಆರೋಪಿಯ ಬಗ್ಗೆ ವಿವರಗಳನ್ನು ಸಂಗ್ರಹಿಸಲಾಗಿದ್ದು ಜಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ದಕ್ಷಿಣ ವಲಯ ಡಿಸಿಪಿ ರೇವಣ್ಣ ಹೇಳಿದರು.












Click it and Unblock the Notifications