ಕಾಂಗ್ರೆಸ್ಸಿನಿಂದ ಬಂಪರ್ ಪ್ರಣಾಳಿಕೆ ನಿರೀಕ್ಷಿಸಿ

ರೈತ ವರ್ಗಕ್ಕೆ ಹೆಚ್ಚಿನ ಒತ್ತು ನೀಡುವ ಭರವಸೆಗಳ ಮಹಾಪೂರ ಹರಿಸುವ ಪ್ರಣಾಳಿಕೆಯನ್ನು ಸಿದ್ದಪಡಿಸಲಾಗಿದ್ದು ಶನಿವಾರ (ಏ.20) ಬಿಡುಗಡೆ ಮಾಡಲಾಗುತ್ತದೆ. ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ನೇತೃತ್ವದ ರಾಜ್ಯ ಪ್ರಣಾಳಿಕೆ ಸಮಿತಿ ಕರಡು ಪ್ರತಿಯನ್ನು ಸಿದ್ಧ ಪಡಿಸಿದ್ದಾರೆ.
ಕೆಪಿಸಿಸಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಧುಸೂದನ್ ಮಿಸ್ತ್ರಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್ ಪರಿಶೀಲನೆ ನಡೆಸಿದ್ದು ಕೇಂದ್ರ ಪ್ರಣಾಳಿಕೆ ಸಮಿತಿಯಿಂದಲೂ ಅನುಮತಿ ಪಡೆಯಲಾಗಿದೆ.
ಪ್ರಣಾಳಿಕೆ ಪ್ರತಿಗಳು ಮುದ್ರಣಗೊಂಡು ಬಿಡುಗಡೆಗೆ ಸಿದ್ಧವಾಗಿವೆ. ಲಭ್ಯ ಮಾಹಿತಿ ಪ್ರಕಾರ ಕುಡಿಯುವ ನೀರು, ಮೂಲ ಸೌಕರ್ಯ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಎಲ್ಲಾ ಜನಾಂಗಕ್ಕೂ ಉದ್ಯೋಗದಲ್ಲಿ ಆದ್ಯತೆ ಇವು ಪ್ರಣಾಳಿಕೆಯಲ್ಲಿ ಪ್ರಮುಖವಾದ ವಿಷಯಗಳಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ಭರವಸೆ ನೀಡಲಾಗಿದೆ. ರೈತರ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿ ಆರ್ಥಿಕ ಸ್ಥಿತಿ ಸುಧಾರಣೆ, ಸಾಲಸೌಲಭ್ಯ ನಿಯಮಗಳ ಸರಳೀಕರಣ, ಭೂ ಅವ್ಯವಹಾರ ತಡೆಗೆ ಕಾಯ್ದೆ ತಿದ್ದುಪಡಿ ಮಾಡುವ ಭರವಸೆ ನೀಡಲಾಗಿದೆ.
ಕೊಳಚೆ ಪ್ರದೇಶಗಳಿಗೆ ಮೂಲ ಸೌಲಭ್ಯ, ಹಕ್ಕುಪತ್ರ ವಿತರಣೆ, ಸಮರ್ಪಕ ಪಡಿತರ ವಿತರಣೆ ಆಶ್ವಾಸನೆ ನೀಡಲಾಗುತ್ತಿದೆ. ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಗಂಭೀರವಾಗಿ ಕಾಡುತ್ತಿರುವ ಘನತಾಜ್ಯ ವಿಲೇವಾರಿಗೆ ವೈಜ್ಞಾನಿಕ ಪದ್ಧತಿ ಅಳವಡಿಕೆ, ನೈಸರ್ಗಿಕ ಸಂಪನ್ಮೂಲಗಳ ಲೂಟಿಗೆ ತಡೆ, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ವಿತರಣೆ. ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಗಳನ್ನು ಕಾಂಗ್ರೆಸ್ ನೀಡಿದೆ.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಯೋಜನೆ, ರಾಜೀವ್ ಗಾಂಧಿ ಅವರ ತಂತ್ರಜ್ಞಾನ ಕನಸು, ಇಂದಿರಾಗಾಂಧಿ ಅವರ ಯೋಜನೆಗಳ ಅಂಶಗಳನ್ನು ಹೆಕ್ಕಿ ರಾಹುಲ್ ಗಾಂಧಿ ಅವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದರ ಪ್ರಕಾರ ಕರ್ನಾಟಕಕ್ಕೆ ಹೊಸ ದಿಕ್ಸೂಚಿ ನೀಡಬಲ್ಲ ಪ್ರಣಾಳಿಕೆ ಇದಾಗಲಿದೆ ಎಂದೇ ನಂಬಲಾಗಿದೆ. ಯಾವುದಕ್ಕೂ ನಾಳೆ ಕಾದು ನೋಡಿ...
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications