ಬೆಂಗಳೂರು ಸ್ಫೋಟಕ್ಕೆ ಬಳಸಿದ್ದ ಬೈಕಿನ ಮಾಲೀಕ ಸಿಕ್ಕಿದ
ಬೆಂಗಳೂರು, ಎ.18: ನಿನ್ನೆ ಮಲ್ಲೇಶ್ವರದಲ್ಲಿ ಬಿಜೆಪಿ ಕಚೇರಿಯ ಎದುರು ಸಂಭವಿಸಿದ ಸ್ಫೋಟದಲ್ಲಿ ಬಳಸಲಾಗಿದ್ದ ಬೈಕಿನ ಮಾಲೀಕನನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಚೆನ್ನೈನ ತಿಲ್ಲೈ ಗಂಗಾನಗರದ ನಿವಾಸಿ ಕೆಎಸ್ ಶಂಕರನಾರಾಯಣ ಎಂಬುವವರು ಸ್ಪೋಟಕ್ಕೆ ಬಳಸಿದ್ದ ಬೈಕಿನ ಮಾಲೀಕರು. ಇವರು ಟೆಲಿಕಾಂ ಇಲಾಖೆಯ ನಿವೃತ್ತ ಉದ್ಯೋಗಿಯಾದ ತಾವು ನಾಲ್ಕು ವರ್ಷಗಳ ಹಿಂದೆಯೇ ಸದರಿ ಬೈಕನ್ನು ಮಾರಾಟ ಮಾಡಿರುವುದಾಗಿ ಬೈಕಿನ ಬೆನ್ನುಹತ್ತಿ ಚೆನ್ನೈಗೆ ಹೋಗಿದ್ದ ಬೆಂಗಳೂರು ಪೊಲೀಸರಿಗೆ ಶಂಕರನಾರಾಯಣ ಮಾಹಿತಿ ನೀಡಿದ್ದಾರೆ.

ವಾಸ್ತವವಾಗಿ ಸದರಿ ಬೈಕ್ ನನ್ನ ಪುತ್ರನ ಹೆಸರಿನಲ್ಲಿತ್ತು. ಆದರೆ ನನ್ನ ಮಗ ಅಮೆರಿಕಕ್ಕೆ ಹೊರಟ ಕಾರಣ, 4 ವರ್ಷಗಳ ಹಿಂದೆಯೇ ಅದನ್ನು ಮಾರಿಬಿಟ್ಟೆವು. ಪೊಲೀಸರು ಬಂದು ನನ್ನ ಮನೆಯ ಬಾಗಿಲು ಬಡಿದಾಗ ನನಗೆ ನಿಜಕ್ಕೂ ಆಘಾತವಾಯಿತು ಎಂದು ಶಂಕರನಾರಾಯಣ ಹೇಳಿದ್ದಾರೆ.
ಬೈಕಿನ ನೋಂದಣೆ ಸಂಖ್ಯೆಯನ್ನು (TN 22 R 3769) ಹಿಡಿದು ಅದರ ಮಾಲೀಕರಿಗಾಗಿ ತಡಕಾಡುತ್ತಿದ್ದಾಗ ಪೊಲೀಸರಿಗೆ ಶಂಕರನಾರಾಯಣ ಅವರ ಮನೆಯ ವಿಳಾಸ ಪತ್ತೆಯಾಗಿದೆ. ಪೊಲೀಸರು ಈಗ ಆ ನೋಂದಣೆ ಸಂಖ್ಯೆಯ ಅಸಲೀಯತ್ತು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದಾರೆ.












Click it and Unblock the Notifications