ಬುಧವಾರದಿಂದ ನೋ ಕೇಬಲ್ ಟಿವಿ?
ಬೆಂಗಳೂರು, ಏ. 16: ಸೆಟ್ ಟಾಪ್ ಬಾಕ್ಸ್ ಅಳವಡಿಕೆ ಸಂಬಂಧ ಕಗ್ಗಂಟು ಇನ್ನೂ ಮುಂದುವರೆದಿದೆ. ಬಾಕ್ಸ್ ಅಳವಡಿಕೆ ವಿಚಾರಣೆ ಪೂರ್ಣಗೊಳಿ ಹೈಕೋರ್ಟ್ ಮಂಗಳವಾರ ಮಹತ್ವದ ತೀರ್ಪನ್ನು ಹೊರಹಾಕಿದೆ. ಸೆಟ್ ಅಪ್ ಬಾಕ್ಸ್ ಅಳವಡಿಕೆ ಕಡ್ಡಾಯಕ್ಕೆ ಹೈಕೋರ್ಟ್ ಅಸ್ತು ಎಂದಿದ್ದು, ಬುಧವಾರದಿಂದ ಕೇಬಲ್ ಪ್ರಸಾರ ಸ್ಥಗಿತಗೊಳ್ಳಲಿದೆ.
ಕೇಬಲ್ ಪ್ರಸಾರ ಸ್ಥಗಿತಗೊಳಿಸಬಾರದು, ಸೆಟ್ ಟಾಪ್ ಬಾಕ್ಸ್ ಅಳವಡಿಕೆ ವಿಸ್ತರಣೆಗೆ ಕಾಲಾವಕಾಶ ನೀಡಬೇಕು ಎಂದು ಕೇಬಲ್ ಆಪರೇಟರ್ ಗಳು ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರ ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿಯನ್ನು ತಳ್ಳಿ ಹಾಕಿದೆ.
ಇದಕ್ಕೂ ಮುನ್ನ ಏ.16ರಂದು ಮಂಗಳವಾರ ಅಂತಿಮ ತೀರ್ಪು ಕಾಯ್ದಿರಿಸಲಾಗಿತ್ತು.. ಅಲ್ಲಿಯವರೆಗೂ ಕೇಬಲ್ ಪ್ರಸಾರ ಸ್ಥಗಿತಗೊಳಿಸದಂತೆ ಮಧ್ಯಂತರ ಆದೇಶ ನೀಡಿತ್ತು.

ಬೆಂಗಳೂರು ಮಹಾನಗರದಲ್ಲಿರುವ ಕೇಬಲ್ ಸಂಪರ್ಕ ಎಷ್ಟು? ಕೇಬಲ್ ಆಪರೇಟರ್ ಗಳ ಪ್ರಕಾರ 15 ಲಕ್ಷ. ಆದರೆ ಮಲ್ಟಿ ಸಿಸ್ಟಂ ಆಪರೇಟರ್ಸ್ ಪ್ರಕಾರ 26 ಲಕ್ಷ. ಹೌದು ಇಂತಹ ಮಾಹಿತಿಯನ್ನು ಸ್ವತಃ ಕೇಬಲ್ ಅಪರೇಟರ್ ಗಳು ಹೈಕೋರ್ಟ್ ಗೆ ನೀಡಿರುವ ಪ್ರಮಾಣ ಪತ್ರದಲ್ಲಿ ಸಲ್ಲಿಸಿದ್ದಾರೆ.
ನಿಖರವಾದ ಕೇಬಲ್ ಸಂಪರ್ಕದ ಸಂಖ್ಯೆಯನ್ನು ಆಪರೇಟರ್ ಗಳು ನೀಡದೆ ಇರುವುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಷ್ಟವಾಗುತ್ತಿದೆ ಎಂದು ಹಿರಿಯ ವಕೀಲ ಕೆ.ಜಿ.ರಾಘವನ್ ನ್ಯಾಯಪೀಠದ ಮುಂದೆ ವಾದ ಮಂಡಿಸಿದ್ದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ನೀಡಿರುವ ಅಂಕಿ-ಅಂಶದಂತೆ ಕೇಬಲ್ ಸಂಪರ್ಕ ಹೊಂದಿರುವ ಶೇ.68ರಷ್ಟು ಮನೆಗಳು ಸೆಟ್ ಟಾಪ್ ಬಾಕ್ಸ್ ಅಳವಡಿಕೆ ಮಾಡಿಕೊಂಡಿವೆ. ತಕ್ಷಣ ಸೆಟ್ ಟಾಪ್ ಬಾಕ್ಸ್ ಆಳವಡಿಕೆ ಸಾಧ್ಯವಿಲ್ಲ, ಕಾಲಾವಕಾಶ ನೀಡುವಂತೆ ಕೋರಿ ಕೇಬಲ್ ಆಪರೇಟರ್ ಗಳು ಹೈಕೋರ್ಟ್ ಮೊರೆ ಹೋಗಿದ್ದರು.
ಬೆಲೆ ಹೆಚ್ಚಳ: ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಬಾಕ್ಸ್‌ಗೆ ಹಣ ಪಡೆಯಲಾಗುತ್ತಿದೆ. ಕೆಲವು ಆಪರೇಟರ್‍ಸ್ 1200 ರೂ. ಎಂದು ಹೇಳಿ 700 ರೂ. ಅಡ್ವಾನ್ಸ್ ಪಡೆಯುತ್ತಿದ್ದಾರೆ. ಆದರೆ ಬಾಕ್ಸ್ ಕೊಡಲು ಇನ್ನು 15-20 ದಿನ ಬೇಕಾಗುತ್ತದೆ ಎಂದು ಹೇಳುತ್ತಾರೆ. ಇನ್ನು ನಾಲ್ಕು ದಿನ ಕಳೆದರೆ ಟಿವಿ ಬರಲ್ಲ. ನಾವೇನು ಮಾಡಬೇಕು ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲವೆಡೆ 1500 ರೂ. ಪಡೆಯಲಾಗುತ್ತಿದ್ದರೆ, ಏಪ್ರಿಲ್‌ನಿಂದ 2,200 ನೀಡಬೇಕಾಗುತ್ತದೆ. ಕೇಂದ್ರ ಬಜೆಟ್ 2013ನಲ್ಲಿ ಘೋಷಿಸಿದಂತೆ ಸೆಟ್ ಟಾಪ್ ಬಾಕ್ಸ್ ಬೆಲೆ ಏರಿಕೆಯಾಗಲಿದೆ. ಒಟ್ಟಾರೆ ವೀಕ್ಷಕರು ನಿಜಕ್ಕೂ ತೀವ್ರ ಗೊಂದಲಗಳಿಗೆ ಈಡಾಗಿದ್ದಾರೆ. ಕೆಲ ವೀಕ್ಷಕರಂತೂ ಸೆಟ್‌ಟಾಪ್ ಬಾಕ್ಸ್ ಸಹವಾಸವೂ ಬೇಡ. ಕೇಬಲ್ ಕೂಡಾ ಬೇಡ ಎಂದು ಡಿಟಿಎಚ್ ಹಾಕಿಕೊಳ್ಳಲು ಮುಂದಾಗುತ್ತಿದ್ದಾರೆ.












Click it and Unblock the Notifications