ಮಕ್ಕಳ ಬೈದ ಅಜ್ಜ ಬರ್ಬರವಾಗಿ ಕೊಲೆಯಾದ

ಕೊಲೆಯಾದ ವ್ಯಕ್ತಿಯನ್ನು ಸೊಪ್ಪಿನ ವ್ಯಾಪಾರಿ ವೆಂಕಟಸ್ವಾಮಿ (80) ಎಂದು ಗುರುತಿಸಲಾಗಿದೆ. ಮೃತ ವೆಂಕಟಸ್ವಾಮಿ ತುಮಕೂರು ಜಿಲ್ಲೆ ತುರುವೇಕೆರೆ ಮೂಲದವರು ಎಂದು ತಿಳಿದು ಬಂದಿದೆ.. ಕೊಲೆಗೈದ ಆರೋಪಿಯನ್ನು ವೆಂಕಟಸ್ವಾಮಿಯ ಸ್ನೇಹಿತ ಲಕ್ಷ್ಮಣ್ (40) ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ವೇಳೆ ವೆಂಕಟಸ್ವಾಮಿ ಹಾಗೂ ಲಕ್ಷ್ಮಣ್ ಮದ್ಯ ಸೇವಿಸಿ ಇಲ್ಲಿನ ಕಬ್ಬನ್‌ಪೇಟೆ ವೃತ್ತದ ಬಳಿಯ ಮಾತನಾಡುತ್ತಾ ಕುಳಿತ್ತಿದ್ದರು.
ಈ ವೇಳೆ ವೆಂಕಟಸ್ವಾಮಿ ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ. ಬೀದಿಯಲ್ಲಿ ಓಡಾಡುತ್ತಿದ್ದ ಹೆಂಗಸರ ಮೇಲೆ ಕಣ್ಣು ಹಾಕಿದ್ದಾರೆ, ಈ ಸಂಬಂಧ ಇಬ್ಬರ ಮಧ್ಯೆ ಜಗಳ ನಡೆದಿದೆ ಎಂದು ಹೇಳಲಾಗಿದೆ.
ಇಬ್ಬರ ನಡುವೆ ಮಾತಿನ ಚಕಮಕಿ ಹೆಚ್ಚಾದಾಗ ಕೋಪಗೊಂಡ ಲಕ್ಷ್ಮಣ್, ತನ್ನ ಸ್ನೇಹಿತ ವೆಂಕಟಸ್ವಾಮಿ ತಲೆಗೆ ಕಬ್ಬಿಣದ ರಾಡ್‌ನಿಂದ ಬಲವಾಗಿ ಹೊಡೆದಿದ್ದಾನೆ. ತಲೆಗೆ ಪೆಟ್ಟು ತಗುಲಿ ರಕ್ತ ಸ್ರಾವದಿಂದ ಬಳಲುತ್ತಿದ್ದ ವೆಂಕಟಸ್ವಾಮಿ ಅವರನ್ನು ನಿಮ್ಹಾನ್ಸ್ ಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹಲಸೂರು ಗೇಟ್ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ನಡೆದಿದ್ದು ಏನು?: ರಸ್ತೆ ಬದಿ ಆಟವಾಡುತ್ತಿದ್ದ ಮಕ್ಕಳನ್ನು ಅಶ್ಲೀಲವಾಗಿ ಬೈಯುತ್ತಿದ್ದ ವೆಂಕಟಸ್ವಾಮಿ ಕುಡಿದಿದ್ದರು. ಮತ್ತೇರಿರುವುದರಿಮ್ದ ಮಾಮೂಲಿಯಾಗಿ ಬೈದಾಡುತ್ತಿದ್ದಾರೆ ಎಂದುಕೊಂಡು ಸ್ನೇಹಿತ ಲಕ್ಷ್ಮಣ್ ಸುಮ್ಮನ್ನಿದ್ದರು. ಆದರೆ, ಹೆಂಗಸರ ಕಡೆ ತಿರುಗಿ ಕೈ ಸನ್ನೆ ಬಾಯಿ ಸನ್ನೆ ಮಾಡುತ್ತಾ ಅಶ್ಲೀಲ ಪದ ಬಳಕೆ ಮಾಡಿ ಕಿಚಾಯಿಸಲು ವೆಂಕಟಸ್ವಾಮಿ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕೋಪಗೊಂಡ ಲಕ್ಷ್ಮಣ್ ಅವರು ವೆಂಕಟಸ್ವಾಮಿ ಕೆನ್ನೆಗೆ ಬಾರಿಸಿ ಬುದ್ಧಿ ಹೇಳಿದ್ದಾರೆ.
ಆದರೆ, ಕುಡಿದ ಮತ್ತಿನಲ್ಲಿದ್ದ ವೆಂಕಟಸ್ವಾಮಿಗೆ ತನ್ನ ತಪ್ಪಿನ ಅರಿವಾಗದೆ ಪುನಃ ಮಹಿಳೆಯರ ಮೇಲೆ ಕಣ್ಣು ಹಾಕಿದ್ದಾರೆ. ನಂತರ ಜೋರು ಜಗಳ ನಡೆದು ಲಕ್ಷ್ಮಣ್ ರಾಡಿನಿಂದ ಹೊಡೆದು ವೆಂಕಟಸ್ವಾಮಿ ಹತ್ಯೆಗೈದಿದ್ದಾರೆ. ಕುಡುಕ ಹಾಗೂ ಮುಂಗೋಪಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ಕಂಡು ಸ್ಥಳೀಯರು ಗಾಬರಿಗೊಂಡಿದ್ದಾರೆ.












Click it and Unblock the Notifications