ದೇವರಾಜ್ ಅರಸು ಮೊಮ್ಮಗ ಕೆಜೆಪಿ ಅಭ್ಯರ್ಥಿ
ಮೈಸೂರು, ಏ.15: ರಾಜಕೀಯ ನಾಯಕರ ಮಕ್ಕಳು, ಮೊಮ್ಮಕ್ಕಳು ರಾಜಕೀಯ ಅಖಾಡಕ್ಕೆ ಬರುವುದು ಸಾಮಾನ್ಯ. ಪ್ರಸ್ತುತ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಮೊಮ್ಮಗ ಹುಣಸೂರು ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಹುಣಸೂರು ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೇವರಾಜ್ ಅರಸು ಪುತ್ರಿ ಮಾಜಿ ಸಚಿವೆ ಚಂದ್ರಪ್ರಭಾ ಅರಸು ಅವರ ಪುತ್ರ ಮಂಜುನಾಥ್ ಅರಸು ಅವರನ್ನು ತಮ್ಮ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ.

ಮೂಲತಃ ಮಂಜುನಾಥ್ ಅರಸು ಕೈಗಾರಿಕೋದ್ಯಮಿ. ಬೆಂಗಳೂರಿನಲ್ಲಿ ಕಂಪನಿಯ ವ್ಯವಹಾರ ನೋಡಿಕೊಂಡು ಅಲ್ಲೇ ನೆಲೆಸಿದ್ದಾರೆ. ಆದರೆ, ಅವರ ತವರು ಹುಣಸೂರು ಆದ್ದರಿಂದ, ಈ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಕೆಜೆಪಿ ಏಕೆ : ಮಂಜುನಾಥ್ ಅರಸು ಕಾಂಗ್ರೆಸ್ ಪಕ್ಷದಲ್ಲಿದ್ದರು. ಟಿಕೆಟ್ ಹಂಚಿಕೆಗೂ ಮುನ್ನ ಹುಣಸೂರಿನಲ್ಲಿ ನಡೆದ ಡಿ.ದೇವರಾಜ್ ಅರಸು ಅಭಿಮಾನಿಗಳ ಸಭೆಯಲ್ಲಿ ಚಂದ್ರಪ್ರಭಾ ಅವರ ಪುತ್ರಿ ಅನುಪಮಾ ಅರಸು ಅಥವ ಪುತ್ರ ಮಂಜುನಾಥ್ ಅರಸು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು.
ಅಂದಿನ ಸಭೆಯಲ್ಲಿ ಹಾಜರಿದ್ದ ಕೆಲವು ಕಾಂಗ್ರೆಸ್ ಮುಖಂಡರು ಪಕ್ಷದಿಂದ ಒಬ್ಬರಿಗೆ ಟಿಕೆಟ್ ನೀಡುತ್ತೇವೆ ಎಂದು ಘೋಷಿಸಿದ್ದರು. ಆದರೆ, ನಂತರ ಟಿಕೆಟ್ ಹಂಚಿಕೆಯಲ್ಲಿ ಉಂಟಾದ ಗೊಂದಲ, ಬಂಡಾಯದ ಪರಿಣಾಮ ಹಾಲಿ ಶಾಸಕ ಎಚ್.ಪಿ.ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದ.
ಈ ಪರಿಸ್ಥಿತಿಯನ್ನು ಸರಿಯಾಗಿ ಉಪಯೋಗಿಸಿಕೊಂಡ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಮಂಜುನಾಥ್ ಅರಸು ಅವರನ್ನು ಭೇಟಿ ಮಾಡಿ ಪಕ್ಷದಿಂದ ಹುಣಸೂರು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ. ಎಲ್ಲರೂ ಒಪ್ಪಿಗೆ ನೀಡಿದ ಬಳಿಕ ಮಂಜುನಾಥ್ ಸ್ಪರ್ಧಿಸುವುದಾದಿ ಘೋಷಿಸಿದ್ದಾರೆ.
28 ವರ್ಷಗಳ ಕಾಲ ಹುಣಸೂರು ಕ್ಷೇತ್ರ ಪ್ರತಿನಿಧಿಸಿದ್ದ ಡಿ.ದೇವರಾಜ್ ಅರಸು ರಾಜ್ಯದ ಮುಖ್ಯಮಂತ್ರಿಗಾದಿ ಏರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಪ್ರಸಿದ್ಧಿ ಪಡೆದಿದ್ದರು. ಈ ಕ್ಷೇತ್ರದಿಂದಲೇ ಆಯ್ಕೆಯಾದ ಅರಸರ ಪುತ್ರಿ ಚಂದ್ರಪ್ರಭಾ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಪ್ರಸ್ತುತ ಅರಸು ತಲೆಮಾರಿನ ಮೂರನೇ ಕುಡಿ ರಾಜಕೀಯಕ್ಕಡ ಬರುತ್ತಿದೆ. ಅಜ್ಜ ಮತ್ತು ತಾಯಿಯ ಜನಪ್ರಿಯತೆ ಮಂಜುನಾಥ್ ಅವರ ಬೆನ್ನಿಗೆ ನಿಂತರೆ ಗೆಲುವು ಖಂಡಿತ. ಹುಣಸೂರು ಕ್ಷೇತ್ರದಿಂದ ಮಂಜುನಾಥ್ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸುತ್ತಾರೋ ಕಾದು ನೋಡಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications